ADVERTISEMENT

ಡಬ್ಲ್ಯುಪಿಎಲ್ ಫೈನಲ್: ಎರಡನೇ ಕಿರೀಟದ ಮೇಲೆ ಮುಂಬೈ ಕಣ್ಣು

ಕೌರ್ ಬಳಗಕ್ಕೆಬ್ರಂಟ್–ಹೇಯ್ಲಿ ಬಲ; ಲ್ಯಾನಿಂಗ್ ಪಡೆಯಲ್ಲಿ ಬಲಾಢ್ಯ ಬೌಲರ್‌ಗಳು

ಪಿಟಿಐ
Published 14 ಮಾರ್ಚ್ 2025, 23:30 IST
Last Updated 14 ಮಾರ್ಚ್ 2025, 23:30 IST
ಮುಂಬೈ ಇಂಡಿಯನ್ಸ್ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್‌  –ಪಿಟಿಐ ಚಿತ್ರ
ಮುಂಬೈ ಇಂಡಿಯನ್ಸ್ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್‌  –ಪಿಟಿಐ ಚಿತ್ರ   

ಮುಂಬೈ: ನಥಾಲಿ ಶಿವರ್ ಬ್ರಂಟ್ ಮತ್ತು ಹೇಯ್ಲಿ ಮ್ಯಾಥ್ಯೂಸ್ ಅವರಂತಹ ಉತ್ತಮ ಆಲ್‌ರೌಂಡರ್‌ಗಳ ಬಲ ಇರುವ ಮುಂಬೈ ಇಂಡಿಯನ್ಸ್ ತಂಡವು ಎರಡನೇ ಬಾರಿ ಮಹಿಳಾ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ಚಾಂಪಿಯನ್ ಪಟ್ಟಕ್ಕೇರುವ ಉತ್ಸಾಹದಲ್ಲಿದೆ. 

ಶನಿವಾರ ಬ್ರೆಬೋರ್ನ್ ಕ್ರೀಡಾಂಗಣದಲ್ಲಿ ನಡೆಯಲಿರುವ ಫೈನಲ್‌ನಲ್ಲಿ  ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಮುಂಬೈ ಬಳಗವು  ಡೆಲ್ಲಿ ಕ್ಯಾಪಿಟಲ್ಸ್  ವಿರುದ್ಧ ಸೆಣಸಲಿದೆ. 

2023ರಲ್ಲಿ ಪ್ರಶಸ್ತಿ ಜಯಿಸಿದ್ದ ಮುಂಬೈ ತಂಡವು ಈಗ ಮತ್ತೊಮ್ಮೆ ಗೆಲುವಿನ ನೆಚ್ಚಿನ ತಂಡವಾಗಿದೆ. ಬ್ರಂಟ್ (493 ರನ್ ಮತ್ತು 9 ವಿಕೆಟ್) ಮತ್ತು ಮ್ಯಾಥ್ಯೂಸ್ (18 ವಿಕೆಟ್ ಮತ್ತು 304 ರನ್‌) ಅವರು ಟೂರ್ನಿಯುದ್ದಕ್ಕೂ ಮುಂಬೈನ ಬಲವರ್ಧನೆ ಮಾಡಿದ್ದಾರೆ. ಆದರೆ ಮೆಗ್‌ ಲ್ಯಾನಿಂಗ್ ನಾಯಕತ್ವದ ಡೆಲ್ಲಿ ತಂಡದ ಎದುರು ಜಯಿಸುವುದು ಸುಲಭವೇನಲ್ಲ. 

