ADVERTISEMENT

ಮೂರು ಬಾರಿ ಆತ್ಮಹತ್ಯೆಯ ಆಲೋಚನೆ ಮೂಡಿತ್ತು: ಮೊಹಮ್ಮದ್‌ ಶಮಿ

ನೋವಿನ ದಿನಗಳನ್ನು ಮೆಲುಕು ಹಾಕಿದ ಭಾರತದ ಕ್ರಿಕೆಟಿಗ

ಪಿಟಿಐ
Published 4 ಮೇ 2020, 2:20 IST
Last Updated 4 ಮೇ 2020, 2:20 IST
   

ನವದೆಹಲಿ: ‘ಐದು ವರ್ಷಗಳ ಹಿಂದೆ ವೈಯಕ್ತಿಕ ಕಾರಣಗಳಿಂದಾಗಿ ಮಾನಸಿಕವಾಗಿ ಕುಗ್ಗಿ ಹೋಗಿದ್ದೆ. ಆ ಸಮಯದಲ್ಲಿ ಮೂರು ಬಾರಿ ಆತ್ಮಹತ್ಯೆ ಮಾಡಿಕೊಳ್ಳುವ ಬಗ್ಗೆ ಆಲೋಚಿಸಿದ್ದೆ’ ಎಂದು ಭಾರತ ಕ್ರಿಕೆಟ್‌ ತಂಡದ ಮಧ್ಯಮ ವೇಗದ ಬೌಲರ್‌ ಮೊಹಮ್ಮದ್‌ ಶಮಿ ಹೇಳಿದ್ದಾರೆ.

ಭಾರತ ತಂಡದ ಸ್ಫೋಟಕ ಬ್ಯಾಟ್ಸ್‌ಮನ್‌ ರೋಹಿತ್‌ ಶರ್ಮಾ ಜೊತೆದಿನ ಇನ್‌ಸ್ಟಾಗ್ರಾಮ್‌ ಸಂವಾದದಲ್ಲಿ ಅವರು ತಮ್ಮ ನೋವಿನ ದಿನಗಳನ್ನು ಮೆಲುಕು ಹಾಕಿದ್ದಾರೆ.

‘ಆ ಸಂದರ್ಭದಲ್ಲಿ ಕುಟುಂಬದವರು ಬಂಡೆಯ ಹಾಗೆ ನನ್ನ ಬೆನ್ನಿಗೆ ನಿಂತರು. ಒಂದೊಮ್ಮೆ ಅವರು ದೂರ ಹೋಗಿದ್ದರೆ ಆಗಲೇ ನನ್ನ ಕ್ರಿಕೆಟ್‌ ಬದುಕು ಅಂತ್ಯವಾಗಿಬಿಡುತ್ತಿತ್ತು. ಖಿನ್ನತೆಯಿಂದ ಬಳಲಿದ್ದ ನಾನು ಆತ್ಮಹತ್ಯೆಯ ಕುರಿತೂ ಆಲೋಚಿಸಿದ್ದೆ’ ಎಂದು ಅವರು ನುಡಿದಿದ್ದಾರೆ.

ADVERTISEMENT

‘ಆ ಸಮಯದಲ್ಲಿ ಕ್ರಿಕೆಟ್‌ ಕುರಿತು ಆಲೋಚಿಸಲೂ ಆಗುತ್ತಿರಲಿಲ್ಲ. ನಾವು ಅಪಾರ್ಟ್‌ಮೆಂಟ್‌ವೊಂದರ 24ನೇ ಮಹಡಿಯಲ್ಲಿ ವಾಸವಿದ್ದೆವು. ನಾನು ಬಾಲ್ಕನಿಯಿಂದ ಎಲ್ಲಿ ಕೆಳಗೆ ಹಾರಿಬಿಡುತ್ತೇನೊ ಎಂದು ಕುಟುಂಬದವರು ಆತಂಕಗೊಂಡಿದ್ದರು. ಆ ಸಮಯದಲ್ಲಿ ನನ್ನ ಸಹೋದರ ತೋರಿದ ಸಹಕಾರವನ್ನು ಎಂದಿಗೂ ಮರೆಯುವುದಿಲ್ಲ. ಆತ ಸಾಂತ್ವನದ ಮಾತುಗಳನ್ನಾಡಿ ನನ್ನಲ್ಲಿ ಹೊಸ ವಿಶ್ವಾಸ ಮೂಡುವಂತೆ ಮಾಡಿದ್ದ’ ಎಂದಿದ್ದಾರೆ.

