ADVERTISEMENT

ಐಸಿಸಿ ಏಕದಿನ ವಿಶ್ವಕಪ್: ಆಯ್ಕೆಯ ನಿರೀಕ್ಷೆಯಲ್ಲಿ ಮಯಂಕ್ ಅಗರವಾಲ್, ಮನೀಷ್ ಪಾಂಡೆ

ಅಂತಿಮ ಹಂತದ ಸಿದ್ಧತೆಯಲ್ಲಿ ಬಿಸಿಸಿಐ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2019, 4:50 IST
Last Updated 14 ಫೆಬ್ರುವರಿ 2019, 4:50 IST
ಮಯಂಕ್ ಅಗರವಾಲ್ ಮತ್ತು ಮನೀಷ್ ಪಾಂಡೆ
ಮಯಂಕ್ ಅಗರವಾಲ್ ಮತ್ತು ಮನೀಷ್ ಪಾಂಡೆ   

ನವದೆಹಲಿ: ಮುಂದಿನ ಮೇ ತಿಂಗಳಿನಲ್ಲಿ ಆರಂಭವಾಗಲಿರುವ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ ನಡೆಯಲಿದೆ. ಅದಕ್ಕಾಗಿ ಭಾರತ ತಂಡದ ಆಯ್ಕೆ ಮಾಡಲು ಬಿಸಿಸಿಐ ಅಂತಿಮ ಹಂತದ ಸಿದ್ಧತೆಗಳನ್ನು ಆರಂಭಿಸಿದೆ.

ಅದರಿಂದಾಗಿ ಇದೇ 23ರಿಂದ ಭಾರತವು ಆತಿಥ್ಯ ವಹಿಸಲಿರುವ ಆಸ್ಟ್ರೇಲಿಯಾ ಎದುರಿನ ಟ್ವೆಂಟಿ–20 ಮತ್ತು ಏಕದಿನ ಕ್ರಿಕೆಟ್‌ ಸರಣಿಗಳು ಮಹತ್ವ ಪಡೆದುಕೊಂಡಿವೆ. ಭಾರತ ತಂಡವು ವಿಶ್ವಕಪ್ ಟೂರ್ನಿಗೂ ಮುನ್ನ ಆಡಲಿರುವ ಪ್ರಮುಖ ದ್ವಿಪಕ್ಷೀಯ ಸರಣಿಯಾಗಲಿದೆ.

ಈ ಸರಣಿಗಾಗಿ ಗುರುವಾರ ಆಯ್ಕೆ ನಡೆಯಲಿದೆ. ಈ ಬಾರಿಯ ರಣಜಿ ಟ್ರೋಫಿ ಟೂರ್ನಿಯ ಸೆಮಿಫೈನಲ್‌ನಲ್ಲಿ ಸೋತ ಕರ್ನಾಟಕ ತಂಡದ ನಾಯಕ ಮನೀಷ್ ಪಾಂಡೆ ಮತ್ತು ಆರಂಭಿಕ ಬ್ಯಾಟ್ಸ್‌ಮನ್ ಮಯಂಕ್ ಅಗರವಾಲ್ ಅವರು ತಂಡದಲ್ಲಿ ಸ್ಥಾನ ಪಡೆಯುವ ನಿರೀಕ್ಷೆಯಲ್ಲಿದ್ದಾರೆ.

ADVERTISEMENT

ನ್ಯೂಜಿಲೆಂಡ್ ನಲ್ಲಿ ಈಚೆಗೆ ನಡೆದಿದ್ದ ಏಕದಿನ ಸರಣಿಯ ಕೊನೆಯ ಎರಡು ಪಂದ್ಯಗಳು ಮತ್ತು ಟ್ವೆಂಟಿ–20 ಟೂರ್ನಿಯಿಂದ ವಿಶ್ರಾಂತಿ ಪಡೆದಿದ್ದ ವಿರಾಟ್ ಕೊಹ್ಲಿ ಮರಳುವುದು ಖಚಿತವಾಗಿದೆ. ಆದ್ದರಿಂದ ರೋಹಿತ್ ಶರ್ಮಾ ವಿಶ್ರಾಂತಿ ಪಡೆಯಬಹುದು. ಶಿಖರ್ ಧವನ್ ಸ್ಥಾನ ಉಳಿಸಿಕೊಳ್ಳುವುದು ಖಚಿತ. ಹೋದ ಡಿಸೆಂಬರ್‌ನಲ್ಲಿ ಅಸ್ಟ್ರೇಲಿಯಾ ಎದುರಿನ ಟೆಸ್ಟ್‌ನಲ್ಲಿ ಪದಾರ್ಪಣೆ ಮಾಡಿದ್ದ ಮಯಂಕ್ ಅಗರವಾಲ್ ಉತ್ತಮವಾಗಿ ಆಡಿದ್ದರು. ನಾಗಪುರದಲ್ಲಿ ನಡೆಯುತ್ತಿರುವ ಇರಾನಿ ಟ್ರೋಫಿ ಪಂದ್ಯದಲ್ಲಿಯೂ ಅವರು ಮಂಗಳವಾರ 95 ರನ್ ಗಳಿಸಿದ್ದರು. ಆದ್ದರಿಂದ ಅವರಿಗೆ ಏಕದಿನ ಬಳಗದಲ್ಲಿ ಆಡುವ ಅವಕಾಶ ದೊರೆಯಬಹುದು.

ನ್ಯೂಜಿಲೆಂಡ್ ಸರಣಿಗೆ ಮನೀಷ್ ಪಾಂಡೆ ಅವರನ್ನು ಆಯ್ಕೆ ಮಾಡಲಾಗಿರಲಿಲ್ಲ. ಆದರೆ ರಣಜಿ ಟ್ರೋಫಿ ಟೂರ್ನಿಯಲ್ಲಿ ಅವರು ರನ್‌ಗಳ ರಾಶಿ ಹಾಕಿದ್ದರು. ಆ ಮೂಲಕ ತಮ್ಮ ಸಾಮರ್ಥ್ಯವನ್ನು ಆಯ್ಕೆ ಸಮಿತಿಗೆ ತಿಳಿಸಿದ್ದರು. ಅಂಬಟಿ ರಾಯುಡು ಆಯ್ಕೆಯಾಗದೇ ಹೋದರೆ ಮನೀಷ್ ಸ್ಥಾನ ಗಳಿಸಬಹುದು. ಉಳಿದಂತೆ ಮೂವರು ಸ್ಪಿನ್ನರ್‌ಗಳಾದ ಕುಲದೀಪ್ ಯಾದವ್, ಯಜುವೇಂದ್ರ ಚಾಹಲ್ ಮತ್ತು ರವೀಂದ್ರ ಜಡೇಜ, ಮಧ್ಯಮವೇಗಿಗಳಾದ ಮೊಹಮ್ಮದ್ ಶಮಿ, ಭುವನೇಶ್ವರ್ ಕುಮಾರ್ ಆಯ್ಕೆಯಾಗುವುದು ಬಹುತೇಕ ಖಚಿತ. ಜಸ್‌ಪ್ರೀತ್ ಬೂಮ್ರಾ ಕೂಡ ಮರಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.