ADVERTISEMENT

ಮುಂಬೈಗೆ ಹ್ಯಾಟ್ರಿಕ್ ಕನಸು; ಡೆಲ್ಲಿ ನಿರಾಳ

ರೋಹಿತ್ ಬಳಗಕ್ಕೆ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ವೈಫಲ್ಯದ ಆತಂಕ; ಪಂತ್ ಪಡೆಗೆ ಶಿಖರ್ ಬಲ

ಪಿಟಿಐ
Published 19 ಏಪ್ರಿಲ್ 2021, 14:13 IST
Last Updated 19 ಏಪ್ರಿಲ್ 2021, 14:13 IST
ರೋಹಿತ್ ಶರ್ಮಾ –ಪಿಟಿಐ ಚಿತ್ರ
ರೋಹಿತ್ ಶರ್ಮಾ –ಪಿಟಿಐ ಚಿತ್ರ   

ಚೆನ್ನೈ: ಕಡಿಮೆ ಮೊತ್ತ ಗಳಿಸಿದರೂ ತಂತ್ರಗಾರಿಕೆಯಿಂದ ಎದುರಾಳಿಗಳನ್ನು ಕಟ್ಟಿಹಾಕಿ ಸತತ ಎರಡು ಜಯ ಸಾಧಿಸಿರುವ ಮುಂಬೈ ಇಂಡಿಯನ್ಸ್ ಮತ್ತು ಬಲಿಷ್ಠ ತಂಡಗಳನ್ನು ಮಣಿಸಿ ಭರವಸೆಯಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಮಂಗಳವಾರ ಮುಖಾಮುಖಿಯಾಗಲಿವೆ.

ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ವೈಫಲ್ಯದಿಂದಾಗಿ ಹಿಂದಿನ ಮೂರು ಪಂದ್ಯಗಳಲ್ಲೂ ಮುಂಬೈಗೆ ನಿರೀಕ್ಷಿತ ಮೊತ್ತ ಗಳಿಸಲು ಆಗಲಿಲ್ಲ. ಮೊದಲ ಪಂದ್ಯದಲ್ಲಿ ಸೋತಿದ್ದ ತಂಡ ನಂತರದ ಎರಡು ಪಂದ್ಯಗಳಲ್ಲಿ ಎದುರಾಳಿಗಳನ್ನು ಬೌಲಿಂಗ್‌ನಲ್ಲಿ ನಿಯಂತ್ರಿಸಿತ್ತು. ಡೆಲ್ಲಿ ಎರಡನೇ ಪಂದ್ಯದಲ್ಲಿ ಸೋತಿದ್ದರೂ ಮೊದಲ ಮತ್ತು ಮೂರನೇ ಪಂದ್ಯದಲ್ಲಿ ಕ್ರಮವಾಗಿ ಏಳು ಮತ್ತು ಆರು ವಿಕೆಟ್‌ಗಳಿಂದ ಜಯ ಗಳಿಸಿತ್ತು. ಕೊನೆಯ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್‌ ಮುಂದಿಟ್ಟ ಬೃಹತ್ ಮೊತ್ತವನ್ನು ಸುಲಭವಾಗಿ ಬೆನ್ನತ್ತಿ ಗೆಲುವು ಸಾಧಿಸಿತ್ತು.

ಆರಂಭಿಕ ಜೋಡಿ ಕ್ವಿಂಟನ್ ಡಿ ಕಾಕ್ ಮತ್ತು ನಾಯಕ ರೋಹಿತ್ ಶರ್ಮಾ ಮುಂಬೈ ತಂಡದ ಪರ ಮಿಂಚುತ್ತಿದ್ದಾರೆ. ಸೂರ್ಯಕುಮಾರ್ ಯಾದವ್‌, ಇಶಾನ್ ಕಿಶನ್, ಕೀರನ್ ಪೊಲಾರ್ಡ್‌, ಹಾರ್ದಿಕ್ ಪಾಂಡ್ಯ, ಕೃಣಾಲ್ ಪಾಂಡ್ಯ ಮುಂತಾದವರು ತಂಡದ ಬ್ಯಾಟಿಂಗ್ ಶಕ್ತಿ. ಆದರೆ ಈ ವರೆಗೆ ಅವರಿಂದ ನೈಜ ಸಾಮರ್ಥ್ಯ ಹೊರಹೊಮ್ಮಿಲ್ಲ.

