ADVERTISEMENT

ICC World Cup–2023 ವೇಳಾಪಟ್ಟಿ ಪ್ರಕಟ: ಭಾರತ–ಪಾಕ್ ಹಣಾಹಣಿಗೆ ಮುಹೂರ್ತ ನಿಗದಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಜೂನ್ 2023, 7:29 IST
Last Updated 27 ಜೂನ್ 2023, 7:29 IST
   

ಬೆಂಗಳೂರು: ಭಾರತದಲ್ಲಿ ನಡೆಯಲಿರುವ ಈ ಬಾರಿಯ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯ ವೇಳಾಪಟ್ಟಿಯನ್ನು ಅಂತರರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ) ಬಿಡುಗಡೆ ಮಾಡಿದೆ.

ಅಕ್ಟೋಬರ್‌ 5 ರಿಂದ ನವೆಂಬರ್‌ 19ರ ವರೆಗೆ ನಡೆಯುವ ಈ ಟೂರ್ನಿಯು ದೇಶದ 10 ನಗರಗಳಲ್ಲಿ ನಡೆಯಲಿದ್ದು, ಅಹಮದಾಬಾದ್‌ನಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಫೈನಲ್‌ ಆಯೋಜನೆಗೊಳ್ಳಲಿದೆ.

ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಕಳೆದ ಬಾರಿಯ ಚಾಂಪಿಯನ್‌ ಇಂಗ್ಲೆಂಡ್‌ ಮತ್ತು ರನ್ನರ್ಸ್ ಅಪ್‌ ನ್ಯೂಜಿಲೆಂಡ್‌ ಕಣಕ್ಕಿಳಿಯಲಿವೆ.

ADVERTISEMENT

ವಿಶ್ವಕಪ್‌ನ ಆತಿಥ್ಯ ವಹಿಸಿರುವ ಭಾರತ ಅಕ್ಟೋಬರ್‌ 8ರಂದು ತನ್ನ ಮೊದಲ ಪಂದ್ಯ ಆಡಲಿದೆ. ಈ ಹಣಾಹಣಿಯು ಐದು ಬಾರಿಯ ಚಾಂಪಿಯನ್‌ ಆಸ್ಟ್ರೇಲಿಯಾ ಎದುರು ಚೆನ್ನೈನಲ್ಲಿ ನಡೆಯಲಿದೆ. 

10 ತಂಡಗಳು ಭಾಗಿ
ಟೂರ್ನಿಯಲ್ಲಿ ಒಟ್ಟು 10 ತಂಡಗಳು ಕಣಕ್ಕಿಳಿಯಲಿವೆ. ಮೊದಲ ಎಂಟು ತಂಡಗಳು ಈಗಾಗಲೇ ಅರ್ಹತೆ ಗಿಟ್ಟಿಸಿವೆ. ಜಿಂಬಾಬ್ವೆಯಲ್ಲಿ ನಡೆಯುತ್ತಿರುವ ಅರ್ಹತಾ ಸುತ್ತಿನ ಪಂದ್ಯಗಳು ಮುಗಿದ ಬಳಿಕ ಉಳಿದೆರಡು ತಂಡಗಳು ಯಾವುವು ಎಂಬುದು ಗೊತ್ತಾಗಲಿದೆ.

ಭಾರತ, ಆಸ್ಟ್ರೇಲಿಯಾ, ಪಾಕಿಸ್ತಾನ, ನ್ಯೂಜಿಲೆಂಡ್‌, ಇಂಗ್ಲೆಂಡ್‌, ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ ಹಾಗೂ ಅಫ್ಗಾನಿಸ್ತಾನ ನೇರವಾಗಿ ಟೂರ್ನಿಯಲ್ಲಿ ಆಡಲಿವೆ. ಉಳಿದೆರಡು ಸ್ಥಾನಕ್ಕಾಗಿ ವೆಸ್ಟ್‌ ಇಂಡೀಸ್‌, ಶ್ರೀಲಂಕಾ, ಜಿಂಬಾಬ್ವೆ ಹಾಗೂ ಇತರ ತಂಡಗಳು ಪೈಪೋಟಿ ನಡೆಸುತ್ತಿವೆ.

ಪ್ರತಿ ತಂಡ ತಲಾ 9 ಪಂದ್ಯಗಳನ್ನು ಆಡಲಿದೆ. ಅಗ್ರ 4 ಸ್ಥಾನಗಳಲ್ಲಿ ಉಳಿಯುವ ತಂಡಗಳು ಸೆಮಿಫೈನಲ್‌ ಟಿಕೆಟ್ ಗಿಟ್ಟಿಸಲಿವೆ.

ಅಕ್ಟೋಬರ್‌ 15ಕ್ಕೆ ಭಾರತ–ಪಾಕಿಸ್ತಾನ ಸೆಣಸಾಟ
ಸಾಂಪ್ರದಾಯಿಕ ಎದುರಾಳಿಗಳೆನಿಸಿರುವ ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್‌ ತಂಡಗಳು ಅಕ್ಟೋಬರ್‌ 15 ರಂದು ಮುಖಾಮುಖಿಯಾಗಲಿವೆ. ಈ ಹೈವೋಲ್ಟೇಜ್ ಪಂದ್ಯಕ್ಕೆ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣ ವೇದಿಕೆಯಾಗಲಿದೆ. ಭಾರತ ತಂಡವನ್ನು ರೋಹಿತ್‌ ಶರ್ಮ ಮತ್ತು ಪಾಕಿಸ್ತಾನ ಪಡೆಯನ್ನು ಬಾಬರ್ ಅಜಂ ಮುನ್ನಡೆಸಲಿದ್ದಾರೆ.

ಟೂರ್ನಿ ನಡೆಯುವ ನಗರಗಳು
*
ಹೈದರಾಬಾದ್‌
* ಅಹಮದಾಬಾದ್‌
* ದೆಹಲಿ
* ಚೆನ್ನೈ
* ಧರ್ಮಶಾಲಾ
* ಲಖನೌ
* ಪುಣೆ
* ಬೆಂಗಳೂರು
* ಮುಂಬೈ
* ಕೋಲ್ಕತ್ತ

‌ಗುವಾಹಟಿ ಮತ್ತು ತಿರುವನಂತಪುರ ಕ್ರೀಡಾಂಗಣಗಳಲ್ಲಿ ಸೆಪ್ಟೆಂಬರ್‌ 29ರಿಂದ ಅಕ್ಟೋಬರ್‌ 3ರ ವರೆಗೆ ಅಭ್ಯಾಸ ಪಂದ್ಯಗಳು ನಡೆಯಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.