ಸಚಿನ್ ತೆಂಡೂಲ್ಕರ್
(ಪಿಟಿಐ ಚಿತ್ರ)
ಮೆಲ್ಬರ್ನ್: ಕ್ಲಬ್‌ನ ಗೌರವಾನ್ವಿತ ಸದಸ್ಯರಾಗುವಂತೆ ನೀಡಿದ್ದ ಆಹ್ವಾನವನ್ನು ಭಾರತದ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರು ಒಪ್ಪಿಕೊಂಡಿದ್ದಾರೆ ಎಂದು ಆಸ್ಟ್ರೇಲಿಯಾದ ಪ್ರತಿಷ್ಠಿತ ಮೆಲ್ಬರ್ನ್ ಕ್ರಿಕೆಟ್ ಕ್ಲಬ್(ಎಂಸಿಸಿ) ತಿಳಿಸಿದೆ.
1838ರಲ್ಲಿ ಸ್ಥಾಪನೆಗೊಂಡ ಎಂಸಿಸಿ ಆಸ್ಟ್ರೇಲಿಯಾದ ಅತ್ಯಂತ ಹಳೆಯ ಕ್ಲಬ್ ಆಗಿದೆ. ಮೆಲ್ಬರ್ನ್ ಕ್ರಿಕೆಟ್ ಮೈದಾನದ(ಎಂಸಿಜಿ) ನಿರ್ವಹಣೆ ಮತ್ತು ಅಭಿವೃದ್ಧಿ ಕುರಿತಾದ ನಿರ್ವಹಣೆಯನ್ನು ಎಂಸಿಸಿ ಮಾಡುತ್ತದೆ. ಕ್ರಿಕೆಟ್‌ನ ಪ್ರತಿಷ್ಠಿತ ಮೈದಾನಗಳಲ್ಲಿ ಎಂಸಿಜಿ ಸಹ ಒಂದಾಗಿದೆ.
‘ಕ್ರಿಕೆಟ್‌ಗೆ ನೀಡಿರುವ ಅದ್ಭುತ ಕೊಡುಗೆಯನ್ನು ಪರಿಗಣಿಸಿ ಕ್ಲಬ್‌ನ ಗೌರವಾನ್ವಿತ ಸದಸ್ಯರಾಗುವಂತೆ ಕಳುಹಿಸಿದ್ದ ಆಹ್ವಾನವನ್ನು ಭಾರತದ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಒಪ್ಪಿಕೊಂಡಿದ್ದಾರೆ ಎಂದು ಘೋಷಿಸಲು ಎಂಸಿಸಿ ಹರ್ಷಿಸುತ್ತದೆ’ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಎಂಸಿಜಿಯಲ್ಲಿ ಅತ್ಯಧಿಕ ರನ್ ಗಳಿಸಿರುವ ದಾಖಲೆಯನ್ನು ಸಚಿನ್ ಹೊಂದಿದ್ದಾರೆ. 5 ಟೆಸ್ಟ್ ಪಂದ್ಯಗಳಲ್ಲಿ 44.90ರ ಸರಾಸರಿ, 58.69 ಸ್ಟ್ರೈಕ್ ರೇಟ್‌ನಲ್ಲಿ 449 ರನ್ ಗಳಿಸಿದ್ದಾರೆ.
2012ರಲ್ಲಿ ಆಸ್ಟ್ರೇಲಿಯಾದ ಅತ್ಯುನ್ನತ ಪ್ರಶಸ್ತಿಯಾದ ’ಆರ್ಡರ್ ಆಫ್ ಆಸ್ಟ್ರೇಲಿಯಾ’ಗೌರವವನ್ನು ಸಚಿನ್ ಅವರಿಗೆ ನೀಡಲಾಗಿತ್ತು.
ಮೇಲ್ಬರ್ನ್ ಕ್ರೀಡಾಂಗಣದಲ್ಲಿ ಸದ್ಯ, ಭಾರತ–ಆಸ್ಟ್ರೇಲಿಯಾ ನಡುವಿನ 4ನೇ ಟೆಸ್ಟ್ ಕ್ರಿಕೆಟ್ ಪಂದ್ಯ ನಡೆಯುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.