‘ಆ ದಿನಗಳಲ್ಲಿ ಮೂವರು ಸ್ನೇಹಿತರು ಸದಾ ನನ್ನ ಜೊತೆಯಲ್ಲಿರುತ್ತಿದ್ದರು. ನನ್ನ ಚಲನ ವಲನಗಳ ಮೇಲೆ ನಿಗಾ ಇಡುತ್ತಿದ್ದರು. ಕ್ರಿಕೆಟ್‌ನತ್ತ ಚಿತ್ತ ಹರಿಸಿದರೆ ಮಾತ್ರ ಖಿನ್ನತೆಯಿಂದ ಪಾರಾಗಬಹುದು ಎಂದು ಕುಟುಂಬದವರು ಸಲಹೆ ನೀಡಿದರು. ಅವರ ಮಾತುಗಳು ಸರಿ ಅನಿಸಿದವು. ಹೀಗಾಗಿ ನೋವಿನ ನಡುವೆಯೂ ತರಬೇತಿ ಆರಂಭಿಸಿದೆ. ಡೆಹ್ರಾಡೂನ್‌ನಲ್ಲಿರುವ ಅಕಾಡೆಮಿಗೆ ಹೋಗಿ ಕಠಿಣ ತಾಲೀಮು ನಡೆಸಿದೆ. ಅಲ್ಲಿದ್ದಷ್ಟು ಸಮಯ ಕ್ರಿಕೆಟ್‌ನತ್ತ ಮಾತ್ರ ಗಮನಹರಿಸಿದೆ’ ಎಂದೂ ವಿವರಿಸಿದ್ದಾರೆ.

2018ರಲ್ಲಿ ಪತ್ನಿ ಹಸೀನಾ ಜಹಾನ್‌ ಅವರು ಶಮಿ ಹಾಗೂ ಅವರ ಸಹೋದರನ ವಿರುದ್ಧ ಕೊಲೆ ಯತ್ನ, ಕಿರುಕುಳ ಹಾಗೂ ಅತ್ಯಾಚಾರದ ಆರೋಪ ಹೊರಿಸಿ ಕೋಲ್ಕತ್ತದ ಜಾಧವಪುರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಈ ಕುರಿತು ಸಮಗ್ರ ತನಿಖೆ ನಡೆಸಿ ವರದಿ ನೀಡುವಂತೆ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯು (ಬಿಸಿಸಿಐ), ಭ್ರಷ್ಟಾಚಾರ ತಡೆ ಘಟಕಕ್ಕೆ (ಎಸಿಯು) ಸೂಚಿಸಿತ್ತು. ಜೊತೆಗೆ ಕೇಂದ್ರೀಯ ಗುತ್ತಿಗೆ ಪದ್ಧತಿಯಿಂದ ಶಮಿ ಅವರ ಹೆಸರನ್ನು ತಾತ್ಕಾಲಿಕವಾಗಿ ತಡೆ ಹಿಡಿದಿತ್ತು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಶಮಿ ‘ಕುಟುಂಬ ಕಲಹದ ವಿಷಯವನ್ನು ಮಾಧ್ಯಮಗಳಲ್ಲಿ ದೊಡ್ಡದಾಗಿ ಬಿಂಬಿಸಲಾಗುತ್ತಿತ್ತು. ಐಪಿಎಲ್‌ ಕ್ರಿಕೆಟ್‌ ಟೂರ್ನಿಯ ಆರಂಭಕ್ಕೆ 12 ದಿನಗಳು ಇದ್ದಾಗ ಅಪಘಾತ ಸಂಭವಿಸಿತು. ಹೀಗಾಗಿ ಲೀಗ್‌ನಲ್ಲಿ ಆಡುವ ಅವಕಾಶವೂ ಕೈತಪ್ಪಿತ್ತು. ಆ ಸಮಯದಲ್ಲಿ ಮತ್ತೆ ಕುಟುಂಬದವರು ಆತ್ಮಸ್ಥೈರ್ಯ ತುಂಬಿದರು’ ಎಂದೂ ತಿಳಿಸಿದ್ದಾರೆ.

‘2015ರ ಏಕದಿನ ವಿಶ್ವಕಪ್‌ನಲ್ಲಿ ಗಾಯದ ನಡುವೆಯೂ ಆಡಿದ್ದೆ. ವಿಶ್ವಕಪ್‌ ಮುಗಿದ ಬಳಿಕ ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದೆ. ನಂತರದ 18 ತಿಂಗಳು ನಾನು ನರಕ ಯಾತನೆ ಅನುಭವಿಸಿದ್ದೆ’ ಎಂದೂ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.