ಮೆಲ್ಬರ್ನ್: ಆಸ್ಟ್ರೇಲಿಯಾದ ಮೆಲ್ಬರ್ನ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ 4ನೇ ಟೆಸ್ಟ್ ಪಂದ್ಯವನ್ನು ವೀಕ್ಷಿಸಲು ಆಗಮಿಸಿದ್ದ ಪ್ರೇಕ್ಷಕರ ಸಂಖ್ಯೆಯಲ್ಲಿ ಹೊಸ ದಾಖಲೆಯಾಗಿದೆ.
ಇಂದು ಭೋಜಮ ವಿರಾಮದ ವೇಳೆಗೆ ಹಾಜರಿದ್ದ ಪ್ರೇಕ್ಷಕರ ಸಂಖ್ಯೆ ಸೇರಿದಂತೆ ಐದು ದಿನಗಳಲ್ಲಿ ದಾಖಲೆಯ ಒಟ್ಟು 3,50,700 ಪ್ರೇಕ್ಷಕರು ಪಂದ್ಯ ವೀಕ್ಷಣೆಗೆ ಕ್ರೀಡಾಂಗಣಕ್ಕೆ ಆಗಮಿಸಿದ್ದರು. ಪಂದ್‌ಯ ಮುಗಿಯುವ ಹೊತ್ತಿಗೆ ಈ ಸಂಖ್ಯೆ 3,51,104ರಷ್ಟಾಗಿತ್ತು.
ಇಂದು ಭೋಜನ ವಿರಾಮದ ಹೊತ್ತಿಗೆ 51,371 ಮಂದಿ ಹಾಜರಾಗುವುದರೊಂದಿಗೆ ಈ ಹಿಂದಿನ ಒಟ್ಟು ವೀಕ್ಷಕರ ದಾಖಲೆಯನ್ನು ಮುರಿದಿದೆ. 1937ರಲ್ಲಿ ಆಸ್ಟ್ರೇಲಿಯಾದ ಕ್ರಿಕೆಟ್ ದಂತಕಥೆ ಡಾನ್ ಬ್ರಾಡ್ಮನ್ ತಮ್ಮ ವೃತ್ತಿಜೀವನದ ಉತ್ತುಂಗದಲ್ಲಿದ್ದಾಗ 3,50,535 ಪ್ರೇಕ್ಷಕರು ಪಂದ್ಯ ವೀಕ್ಷಿಸಿದ್ದರು. ಆ ದಾಖಲೆಯನ್ನೂ ಮೀರಿ ಈ ಪಂದ್ಯಕ್ಕೆ ಜನ ಸೇರಿದ್ದಾರೆ.
ಭೋಜನ ವಿರಾಮದ ಬಳಿಕ ಪ್ರೇಕ್ಷಕರ ಸಂಖ್ಯೆ 60,000 ಗಡಿ ದಾಟಿತ್ತು.
'ಐದನೇ ದಿನದ ಪ್ರಸ್ತುತ ಹಾಜರಾತಿ 51,371 ಆಗಿದೆ. ಎಂಸಿಜಿಯಲ್ಲಿ ಇಂಗ್ಲೆಂಡ್ ವಿರುದ್ಧದ 6 ದಿನಗಳ ಟೆಸ್ಟ್ ಪಂದ್ಯಕ್ಕೆ 350,534 ಪ್ರೇಕ್ಷಕರು ಸೇರಿದ್ದೇ ಈವರೆಗಿನ ದಾಖಲೆಯಾಗಿತ್ತು. ಅದನ್ನೂ ಮೀರಿ ಇಂದು 3,50,700 ಮಂದಿ ಸೇರಿದ್ದಾರೆ’ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಭೋಜನ ವಿರಾಮಕ್ಕೂ ಮುನ್ನ ಬಿಡುಗಡೆ ಮಾಡಿದ ಪ್ರಕರಟಣೆಯಲ್ಲಿ ತಿಳಿಸಿದೆ.
ಈ ಪಂದ್ಯದಲ್ಲಿ ಗೆಲುವಿಗೆ 340 ರನ್ ಗುರಿ ಪಡೆದಿದದ್ದ ಭಾರತ ತಂಡ 155 ರನ್‌ಗಳಿಗೆ ಆಲೌಟ್ ಆಗುವ ಮೂಲಕ 184 ರನ್‌ಗಳಿಂದ ಸೋಲೊಪ್ಪಿಕೊಂಡಿದೆ.
1999ರಲ್ಲಿ ಈಡನ್ ಗಾರ್ಡನ್ಸ್‌ನಲ್ಲಿ ಭಾರತ-ಪಾಕಿಸ್ತಾನ ಪಂದ್ಯದಲ್ಲಿ ಒಟ್ಟು 4,65,000 ಮಂದಿ ಪ್ರೇಕ್ಷಕರು ಸೇರಿದ್ದ ಈವರೆಗೆ ಟೆಸ್ಟ್ ಪಂದ್ಯವೊಂದಕ್ಕೆ ಆಗಮಿಸಿದ ಅತ್ಯಧಿಕ ಪ್ರೇಕ್ಷಕ ಸಂಖ್ಯೆ ಇದಾಗಿದೆ.ಭಾರತ–ಆಸ್ಟ್ರೇಲಿಯಾ ನಡುವಿನ ಮೆಲ್ಬರ್ನ್ ಪಂದ್ಯ ಎರಡನೇ ಸ್ಥಾನದಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.