ADVERTISEMENT

ಟಿ20 ಕ್ರಿಕೆಟ್‌: ಹಾರ್ದಿಕ್‌ ನಾಯಕತ್ವಕ್ಕೆ ಮೊದಲ ಸವಾಲು

ವಾಂಖೆಡೆಯಲ್ಲಿ ಶ್ರೀಲಂಕಾ ವಿರುದ್ದದ ಮೊದಲ ಪಂದ್ಯ

​ಪ್ರಜಾವಾಣಿ ವಾರ್ತೆ
Published 2 ಜನವರಿ 2023, 13:48 IST
Last Updated 2 ಜನವರಿ 2023, 13:48 IST
ಹಾರ್ದಿಕ್‌ ಪಾಂಡ್ಯ ವಾಂಖೆಡೆ ಕ್ರೀಡಾಂಗಣದಲ್ಲಿ ಸೋಮವಾರ ಅಭ್ಯಾಸದಲ್ಲಿ ಪಾಲ್ಗೊಂಡರು –ಎಎಫ್‌ಪಿ ಚಿತ್ರ
ಹಾರ್ದಿಕ್‌ ಪಾಂಡ್ಯ ವಾಂಖೆಡೆ ಕ್ರೀಡಾಂಗಣದಲ್ಲಿ ಸೋಮವಾರ ಅಭ್ಯಾಸದಲ್ಲಿ ಪಾಲ್ಗೊಂಡರು –ಎಎಫ್‌ಪಿ ಚಿತ್ರ   

ಮುಂಬೈ: ಚುಟುಕು ಕ್ರಿಕೆಟ್‌ನ ಪೂರ್ಣಾವಧಿ ನಾಯಕನಾಗಲು ಸಜ್ಜಾಗುತ್ತಿರುವ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರಿಗೆ ಮಂಗಳವಾರ ಮೊದಲ ಸವಾಲು ಎದುರಾಗಲಿದೆ.

ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಟಿ20 ಕ್ರಿಕೆಟ್‌ ಸರಣಿಯ ಮೊದಲ ಹಣಾಹಣಿ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಹಾರ್ದಿಕ್‌ ಬಳಗ ಗೆಲುವಿನ ಆರಂಭದ ನಿರೀಕ್ಷೆಯಲ್ಲಿದೆ.

ಬಿಸಿಸಿಐ ರಾಷ್ಟ್ರೀಯ ಆಯ್ಕೆ ಸಮಿತಿಯು 2024ರ ಟಿ20 ವಿಶ್ವಕಪ್‌ ಟೂರ್ನಿಯನ್ನು ಗಮನದಲ್ಲಿಟ್ಟುಕೊಂಡು ಲಂಕಾ ವಿರುದ್ಧದ ಸರಣಿಗೆ ತಂಡವನ್ನು ಆಯ್ಕೆ ಮಾಡಿತ್ತು. ಟಿ20 ತಂಡದ ನಾಯಕತ್ವವನ್ನು ರೋಹಿತ್ ಶರ್ಮ ಅವರ ಕೈಯಿಂದ ಹಾರ್ದಿಕ್‌ಗೆ ನೀಡುವುದು ಆಯ್ಕೆ ಸಮಿತಿಯ ಪ್ರಮುಖ ನಿರ್ಧಾರಗಳಲ್ಲಿ ಒಂದು.

ADVERTISEMENT

ಹಾರ್ದಿಕ್‌ ಈಚೆಗೆ ನ್ಯೂಜಿಲೆಂಡ್‌ನಲ್ಲಿ ನಡೆದಿದ್ದ ಟಿ20 ಸರಣಿಯಲ್ಲೂ ಭಾರತ ತಂಡವನ್ನು ಮುನ್ನಡೆಸಿದ್ದರು. ಮಳೆಯಿಂದಾಗಿ ಅಲ್ಲಿ ಪೂರ್ಣ ಪ್ರಮಾಣದ ಸರಣಿ ನಡೆದಿರಲಿಲ್ಲ. ಆದ್ದರಿಂದ ಲಂಕಾ ವಿರುದ್ಧದ ಸರಣಿ ಅವರಿಗೆ ಅಗ್ನಿಪರೀಕ್ಷೆ ಎನಿಸಿದೆ.

ವಿರಾಟ್‌ ಕೊಹ್ಲಿ, ರೋಹಿತ್‌ ಮತ್ತು ಕೆ.ಎಲ್. ರಾಹುಲ್‌ ಅವರ ಅನುಪಸ್ಥಿತಿಯಲ್ಲಿ ಭಾರತ ತಂಡ ಆಡಲಿದೆ. ಈ ಮೂವರು ಪ್ರಮುಖ ಬ್ಯಾಟರ್‌ಗಳು ಇಲ್ಲದೆಯೇ ಗೆಲುವು ಸಾಧ್ಯ ಎಂಬುದನ್ನು ತೋರಿಸಿಕೊಡುವ ಸವಾಲು ಯುವ ಆಟಗಾರರ ಮುಂದಿದೆ.

