ಮಯಂಕ್ ಯಾದವ್
ಪಿಟಿಐ ಚಿತ್ರ
ನವದೆಹಲಿ: ಹಾಲಿ ಐಪಿಎಲ್‌ನ ವೇಗದ ಬೌಲಿಂಗ್ ತಾರೆ ಮಯಂಕ್ ಯಾದವ್ ಈ ಆವೃತ್ತಿಯ ಉಳಿದ ಪಂದ್ಯಗಳಲ್ಲಿ ಆಡುವುದು ಅನುಮಾನವಾಗಿದೆ. ಮುಂಬೈ ಇಂಡಿಯನ್ಸ್ ವಿರುದ್ಧ ಮಂಗಳವಾರ ನಡೆದ ಪಂದ್ಯದ ವೇಳೆ ಲಖನೌ ಸೂಪರ್ ಜೈಂಟ್ಸ್ ತಂಡದ ಈ ಬೌಲರ್ ಕಿಬ್ಬೊಟ್ಟೆಯ ಸ್ನಾಯು ಸೆಳೆತಕ್ಕೆ ಒಳಗಾಗಿದ್ದಾರೆ.
21 ವರ್ಷದ ಮಯಂಕ್ ನಾಲ್ಕು ವಾರಗಳಲ್ಲಿ ಎರಡನೇ ಸಲ ಗಾಯಾಳಾಗಿದ್ದಾರೆ. ಆದರೆ ಅವರಿಗೊಂದು ಶುಭ ಸುದ್ದಿಯೂ ಇದೆ. ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು ಉಮ್ರಾನ್ ಮಲಿಕ್, ವಿದ್ವತ್ ಕಾವೇರಪ್ಪ, ವೈಶಾಖ ವಿಜಯಕುಮಾರ್, ಯಶ್ ದಯಾಳ್ ಮತ್ತು ಆಕಾಶ್ ದೀಪ್ ಜೊತೆ ಮಯಂಕ್ ಅವರನ್ನೂ ವೇಗದ ಬೌಲಿಂಗ್ ಗುತ್ತಿಗೆಯಡಿ ತರಲು ಸಜ್ಜಾಗಿದೆ.
ಈ ಗುತ್ತಿಗೆಯಡಿ ಬರುವ ಆಟಗಾರನಿಗೆ, ಫಿಟ್ನೆಸ್ ಮತ್ತು ಗಾಯದ ಸಮಸ್ಯೆಯಾದಲ್ಲಿ ಅವರು ನೇರವಾಗಿ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ (ಎನ್‌ಸಿಎ) ವೈದ್ಯಕೀಯ ತಂಡದ ಮೇಲ್ವಿಚಾರಣೆಯಲ್ಲಿ ಚಿಕಿತ್ಸೆ ಪಡೆದು, ಪುನಶ್ಚೇತನ ಶಿಬಿರದ ಪ್ರಯೋಜನ ಪಡೆಯುವರು.
‘ಮಯಂಕ್ ಅವರಿಗೆ ಆಗಿರುವ ಸ್ನಾಯುವಿನ ಸಮಸ್ಯೆ ಆರಂಭದ ಹಂತದಲ್ಲಿದೆ. ಆದರೆ ಅವರು ಉಳಿದ ಪಂದ್ಯಗಳಲ್ಲಿ ಆಡುವುದು ಅನುಮಾನ‘ ಎಂದು ಬಿಸಿಸಿಐನ ಮೂಲವೊಂದು ಪಿಟಿಐಗೆ ತಿಳಿಸಿದೆ.
ಈ ಬಾರಿಯ ಐಪಿಎಲ್‌ನಲ್ಲಿ 155 ಕಿ.ಮೀ.ಗೂ ಎಸೆತಗಳನ್ನು ಪ್ರಯೋಗಿಸಿದ್ದ ಮಯಂಕ್ ಆರು ವಿಕೆಟ್ ಪಡೆದಿದ್ದು ತಂಡದ ಗೆಲುವಿಗೆ ಕಾರಣರಾಗಿದ್ದರು. ಆ ಎರಡೂ ಪಂದ್ಯಗಳಲ್ಲಿ ತಲಾ ಮೂರು ವಿಕೆಟ್ ಪಡೆದು ಪಂದ್ಯ ಶ್ರೇಷ್ಠರಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.