ADVERTISEMENT

ಏಕೆಂದರೆ; ಈ ಟೂರ್ನಿಯಲ್ಲಿ ನೇರವಾಗಿ ಫೈನಲ್ ಪ್ರವೇಶಿಸಿರುವ ತಂಡ ಡೆಲ್ಲಿ. 2008ರಿಂದ ನಡೆಯುತ್ತಿರುವ ಐಪಿಎಲ್‌ನಲ್ಲಿ ಪುರುಷರ ತಂಡವು ಮತ್ತು ಕಳೆದ ಮೂರು ವರ್ಷಗಳಿಂದ ನಡೆಯುತ್ತಿರುವ ಡಬ್ಲ್ಯುಪಿಎಲ್‌ನಲ್ಲಿ  ಡೆಲ್ಲಿ ಕ್ಯಾಪಿಟಲ್ಸ್‌  ಮಹಿಳೆಯರ ತಂಡವು ಪ್ರಶಸ್ತಿ ಗಳಿಸಿಲ್ಲ. ಈಗ ಪ್ರಶಸ್ತಿ ಗೆಲ್ಲುವ ಅವಕಾಶ ಒದಗಿಬಂದಿದೆ. ಆದ್ದರಿಂದ ತನ್ನ ಸಂಪೂರ್ಣ ಸಾಮರ್ಥ್ಯವನ್ನು ಪಣಕ್ಕೊಡ್ಡಲು ಲ್ಯಾನಿಂಗ್ ಬಳಗ ಸಿದ್ಧಗೊಂಡಿದೆ. 

ಡೆಲ್ಲಿ ತಂಡದ ಬೌಲಿಂಗ್ ಬಳಗವು ಅತ್ಯಂತ ಸಮರ್ಥ ಆಟಗಾರ್ತಿಯರನ್ನು ಒಳಗೊಂಡಿದೆ. ಸ್ಪಿನ್ನರ್ ಜೆಸ್ ಜೊನಾಸೆನ್ ಮತ್ತು ಭಾರತ ತಂಡದಲ್ಲಿ ಆಡುವ ಅನುಭವಿ ಮಧ್ಯಮವೇಗಿ ಶಿಖಾ ಪಾಂಡೆ ಅವರು ಈ ಟೂರ್ನಿಯಲ್ಲಿ ತಲಾ 11 ವಿಕೆಟ್ ಗಳಿಸಿದ್ದಾರೆ. ಎಕಾನಮಿ ಕೂಡ ಉತ್ತಮವಾಗಿದೆ. 

ರೌಂಡ್‌ ರಾಬಿನ್ ಲೀಗ್‌ ಪಂದ್ಯದಲ್ಲಿ ಮುಂಬೈ ತಂಡವು ಡೆಲ್ಲಿಯನ್ನು ಸಾಧಾರಣ ಮೊತ್ತಕ್ಕೆ (9ಕ್ಕೆ123) ಕಟ್ಟಿಹಾಕಿತ್ತು. ಶಿಖಾ ಮತ್ತು ಜೊನಾಸೆನ್ ಅವರು ಸೇರಿ 4 ವಿಕೆಟ್ ಹಂಚಿಕೊಂಡಿದ್ದರು. ಆ ಪಂದ್ಯದಲ್ಲಿ ಡೆಲ್ಲಿ 9 ವಿಕೆಟ್‌ಗಳಿಂದ ಜಯಿಸಿತ್ತು. ಅದೊಂದೇ ಪಂದ್ಯದಲ್ಲಿ ಮುಂಬೈ ತಂಡದ ಬ್ರಂಟ್ ಅವರು ವೈಫಲ್ಯ ಅನುಭವಿಸಿದ್ದರು.

ಉಳಿದಂತೆ ಬ್ರಂಟ್ ಅವರು ಎಲ್ಲ ಪಂದ್ಯಗಳಲ್ಲಿಯೂ ಮೆರೆದಿದ್ದರು. ಬ್ಯಾಟಿಂಗ್ ಅಷ್ಟೇ ಅಲ್ಲ ತಮ್ಮ ಮಧ್ಯಮವೇಗದ ಬೌಲಿಂಗ್ ಮೂಲಕವೂ ಮಿಂಚಿದ್ದಾರೆ. ಹೇಯ್ಲಿ ಮ್ಯಾಥ್ಯೂಸ್ ಕೂಡ ತಮ್ಮ ಆಫ್‌ಬ್ರೇಕ್ ಬೌಲಿಂಗ್ ಮೂಲಕ ಬ್ಯಾಟರ್‌ಗಳನ್ನು ಕಟ್ಟಿಹಾಕಿದ್ದರು. ಇವರಿಬ್ಬರೂ ಎಲಿಮಿನೇಟರ್ ಪಂದ್ಯದಲ್ಲಿಯೂ ಮಿಂಚಿದ್ದರು. ನಾಯಕಿ ಹರ್ಮನ್‌ಪ್ರೀತ್ ಕೌರ್, ಅಮೆಲಿಯಾ ಕೆರ್, ಯಷ್ಟಿಕಾ ಭಾಟಿಯಾ ಮತ್ತು ಮಧ್ಯಮವೇಗಿ ಶಬ್ನೀಂ ಇಸ್ಮಾಯಿಲ್ ಅವರೂ ಉತ್ತಮ ಲಯದಲ್ಲಿದ್ದಾರೆ. 

ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕಿ ಮೆಗ್‌ ಲ್ಯಾನಿಂಗ್‌ ‍ –ಪಿಟಿಐ ಚಿತ್ರ

ತಂಡಗಳು

ಮುಂಬೈ ಇಂಡಿಯನ್ಸ್: ಹರ್ಮನ್‌ಪ್ರೀತ್ ಕೌರ್ (ನಾಯಕಿ) ಅಕ್ಷಿತಾ ಮಹೇಶ್ವರಿ ಅಮನದೀಪ್ ಕೌರ್ ಅಮನ್ಜೋತ್ ಕೌರ್ ಅಮೆಲಿಯಾ ಕೆರ್ ಕ್ಲಾಯ್ ಟ್ರೈಯಾನ್ ಹೇಯ್ಲಿ ಮ್ಯಾಥ್ಯೂಸ್ ಜಿಂತಿಮಣಿ ಕಲಿತಾ ಕೀರ್ತನಾ ಬಾಲಕೃಷ್ಣನ್ ನಡೈನ್ ಡಿ ಕ್ಲರ್ಕ್ ನಥಾಲಿ ಶಿವರ್ ಬ್ರಂಟ್ ಪರುಣಿಕಾ ಸಿಸೊಡಿಯಾ ಸಜೀವನ್ ಸಜನಾ ಸಂಸ್ಕೃತಿ ಗುಪ್ತಾ ಜಿ. ಕಮಲಿನಿ (ವಿಕೆಟ್‌ಕೀಪರ್) ಯಷ್ಟಿಕಾ ಭಾಟಿಯಾ (ವಿಕೆಟ್‌ಕೀಪರ್) ಸೈಕಾ ಇಶಾಕ್ ಶಬ್ನಿಂ ಇಸ್ಮಾಯಿಲ್.

ಡೆಲ್ಲಿ ಕ್ಯಾಪಿಟಲ್ಸ್: ಮ್ಯಾಗ್ ಲ್ಯಾನಿಂಗ್ (ನಾಯಕಿ) ಜೆಮಿಮಾ ರಾಡ್ರಿಗಸ್ ಶಫಾಲಿ ವರ್ಮಾ ಸ್ನೇಹ ದೀಪ್ತಿ ಅಲೈಸ್ ಕ್ಯಾಪ್ಸಿ ಅನಾಬೆಲ್ ಸದರ್ಲೆಂಡ್ ಅರುಂಧತಿ ರೆಡ್ಡಿ ಜೆಸ್ ಜೊನಾಸೆನ್ ಮರಿಝಾನ್ ಕಾಪ್ ಮಿನ್ನು ಮಣಿ ಎನ್. ಚಾರಿಣಿ ನಿಕಿ ಪ್ರಸಾದ್ ರಾಧಾ ಯಾದವ್ ಶಿಖಾ ಪಾಂಡೆ ನಂದಿನಿ ಕಶ್ಯಪ್ (ವಿಕೆಟ್‌ಕೀಪರ್) ತಾನಿಯಾ ಭಾಟಿಯಾ (ವಿಕೆಟ್‌ಕೀಪರ್) ಸಾರಾ ಬ್ರೈಸ್ (ವಿಕೆಟ್‌ಕೀಪರ್) ತಿತಾಸ್ ಸಾಧು. 

ಪಂದ್ಯ ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಟಾರ್ ಸ್ಫೋರ್ಟ್ಸ್ ನೆಟ್‌ವರ್ಕ್ ಜಿಯೊ ಹಾಟ್‌ಸ್ಟಾರ್. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.