ADVERTISEMENT

ವಿಶ್ವಕಪ್‌ ಜಯದೊಂದಿಗೆ ವೃತ್ತಿಜೀವನಕ್ಕೆ ವಿದಾಯ: ಮಿಥಾಲಿ ರಾಜ್ ಇಂಗಿತ

ಪಿಟಿಐ
Published 1 ಮಾರ್ಚ್ 2022, 15:32 IST
Last Updated 1 ಮಾರ್ಚ್ 2022, 15:32 IST
ಮಿಥಾಲಿ ರಾಜ್ 
ಮಿಥಾಲಿ ರಾಜ್    

ರಂಗಿಯೊರಾ, ನ್ಯೂಜಿಲೆಂಡ್: ಭಾರತ ಮಹಿಳಾ ಕ್ರಿಕೆಟ್‌ ತಂಡದ ನಾಯಕಿ ಮಿಥಾಲಿ ರಾಜ್ ಅವರು ತಮ್ಮ 22 ವರ್ಷಗಳ ಸುದೀರ್ಘ ವೃತ್ತಿಜೀವನಕ್ಕೆ ಪೂರ್ಣವಿರಾಮ ನೀಡುವತ್ತ ಚಿತ್ತ ನೆಟ್ಟಿದ್ದಾರೆ.

ನ್ಯೂಜಿಲೆಂಡ್‌ನಲ್ಲಿ ನಡೆಯಲಿರುವ ವಿಶ್ವಕಪ್ ಟೂರ್ನಿಯಲ್ಲಿ ಪ್ರಶಸ್ತಿ ಜಯದೊಂದಿಗೆ ಕ್ರಿಕೆಟ್‌ಗೆ ವಿದಾಯ ಹೇಳುವ ಯೋಚನೆಯಲ್ಲಿದ್ದಾರೆ.

‘2000ನೇ ಇಸವಿಯ ವಿಶ್ವಕಪ್ ಟೂರ್ನಿಯು ನ್ಯೂಜಿಲೆಂಡ್‌ನಲ್ಲಿ ನಡೆದಿತ್ತು. ಅಲ್ಲಿಂದ ನನ್ನ ವೃತ್ತಿಜೀವನವೂ ಆರಂಭವಾಗಿತ್ತು. ಆದರೆ ಆ ಟೂರ್ನಿಯಲ್ಲಿ ನನಗೆ ಟೈಫಾಯ್ಡ್ ಆಗಿದ್ದರಿಂದ ಪಂದ್ಯಗಳಲ್ಲಿ ಆಡುವುದನ್ನು ತಪ್ಪಿಸಿಕೊಂಡೆ. ಈಗ ಮತ್ತೆ ನ್ಯೂಜಿಲೆಂಡ್‌ನಲ್ಲಿ ವಿಶ್ವಕಪ್ ಟೂರ್ನಿಯಲ್ಲಿ ಆಡಲಿದ್ದೇನೆ. ಜೀವನ ಒಂದು ಸುತ್ತು ಸಂಪೂರ್ಣವಾಗಿದೆ. ಈ ಬಾರಿ ಪ್ರಶಸ್ತಿ ಜಯದ ಕನಸು ನನಸು ಮಾಡಿಕೊಂಡು ನಿರ್ಗಮಿಸುವ ಆಸೆ‘ ಎಂದು ಮಿಥಾಲಿ ಐಸಿಸಿಯು ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ವಿಡಿಯೊದಲ್ಲಿ ಹೇಳಿದ್ದಾರೆ.

ADVERTISEMENT

ಈಚೆಗೆ ಆತಿಥೇಯ ಕಿವೀಸ್ ಎದುರಿನ ಏಕದಿನ ಸರಣಿಯಲ್ಲಿ ಭಾರತವು 1–4ರಿಂದ ಸೋತಿದೆ. ಮಾರ್ಚ್‌ 4ರಿಂದ ಏಪ್ರಿಲ್‌ 3ರವರೆಗೆ ನಡೆಯಲಿರುವ ವಿಶ್ವಕಪ್ ಟೂರ್ನಿಯಲ್ಲಿ ತಂಡವು ಆಡಲಿದೆ.

‘ಇಲ್ಲಿಗೆ ಬಂದು ಸರಣಿಗಳಲ್ಲಿ ಆಡಿರುವುದರಿಂದ ಆಟಗಾರ್ತಿಯರಲ್ಲಿ ಆತ್ಮವಿಶ್ವಾಸ ಹೆಚ್ಚಿದೆ. ಇದು ವಿಶ್ವಕಪ್ ಟೂರ್ನಿಯಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತದೆ‘ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.