ADVERTISEMENT

ಖಾಲಿ ಕ್ರೀಡಾಂಗಣದಲ್ಲಾದರೂ ಪಂದ್ಯಗಳು ನಡೆಯಲಿ: ಪಾಕಿಸ್ತಾನ ಕೋಚ್‌ ಮಿಸ್ಬಾ

ಪಿಟಿಐ
Published 8 ಮೇ 2020, 15:01 IST
Last Updated 8 ಮೇ 2020, 15:01 IST
ಮಿಸ್ಬಾ ಉಲ್‌ ಹಕ್‌ 
ಮಿಸ್ಬಾ ಉಲ್‌ ಹಕ್‌    

ಕರಾಚಿ: ‘ಲಾಕ್‌ಡೌನ್‌ನಿಂದಾಗಿ ಮನೆಯಲ್ಲೇ ಇದ್ದು ಬೇಸರವಾಗಿದೆ. ಖಿನ್ನತೆಯ ಭಾವವೂ ಮೂಡಿದೆ. ಹೀಗಾಗಿ ಕ್ರಿಕೆಟ್‌ ಚಟುವಟಿಕೆಗಳು ಗರಿಗೆದರುವ ಕ್ಷಣವನ್ನು ಎದುರು ನೋಡುತ್ತಿದ್ದೇನೆ’ ಎಂದು ಪಾಕಿಸ್ತಾನ ಕ್ರಿಕೆಟ್‌ ಮಂಡಳಿಯ (ಪಿಸಿಬಿ) ಆಯ್ಕೆ ಸಮಿತಿ ಮುಖ್ಯಸ್ಥ ಮಿಸ್ಬಾ ಉಲ್‌ ಹಕ್‌ ತಿಳಿಸಿದ್ದಾರೆ.

ಇಂಗ್ಲೆಂಡ್‌ ಹಾಗೂ ಪಾಕಿಸ್ತಾನ ತಂಡಗಳು ಆಗಸ್ಟ್‌ನಲ್ಲಿ ಮೂರು ಪಂದ್ಯಗಳ ಟೆಸ್ಟ್‌ ಸರಣಿ ಆಡುವ ಸಾಧ್ಯತೆ ಇದೆ. ಈ ಸರಣಿಯ ಪಂದ್ಯಗಳನ್ನು ಖಾಲಿ ಕ್ರೀಡಾಂಗಣದಲ್ಲಿ ನಡೆಸಲುಇಂಗ್ಲೆಂಡ್‌ ಮತ್ತು ವೇಲ್ಸ್‌ ಕ್ರಿಕೆಟ್‌ ಮಂಡಳಿಯು (ಇಸಿಬಿ) ಚಿಂತಿಸಿದೆ.

‘ಕೊರೊನಾ ವೈರಾಣು ಜಗತ್ತಿನೆಲ್ಲೆಡೆ ತಲ್ಲಣ ಸೃಷ್ಟಿಸಿದೆ. ಇಂತಹ ಸಂದಿಗ್ಧತೆಯಲ್ಲಿ ಆಟಗಾರರು ಹಾಗೂ ಅಭಿಮಾನಿಗಳ ಸುರಕ್ಷತೆಗೆ ಆದ್ಯತೆ ನೀಡಬೇಕು. ಅಗತ್ಯ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಖಾಲಿ ಕ್ರೀಡಾಂಗಣದಲ್ಲಿ ಪಂದ್ಯಗಳನ್ನು ಆಯೋಜಿಸಿದರೆ ನನಗೇನೂ ಅಭ್ಯಂತರವಿಲ್ಲ. ಇದನ್ನು ನಾನು ಸ್ವಾಗತಿಸುತ್ತೇನೆ’ ಎಂದು ಪಾಕಿಸ್ತಾನ ತಂಡದ ಮುಖ್ಯ ಕೋಚ್‌ ಕೂಡ ಆಗಿರುವ ಮಿಸ್ಬಾ ನುಡಿದಿದ್ದಾರೆ.

ADVERTISEMENT

‘ಆಟಗಾರರು ಹಾಗೂ ಅಭಿಮಾನಿಗಳು ನಾಲ್ಕು ಗೋಡೆಗಳ ನಡುವೆಯೇ ಇದ್ದಾರೆ. ನಿತ್ಯವೂ ಕೊರೊನಾ ಕುರಿತಾದ ಸುದ್ದಿಗಳನ್ನೇ ಕೇಳಿ ಕೇಳಿ ಬೇಸತ್ತು ಹೋಗಿದ್ದಾರೆ. ಖಾಲಿ ಮೈದಾನಗಳಲ್ಲಿ ಪಂದ್ಯಗಳು ನಡೆದರೆ ಅವರಿಗೆ ಟಿ.ವಿಯಲ್ಲಿ ನೇರ ಪ್ರಸಾರ ವೀಕ್ಷಿಸುವ ಅವಕಾಶವಾದರೂ ಸಿಗುತ್ತದೆ. ಇದರಿಂದ ಅವರ ಮನಸ್ಸಿಗೆ ಕೊಂಚ ನೆಮ್ಮದಿಯೂ ದೊರೆಯುತ್ತದೆ’ ಎಂದಿದ್ದಾರೆ.

‘ಇದೇ ತಿಂಗಳ 16ರಿಂದ ಬುಂಡೇಸ್‌ ಲಿಗಾ ಫುಟ್‌ಬಾಲ್‌ ಟೂರ್ನಿ ಆರಂಭವಾಗಲಿದೆ ಎಂಬ ಸುದ್ದಿ ಕೇಳಿ ಸಂತಸವಾಯಿತು. ಅವರು ಸ್ಥಳೀಯ ಸರ್ಕಾರದ ಅನುಮತಿ ಪಡೆದು ಲೀಗ್‌ ಶುರುಮಾಡಿದ್ದಾರೆ. ಹಾಗೆಯೇ ಎಲ್ಲಾ ಕ್ರಿಕೆಟ್‌ ಮಂಡಳಿಗಳೂ ಸಂಬಂಧಪಟ್ಟ ಸರ್ಕಾರಗಳಿಂದ ಅನುಮತಿ ಪಡೆದು ಕ್ರಿಕೆಟ್‌ ಚಟುವಟಿಕೆಗಳನ್ನು ಆರಂಭಿಸಲು ಪ್ರಯತ್ನಿಸಬೇಕು’ ಎಂದು 45 ವರ್ಷ ವಯಸ್ಸಿನ ಆಟಗಾರ ಹೇಳಿದ್ದಾರೆ.

‘ಕೊರೊನಾ ಸಮಯದಲ್ಲಿ ಫಿಟ್‌ನೆಸ್‌ ಕಾಪಾಡಿಕೊಳ್ಳುವುದು ಆಟಗಾರರ ಜವಾಬ್ದಾರಿ. ಅದನ್ನು ಅವರು ಮರೆಯಬಾರದು’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.