
ಮುಂಬೈ: ಐಸಿಸಿ ಏಕದಿನ ವಿಶ್ವಕಪ್ ಗೆದ್ದುಕೊಂಡ ಭಾರತ ತಂಡದಲ್ಲಿರುವ ಮಹಾರಾಷ್ಟ್ರದ ಆಟಗಾರ್ತಿಯರಾದ ಸ್ಮೃತಿ ಮಂದಾನ, ಜೆಮಿಮಾ ರಾಡ್ರಿಗಸ್ ಮತ್ತು ರಾಧಾ ಯಾದವ್ ಅವರನ್ನು ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರು ಶುಕ್ರವಾರ ನಡೆದ ಸಮಾರಂಭದಲ್ಲಿ ಸನ್ಮಾನಿಸಿದರು. ಮೂವರಿಗೂ ತಲಾ ₹2.5 ಕೋಟಿ ನಗದು ಬಹುಮಾನ ನೀಡಲಾಯಿತು.
ಮುಖ್ಯಮಂತ್ರಿ ಅಧಿಕೃತ ನಿವಾಸ ‘ವರ್ಷಾ’ದಲ್ಲಿ ಕಾರ್ಯಕ್ರಮ ನಡೆಯಿತು. ಈ ಮೂವರು ಆಟಗಾರ್ತಿಯರನ್ನು ‘ಮಹಾರಾಷ್ಟ್ರದ ಹೆಮ್ಮೆ’ ಎಂದು ಮುಖ್ಯಮಂತ್ರಿ ಬಣ್ಣಿಸಿದರು.
ಹೋದ ಭಾನುವಾರ ನವಿ ಮುಂಬೈನಲ್ಲಿ ನಡೆದ ಫೈನಲ್‌ನಲ್ಲಿ ಭಾರತ ತಂಡವು 52 ರನ್‌ಗಳಿಂದ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿ ವಿಶ್ವ ಚಾಂಪಿಯನ್ ಆಗಿತ್ತು.
ತಂಡದ ಕೋಚ್ ಅಮೋಲ್ ಮಜುಂದಾರ್ ಅವರಿಗೆ ₹22.5 ಲಕ್ಷ ಮೊತ್ತದ ಚೆಕ್ ನೀಡಿ ಗೌರವಿಸಲಾಯಿತು. ಬೌಲಿಂಗ್ ಕೋಚ್ ಅವಿಷ್ಕಾರ್ ಸಾಳ್ವಿ, ಮಾಜಿ ದಿಗ್ಗಜ ಆಟಗಾರ್ತಿ ಡಯಾನ ಎಡುಲ್ಜಿ, ವಿಡಿಯೊ ಅನಲಿಸ್ಟ್ ಅನಿರುದ್ಧ ದೇಶಪಾಂಡೆ ಅವರಿಗೂ ನಗದು ಬಹುಮಾನ ನೀಡಲಾಯಿತು.
(ಹೈದರಾಬಾದ್ ವರದಿ/ ಪ್ರಜಾವಾಣಿ ವಾರ್ತೆ): ಮಹಿಳಾ ವಿಶ್ವಕಪ್ ತಂಡದಲ್ಲಿದ್ದ ಸ್ಪಿನ್ ಬೌಲರ್ ಶ್ರೀಚರಣಿ ಅವರಿಗೆ ಆಂಧ್ರ ಸರ್ಕಾರವು ಶುಕ್ರವಾರ ₹2.5 ಕೋಟಿ ನಗದು ಬಹುಮಾನ ಘೋಷಿಸಿದೆ. ವಸತಿ ನಿವೇಶನ ಮತ್ತು ಗ್ರೂಪ್1 ಸರ್ಕಾರಿ ಉದ್ಯೋಗ ನೀಡುವುದಾಗಿಯೂ ಪ್ರಕಟಿಸಿದೆ.
ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರು ಅಮರಾವತಿಯಲ್ಲಿ ಶ್ರೀ ಚರಣೀ ಮತ್ತು ಭಾರತ ತಂಡದ ಮಾಜಿ ನಾಯಕಿ ಮಿತಾಲಿ ರಾಜ್ ಅವರನ್ನು ಭೇಟಿಯಾದ ವೇಳೆ ಈ ಕೊಡುಗೆ ಪ್ರಕಟಿಸಿದರು.
ಕಡಪ ಜಿಲ್ಲೆಯವರಾದ ಶ್ರೀಚರಣಿ ಅವರು ವಿಜಯವಾಡದ ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ ಸಂಭ್ರಮದ ಸ್ವಾಗತ ನೀಡಲಾಯಿತು. ಮೂವರು ಸಚಿವರು ಅವರನ್ನು ಎದುರ್ಗೊಂಡರು.
ವಿಶ್ವಕಪ್ ಗೆದ್ದ ಭಾರತ ತಂಡದ ಪ್ರತಿಯೊಬ್ಬ ಆಟಗಾರ್ತಿಗೆ ಹೊಸದಾಗಿ ಬಿಡುಗಡೆಯಾಗಲಿರುವ ಟಾಟಾ ಸಿಯೆರಾ ಕಾರು ಉಡುಗೊರೆಯಾಗಿ ನೀಡುವುದಾಗಿ ಟಾಟಾ ಮೋಟರ್ಸ್ ಗುರುವಾರ ಎಕ್ಸ್‌ನಲ್ಲಿ ತಿಳಿಸಿದೆ.