ADVERTISEMENT

ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 10,000 ರನ್ ಪೂರೈಸಿದ ಮಿಥಾಲಿ ರಾಜ್

ಪಿಟಿಐ
Published 12 ಮಾರ್ಚ್ 2021, 7:37 IST
Last Updated 12 ಮಾರ್ಚ್ 2021, 7:37 IST
ಮಿಥಾಲಿ ರಾಜ್: ಪಿಟಿಐ ಚಿತ್ರ
ಮಿಥಾಲಿ ರಾಜ್: ಪಿಟಿಐ ಚಿತ್ರ   

ಲಖನೌ: ಭಾರತದ ಮಹಿಳೆಯರ ಏಕದಿನ ಕ್ರಿಕೆಟ್ ತಂಡದ ನಾಯಕಿ, ಅನುಭವಿ ಆಟಗಾರ್ತಿ ಮಿಥಾಲಿ ರಾಜ್ ಎಲ್ಲ ಮಾದರಿಯ ಕ್ರಿಕೆಟ್‌ನಿಂದ 10,000 ರನ್ ಪೂರೈಸುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ.

ಇಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧದಮೂರನೇ ಏಕದಿನ ಪಂದ್ಯದ ವೇಳೆ ಮಿಥಾಲಿ 28 ನೇ ಓವರ್‌ನಲ್ಲಿ ಅನ್ನೆ ಬಾಷ್ ಅವರ ಎಸೆತವನ್ನು ಬೌಂಡರಿಗಟ್ಟುವ ಮೂಲಕ ಈ ಸಾಧನೆ ಮಾಡಿದ್ದಾರೆ.

ಮಹಿಳಾ ಕ್ರಿಕೆಟಿಗರಲ್ಲಿ 10,000 ರನ್ ಗಳಿಸಿದ ಭಾರತದ ಮೊದಲ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಎರಡನೇ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ADVERTISEMENT

ಭಾರತೀಯ ಏಕದಿನ ತಂಡವನ್ನು ಮುನ್ನಡೆಸುತ್ತಿರುವ 38 ವರ್ಷದ ಮಿಥಾಲಿ, ಇಂಗ್ಲೆಂಡ್‌ನ ಷಾರ್ಲೆಟ್ ಎಡ್ವರ್ಡ್ಸ್ ಅವರ ಜೊತೆ 10,000 ರನ್ ಪೂರೈಸಿದವರ ಎಲೈಟ್ ಕ್ಲಬ್‌ ಸೇರಿದ್ದಾರೆ.

"ಎಂತಹ ಚಾಂಪಿಯನ್ ಕ್ರಿಕೆಟ್ ಆಟಗಾರ್ತಿ! ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 10 ಸಾವಿರ ರನ್ ಗಳಿಸಿದ ಮೊದಲ ಭಾರತೀಯ ಮಹಿಳೆ’ ಎಂದು ಬಿಸಿಸಿಐ ಟ್ವೀಟ್ ಮಾಡಿದೆ.

ಆದರೆ, ಹೊಸ ಮೈಲಿಗಲ್ಲು ತಲುಪಿದ ಮರು ಎಸೆತದಲ್ಲೇ ಮಿಥಾಲಿ ರಾಜ್ ಔಟಾಗಿ ಹೊರ ನಡೆದರು.

ಮಿಥಾಲಿ ರಾಜ್ 50 ಎಸೆತಗಳಲ್ಲಿ 36 ರನ್ ಗಳಿಸಿದ್ದು, ಇದರಲ್ಲಿ ಐದು ಬೌಂಡರಿಗಳಿದ್ದವು.

ಮಿಥಾಲಿ ರಾಜ್ 10 ಟೆಸ್ಟ್ ಪಂದ್ಯಗಳಲ್ಲಿ 663 ರನ್ ಗಳಿಸಿದ್ದು, 214 ರನ್ ಅವರ ಬೆಸ್ಟ್ ಸ್ಕೋರ್ ಆಗಿದೆ. ಕ್ರಮವಾಗಿ 212 ಏಕದಿನ ಮತ್ತು 89 ಟಿ–20 ಅಂತರರಾಷ್ಟ್ರೀಯ ಪಂದ್ಯಗಳಿಂದ 6938 ಮತ್ತು 2364 ರನ್ ಗಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.