ADVERTISEMENT

ಬೌಂಡರಿ ಕ್ಯಾಚ್‌ಗಳಿಗೆ ಕಡಿವಾಣ ಹಾಕಿದ ಎಂಸಿಸಿ

ಬನಿ ಹಾಪ್ಸ್‌ ಕ್ಯಾಚ್‌ ಪರಿಷ್ಕೃತ ನಿಯಮ ಇದೇ ತಿಂಗಳು ಜಾರಿಗೆ

​ಪ್ರಜಾವಾಣಿ ವಾರ್ತೆ
Published 14 ಜೂನ್ 2025, 18:35 IST
Last Updated 14 ಜೂನ್ 2025, 18:35 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಲಂಡನ್ (ಪಿಟಿಐ): ಕ್ರಿಕಟ್‌ನಲ್ಲಿ  ಬೌಂಡರಿ ಲೈನ್‌ ಕ್ಯಾಚ್‌ಗಳ ನಿಯಮವನ್ನು ಪರಿಷ್ಕರಿಸಲಾಗಿದೆ. ಬೌಂಡರಿಗೆರೆಯಾಚೆ ಚೆಂಡನ್ನು ಬಹುಸ್ಪರ್ಷದೊಂದಿಗೆ ಅಥವಾ ಬನಿ ಹಾಪ್ಸ್‌ ಮೂಲಕ ಕ್ಯಾಚ್‌ ಪಡೆಯುವುದು ನಿಯಮಬಾಹಿರ ಎಂದು ಮೆರಿಲ್‌ಬೋನ್ ಕ್ರಿಕೆಟ್ ಕ್ಲಬ್ (ಎಂಸಿಸಿ) ಹೇಳಿದೆ. 

ಪರಿಷ್ಕೃತ ನಿಯಮವನ್ನು ಇದೇ ತಿಂಗಳು ಐಸಿಸಿ ಪ್ಲೇಯಿಂಗ್ ಕಂಡಿಷನ್‌ ನಿಯಮಗಳಲ್ಲಿ ಸೇರಿಸಲಾಗುವುದು. ಮುಂದಿನ ವರ್ಷದ ಅಕ್ಟೋಬರ್‌ನಿಂದ ಪೂರ್ಣಪ್ರಮಾಣದಲ್ಲಿ ಜಾರಿಗೆ ತರಲಾಗುವುದು. 

2023ರ ಬಿಗ್‌ಬ್ಯಾಷ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಮೈಕೆಲ್ ನೆಸೆರ್ ಪಡೆದಿದ್ದ ರೋಮಾಂಚನಕಾರಿ ಬೌಂಡರಿಲೈನ್ ಕ್ಯಾಚ್‌ ಮತ್ತು 2020ರಲ್ಲಿ ಟಾಮ್ ಬೆಂಟನ್ ಮತ್ತು ಮ್ಯಾಟ್ ರೆನ್‌ಶಾ ಅವರಿಬ್ಬರು ಸೇರಿ ಬೌಂಡಿಗೆರೆಯ ಸಮೀಪ ಪಡೆದಿದ್ದ ಕ್ಯಾಚ್‌ಗಳನ್ನು ನಿಯಮಬದ್ಧವೆಂದು ಪರಿಗಣಿಸಲಾಗುವುದಿಲ್ಲ ಎಂದೂ ಎಂಸಿಸಿ ಹೇಳಿದೆ. 