ADVERTISEMENT

ಜಸ್‌ಪ್ರೀತ್ ಬೂಮ್ರಾ ನೇತ್ವದ ಬೌಲಿಂಗ್ ಪಡೆ ಎಂಥ ಬ್ಯಾಟ್ಸ್‌ಮನ್‌ಗಳನ್ನು ಕೂಡ ಕಂಗೆಡಿಸಬಲ್ಲ ಸಾಮರ್ಥ್ಯ ಹೊಂದಿದೆ. ಹೀಗಾಗಿ ಹಿಂದಿನ ಎರಡು ಪಂದ್ಯಗಳಲ್ಲಿ ಕ್ರಮವಾಗಿ 150 ಮತ್ತು 152 ರನ್ ಗಳಿಸಿದ್ದರೂ ತಂಡ ಜಯ ಸಾಧಿಸಿತ್ತು. ಬೂಮ್ರಾ ಮತ್ತು ನ್ಯೂಜಿಲೆಂಡ್‌ನ ಟ್ರೆಂಟ್ ಬೌಲ್ಟ್‌ ಈ ಪಂದ್ಯಗಳಲ್ಲಿ ಅತ್ಯಮೋಘ ದಾಳಿ ಸಂಘಟಿಸಿದ್ದರು. ಲೆಗ್ ಸ್ಪಿನ್ನರ್ ರಾಹುಲ್ ಚಾಹರ್ ಕೂಡ ತಂಡದ ಆಸ್ತಿಯಾಗಿದ್ದು ಹಿಂದಿನ ಎರಡು ಪಂದ್ಯಗಳಲ್ಲಿ ಒಟ್ಟು ಏಳು ವಿಕೆಟ್ ಕಬಳಿಸಿದ್ದಾರೆ. ಎಡಗೈ ಸ್ಪಿನ್ನರ್ ಕೃಣಾಲ್ ಪಾಂಡ್ಯ ಮಧ್ಯೆ ಮಧ್ಯೆ ವಿಕೆಟ್ ಉರುಳಿಸಿ ತಂಡಕ್ಕೆ ಕಾಣಿಕೆ ನೀಡುತ್ತಿದ್ದಾರೆ.

ಶಿಖರ್ ಧವನ್‌ ಮೇಲೆ ನಿರೀಕ್ಷೆ

ಎಡಗೈ ಬ್ಯಾಟ್ಸ್‌ಮನ್‌ ಶಿಖರ್ ಧವನ್‌ ಫಾರ್ಮ್‌ಗೆ ಮರಳಿರುವುದು ಡೆಲ್ಲಿ ಪಾಳಯದ ಸಂಭ್ರಮಕ್ಕೆ ಕಾರಣವಾಗಿದೆ. ಪಂಜಾಬ್ ಕಿಂಗ್ಸ್ ಎದುರಿನ ಭರ್ಜರಿ ಜಯಕ್ಕೆ ಕಾರಣರಾದ ಅವರು ಒಟ್ಟಾರೆ 186 ರನ್ ಕಲೆ ಹಾಕಿದ್ದಾರೆ. ಧವನ್ ಮತ್ತು ಪೃಥ್ವಿ ಶಾ ಅವರ ಜೋಡಿ ಉತ್ತಮ ಆರಂಭ ಒದಗಿಸುತ್ತಿದೆ. ನಾಯಕ ರಿಷಭ್ ಪಂತ್ ಯಾವುದೇ ರೀತಿಯ ದಾಳಿಯನ್ನು ಎದುರಿಸುವ ಸಾಮರ್ಥ್ಯ ಹೊಂದಿದ್ದಾರೆ. ಮಾರ್ಕಸ್ ಸ್ಟೋಯಿನಿಸ್‌, ಲಲಿತ್ ಯಾದವ್ ಮುಂತಾದ ಆಲ್‌ರೌಂಡರ್‌ಗಳ ಬಲವೂ ತಂಡಕ್ಕಿದ್ದು ಕಗಿಸೊ ರಬಾಡ, ಕ್ರಿಸ್ ವೋಕ್ಸ್‌, ಅಮಿತ್ ಮಿಶ್ರಾ, ಪ್ರವೀಣ್ ದುಬೆ, ಶಮ್ಸ್ ಮುಲಾನಿ, ರವಿಚಂದ್ರನ್ ಅಶ್ವಿನ್ ಮತ್ತು ಆ್ಯನ್ರಿಚ್ ನಾಕಿಯ ಅವರೂ ಬೌಲಿಂಗ್ ವಿಭಾಗಕ್ಕೆ ಬಲ ತುಂಬಬಲ್ಲರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.