ಅಕ್ರಮಣಕಾರಿ ಮನೋಭಾವದೊಂದಿಗೆ ಆಡುವ ಛಲದ ಕೊರತೆ ಇತ್ತೀಚಿನ ದಿನಗಳಲ್ಲಿ ಭಾರತ ಟಿ20 ತಂಡದಲ್ಲಿ ಎದ್ದುಕಂಡಿತ್ತು. ವಿಶ್ವಕಪ್‌ ಟೂರ್ನಿಯಲ್ಲಿ ನಿರಾಸೆಗೆ ಇದು ಕೂಡಾ ಒಂದು ಕಾರಣವಾಗಿತ್ತು. ಹಾರ್ದಿಕ್‌ ಅವರು ತಂಡಕ್ಕೆ ಅಗತ್ಯವಿರುವ ಕೆಚ್ಚನ್ನು ತುಂಬುವರೇ ಎಂಬುದನ್ನು ನೋಡಬೇಕಿದೆ.

ಕಿಶನ್‌– ಋತುರಾಜ್ ಆರಂಭ ಸಾಧ್ಯತೆ: ಯುವ ಆಟಗಾರರಾದ ಇಶಾನ್‌ ಕಿಶನ್‌ ಮತ್ತು ಋತುರಾಜ್ ಗಾಯಕವಾಡ್‌ ಅವರು ಭಾರತದ ಇನಿಂಗ್ಸ್‌ ಆರಂಭಿಸುವ ಸಾಧ್ಯತೆಯಿದೆ. ಈಚೆಗಿನ ವರ್ಷಗಳಲ್ಲಿ ಐ‍ಪಿಎಲ್‌ನಲ್ಲಿ ಗಮನಾರ್ಹ ಪ್ರದರ್ಶನ ತೋರಿರುವ ಇವರಿಗೆ ಅಂತರರಾಷ್ಟ್ರೀಯ ಪಂದ್ಯದಲ್ಲಿ ಮಿಂಚುವ ಅವಕಾಶ ಒದಗಿ ಬಂದಿದೆ. ಶುಭಮನ್‌ ಗಿಲ್‌ ಅವರನ್ನು ಆರಂಭಿಕನಾಗಿ ಕಳುಹಿಸುವುದು ಹಾರ್ದಿಕ್‌ ಮುಂದಿರುವ ಇನ್ನೊಂದು ಆಯ್ಕೆ.

ಟಿ20 ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿರುವ ಸೂರ್ಯಕುಮಾರ್‌ ಯಾದವ್‌ ಮೂರನೇ ಕ್ರಮಾಂಕದಲ್ಲಿ ಆಡಲಿದ್ದರೆ, ಸಂಜು ಸ್ಯಾಮ್ಸನ್‌ ಮತ್ತು ರಾಹುಲ್‌ ತ್ರಿಪಾಠಿ ಅವರಲ್ಲಿ ಒಬ್ಬರು ಅಂತಿಮ ಇಲೆವೆನ್‌ನಲ್ಲಿ ಕಾಣಿಸಿಕೊಳ್ಳಬಹುದು.

ಆರ್ಷದೀಪ್‌ ಸಿಂಗ್‌, ಹರ್ಷಲ್‌ ಪಟೇಲ್‌ ಮತ್ತು ಉಮ್ರನ್‌ ಮಲಿಕ್‌ ಅವರು ವೇಗದ ಬೌಲಿಂಗ್‌ ವಿಭಾಗಕ್ಕೆ ಬಲ ತುಂಬಲಿದ್ದಾರೆ. ಹಾರ್ದಿಕ್‌ ಪಾಂಡ್ಯ ಜತೆ ವಾಷಿಂಗ್ಟನ್‌ ಸುಂದರ್‌ ಮತ್ತು ಹರ್ಷಲ್‌ ಪಟೇಲ್‌ ಅವರು ಆಲ್‌ರೌಂಡರ್‌ನ ಜವಾಬ್ದಾರಿ ನಿಭಾಯಿಸುವರು.

ದಸುನ್‌ ಶನಕ ನೇತೃತ್ವದ ಶ್ರೀಲಂಕಾ ತಂಡ ಯುವ ಮತ್ತು ಅನುಭವಿ ಆಟಗಾರರನ್ನು ಒಳಗೊಂಡಿದ್ದು, ಆತಿಥೇಯರಿಗೆ ಪ್ರಬಲ ಪೈಪೋಟಿ ಒಡ್ಡಲು ಸಜ್ಜಾಗಿದೆ.

ಪಂದ್ಯ ಆರಂಭ: ಸಂಜೆ 7

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್‌ ನೆಟ್‌ವರ್ಕ್‌, ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.