ADVERTISEMENT

ಮೈಕೆಲ್ ನೇಸರ್ ಅವರು ಪಡೆದಿದ್ದ ಕ್ಯಾಚ್‌ ಸಾರ್ವಜನಿಕರಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು.  ಬಿಬಿಎಲ್‌ ಟೂರ್ನಿಯಲ್ಲಿ ಬ್ರಿಸ್ಬೇನ್ ಹೀಟ್ ತಂಡದಲ್ಲಿ ಆಡುವ ಮೈಕೆಲ್ ಅವರು ಜೋರ್ಡಾನ್ ಸಿಲ್ಕ್ ಹೊಡೆದ ಚೆಂಡನ್ನು ಬೌಂಡರಿಯೊಳಗೇ ಕ್ಯಾಚ್ ಮಾಡುತ್ತಾರೆ. ಆದರೆ ಈ ಪ್ರಯತ್ನದಲ್ಲಿ ತಮ್ಮ ಓಟದ ವೇಗವನ್ನು ನಿಯಂತ್ರಿಸಲು ಅವರಿಗೆ ಸಾಧ್ಯವಾಗುವುದಿಲ್ಲ. ಆದ್ದರಿಂದ ಬೌಂಡರಿಯ ಹಗ್ಗ ದಾಟುತ್ತಾರೆ. ಈ ಸಂದರ್ಭದಲ್ಲಿ ಚೆಂಡನ್ನು ಗಾಳಿಯಲ್ಲಿ ತೂರುತ್ತಾರೆ. ತಮ್ಮನ್ನು ನಿಯಂತ್ರಿಸಿಕೊಂಡು ಚೆಂಡನ್ನು ಹಿಡಿತಕ್ಕೆ ಪಡೆಯುತ್ತಾರೆ. ಆ ಹೊತ್ತಿನಲ್ಲಿ ಅವರು ಬೌಂಡರಿಗೆರೆ ಹೊರಗಿದ್ದರೂ ಗಾಳಿಯಲ್ಲಿ ನೆಗೆದಿರುತ್ತಾರೆ. ಅದೇ ಕ್ಷಣ ಚೆಂಡನ್ನು ಬೌಂಡರಿಗೆರೆಯೊಳಗೆ ಒಗೆದು ತಾವೂ ಜಿಗಿದು ಬಂದು ಕ್ಯಾಚ್ ಮಾಡುತ್ತಾರೆ. ಇದನ್ನು ಅಂಪೈರ್ ಔಟ್ ಎಂದು ಘೋಷಿಸುತ್ತಾರೆ. ಬ್ಯಾಟರ್ ನಿರ್ಗಮಿಸುತ್ತಾರೆ. ಆದರೆ ಸಾರ್ವಜನಿಕ ವಲಯದಲ್ಲಿ ಇದು ‘ನ್ಯಾಯಸಮ್ಮತವಲ್ಲದ ಕ್ಯಾಚ್’ ಎಂಬ ಚರ್ಚೆ ಆರಂಭವಾಗಿತ್ತು. 

ಇದನ್ನು ಗಂಭೀರವಾಗಿ ಪರಿಗಣಿಸಿದ ಎಂಸಿಸಿ ಬಹಳಷ್ಟು ಚಿಂತನ, ಮಂಥನ ನಡೆಸಿತು. ಈಗ ಐಸಿಸಿ ಮತ್ತು ಎಂಸಿಸಿ ಸೇರಿ  19.5.2 ನಿಯಮಕ್ಕೆ ತಿದ್ದುಪಡಿ ಮಾಡಿದೆ. 

‘ಎಂಸಿಸಿಯು ‘ಬನಿ ಹಾಪ್’ ಎಂಬ ಹೊಸ ಪದಗಳನ್ನು ನೀಡಿದೆ. ಬೌಂಡರಿಯಾಚೆ ನೆಗೆದು ಚೆಂಡನ್ನು ಬಹುಸ್ಪರ್ಷ ಮಾಡುವುದನ್ನು ನಿಷೇಧಿಸಿದೆ.  ಆದರೆ ಫೀಲ್ಡರ್ ಗಾಳಿಯಲ್ಲಿರುವ ಚೆಂಡನ್ನು ಬೌಂಡರಿಗೆರೆ ಮಿತಿಯೊಳಗೆ ತಳ್ಳಿದ ನಂತರ ಮತ್ತೆ ಡೈವ್ ಮಾಡಿ ಬಂದು ಕ್ಯಾಚ್ ಮಾಡುವುದನ್ನು ಪರಿಗಣಿಸಲಾಗುತ್ತದೆ. ಆದರೆ ಚೆಂಡು ಮತ್ತು ಫೀಲ್ಡರ್ ಇಬ್ಬರೂ ಬೌಂಡರಿಗೆರೆಯೊಳಗೆ ಇರಬೇಕು’ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.