ADVERTISEMENT

ಮೊಹಮ್ಮದ್ ಶಮಿ: ದುಃಖ, ದುಮ್ಮಾನಗಳ ಬೆಂಕಿಯಲ್ಲಿ ಅರಳಿದ ಚಿನ್ನ

ಮೊಹಮ್ಮದ್ ಶಮಿ ವೃತ್ತಿಜೀವನದ 100ನೇ ಏಕದಿನ ಪಂದ್ಯಕ್ಕೆ ಶ್ರೇಷ್ಠ ಪಟ್ಟ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2023, 20:51 IST
Last Updated 16 ನವೆಂಬರ್ 2023, 20:51 IST
<div class="paragraphs"><p>ಮೊಹಮ್ಮದ್ ಶಮಿ</p></div>

ಮೊಹಮ್ಮದ್ ಶಮಿ

   

ಬೆಂಗಳೂರು/ಮುಂಬೈ: ವಾಂಖೆಡೆ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ಆಟಗಾರ ಕೇನ್ ವಿಲಿಯಮ್ಸನ್ ಅವರ ಕ್ಯಾಚ್ ಕೈಚೆಲ್ಲಿದ ಮೊಹಮ್ಮದ್ ಶಮಿ ಭಾರತದ ಕೈಯಿಂದ ಗೆಲುವು ಕೈಜಾರದಂತೆ ನೋಡಿಕೊಂಡರು. ಅಲ್ಲದೇ ತಮ್ಮ ವೃತ್ತಿಜೀವನದ ನೂರನೇ ಏಕದಿನ ಕ್ರಿಕೆಟ್ ಪಂದ್ಯವನ್ನೂ ಅವಿಸ್ಮರಣೀಯಗೊಳಿಸಿಕೊಂಡರು.

ಈ ಪಂದ್ಯದಲ್ಲಿ ಅವರು ಒಟ್ಟು ಏಳು ವಿಕೆಟ್ ಗಳಿಸಿ (9.5–0–57–7) ಶ್ರೇಷ್ಠ ಆಟಗಾರ ಗೌರವಕ್ಕೆ ಪಾತ್ರರಾದರು. ಅಲ್ಲದೇ ಇದು ಅವರ ಏಕದಿನ ಕ್ರಿಕೆಟ್‌ನ ವೈಯಕ್ತಿಕ ಶ್ರೇಷ್ಠ ಬೌಲಿಂಗ್ ಸಾಧನೆ
ಯೂ ಆಗಿದೆ. ವಿಶ್ವಕಪ್ ಸೆಮಿಫೈನಲ್‌ನಂತಹ ದೊಡ್ಡ ವೇದಿಕೆಯಲ್ಲಿ  ಈ ಸಾಧನೆ ಮೂಡಿಬಂದಿದ್ದು ವಿಶೇಷ.

ADVERTISEMENT

ಶಮಿ ಇನಿಂಗ್ಸ್‌ನ ಆರನೇ ಓವರ್ ಬೌಲಿಂಗ್ ಮಾಡಲು ಬರುವ ಮುನ್ನ ಡೆವೊನ್ ಕಾನ್ವೆ ಮತ್ತು ರಚಿನ್ ರವೀಂದ್ರ ಉತ್ತಮ ಆರಂಭ ನೀಡುವತ್ತ ದಿಟ್ಟ ಹೆಜ್ಜೆ ಇಟ್ಟಿದ್ದರು.   398 ರನ್‌ಗಳ ಬೃಹತ್ ಗುರಿಯೊಡ್ಡಿಯೂ ಆರಂಭಿಕ ವಿಕೆಟ್ ಪಡೆಯಲು ಸಾಧ್ಯವಾಗದ ನಿರಾಸೆ ನಾಯಕ ರೋಹಿತ್ ಶರ್ಮಾ ಅವರ ಮುಖದಲ್ಲಿ ಕಾಣುತ್ತಿತ್ತು. ಏಕೆಂದರೆ ಜಸ್‌ಪ್ರೀತ್ ಬೂಮ್ರಾ ಮತ್ತು ಸಿರಾಜ್ ತುಟ್ಟಿಯಾಗಿದ್ದರು. ವೈಡ್‌ಗಳು, ಓವರ್‌ಥ್ರೋಗಳಿಂದಲೂ ಯಥೇಚ್ಚ ರನ್‌ಗಳು ಹರಿದುಹೋಗಿದ್ದವು. ಈ ಹೊತ್ತಿನಲ್ಲಿ ಶಮಿ ಎಸೆತಗಳು ಎದುರಾಳಿ ಬ್ಯಾಟರ್‌ಗಳನ್ನು ನಿಖರವಾಗಿ ಬೇಟೆಯಾಡಿದವು. ತಮ್ಮ ನಾಯಕನಷ್ಟೇ ಅಲ್ಲ. ಭಾರತ ಕ್ರಿಕೆಟ್‌ ತಂಡದ ಕೋಟ್ಯಂತರ ಅಭಿಮಾನಿಗಳೂ ಸಂತಸದ ಹೊನಲಲ್ಲಿ ತೇಲುವಂತೆ ಮಾಡಿದರು.

ಈ ವಿಶ್ವಕಪ್ ಟೂರ್ನಿಯಲ್ಲಿ ಅವರು ಆಡಿದ ಆರು ಪಂದ್ಯಗಳಿಂದ 23 ವಿಕೆಟ್ ಗಳಿಸಿ ಬೌಲರ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ. ಟೂರ್ನಿಯ ಮೊದಲ ನಾಲ್ಕು ಪಂದ್ಯಗಳಲ್ಲಿ ಶಮಿ ಅಂತಿಮ ಹನ್ನೊಂದರ ಬಳಗದಲ್ಲಿ ಸ್ಥಾನವನ್ನೇ ಪಡೆದಿರಲಿಲ್ಲ. ಎಂಟನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರನ್ನು ಆಡಿಸಲಾಗಿತ್ತು. ಅದಕ್ಕಾಗಿ ಶಮಿ ಬೆಂಚ್ ಕಾದಿದ್ದರು.

ಆದರೆ, ಲೀಗ್ ಹಂತದಲ್ಲಿ ಬಾಂಗ್ಲಾದೇಶ ಎದುರಿನ ಪಂದ್ಯದಲ್ಲಿ ಹಾರ್ದಿಕ್ ