ದುಬೈ: ಉತ್ತಮ ಲಯದಲ್ಲಿರುವ ಭಾರತ ತಂಡದ ಆರಂಭ ಆಟಗಾರ್ತಿ ಸ್ಮೃತಿ ಮಂದಾನ ಅವರು ಮಂಗಳವಾರ ಪ್ರಕಟಗೊಂಡ ಐಸಿಸಿ ಮಹಿಳಾ ಏಕದಿನ ರ್‍ಯಾಂಕಿಂಗ್‌ನಲ್ಲಿ ಬ್ಯಾಟರ್‌ಗಳ ವಿಭಾಗದಲ್ಲಿ ಎರಡನೇ ಕ್ರಮಾಂಕಕ್ಕೆ ಏರಿದ್ದಾರೆ. ಐರ್ಲೆಂಡ್ ವಿರುದ್ಧ ಇತ್ತೀಚಿನ ಸರಣಿಯಲ್ಲಿ ಸ್ಮೃತಿ ಉತ್ತಮವಾಗಿ ಆಡಿದ್ದರು.
28 ವರ್ಷ ವಯಸ್ಸಿನ ಮಂದಾನ ಅವರು ಅಗ್ರ ಹತ್ತರಲ್ಲಿ ಸ್ಥಾನ ಪಡೆದಿರುವ ಭಾರತದ ಏಕೈಕ ಆಟಗಾರ್ತಿ. ಅವರು ಕೊನೆಯ ಏಕದಿನ ಪಂದ್ಯದಲ್ಲಿ 135 ರನ್ ಸಿಡಿಸಿದ್ದರು. ಅದಕ್ಕೆ ಮೊದಲಿನ ಎರಡು ಪಂದ್ಯಗಳಲ್ಲಿ ಕ್ರಮವಾಗಿ 41 ಮತ್ತು 73 ರನ್ ಬಾರಿಸಿದ್ದರು.
ಮಂದಾನ 738 ಪಾಯಿಂಟ್ಸ್ ಕಲೆಹಾಕಿದ್ದಾರೆ. ದಕ್ಷಿಣ ಆಫ್ರಿಕಾದ ಲಾರಾ ವೋಲ್ವಾರ್ಟ್ (773) ಅಗ್ರಸ್ಥಾನದಲ್ಲಿದ್ದರೆ, ಶ್ರೀಲಂಕಾದ ಚಮಾರಿ ಅಟ್ಟಪಟ್ಟು (733 ಪಾಯಿಂಟ್ಸ್) ಮೂರನೇ ಸ್ಥಾನದಲ್ಲಿದ್ದಾರೆ.
ಜೆಮಿಮಾ ರಾಡ್ರಿಗಸ್ ಎರಡು ಸ್ಥಾನ ಬಡ್ತಿ ಪಡೆದು 17ನೇ ಸ್ಥಾನದಲ್ಲಿದ್ದಾರೆ. ನಾಯಕಿ ಹರ್ಮನ್‌ಪ್ರೀತ್ ಕೌರ್ 15ನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಐರ್ಲೆಂಡ್ ವಿರುದ್ಧ ಸರಣಿಯಲ್ಲಿ ಹರ್ಮನ್‌ಪ್ರೀತ್ ಆಡಿರಲಿಲ್ಲ.
ದೀಪ್ತಿ ಶರ್ಮಾ 344 ಪಾಯಿಂಟ್ಸ್ ಕಲೆಹಾಕಿದ್ದು ಆಲ್‌ರೌಂಡರ್‌ಗಳ ವಿಭಾಗದಲ್ಲಿ ಆರನೇ ಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯಾದ ಆ್ಯಶ್ಲೆ ಗಾರ್ಡನರ್ ಅವರು ಅಗ್ರಸ್ಥಾನಕ್ಕೆ ಏರಿದ್ದಾರೆ. ಈ ಹಿಂದೆ ದಕ್ಷಿಣ ಆಫ್ರಿಕಾದ ಅನುಭವಿ ಮರೈಝನ್ ಕಾಪ್ ಅವರು ಮೊದಲ ಸ್ಥಾನದಲ್ಲಿದ್ದರು.
ಬೌಲರ್‌ಗಳ ರ್‍ಯಾಂಕಿಂಗ್‌ನಲ್ಲಿ ಇಂಗ್ಲೆಂಡ್‌ನ ಎಡಗೈ ಸ್ಪಿನ್ನರ್ ಸೋಫಿ ಎಕ್ಲೆಸ್ಟೋನ್ ಮೊದಲ ಸ್ಥಾನದಲ್ಲಿದ್ದಾರೆ. ಭಾರತದ ಆಫ್ ಸ್ಪಿನ್ನರ್ ದೀಪ್ತಿ ಶರ್ಮಾ ಅವರಿಗೆ ಬಡ್ತಿ ದೊರಕಿದ್ದು, ನಾಲ್ಕನೇ ಸ್ಥಾನಕ್ಕೆ ಜಿಗಿದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.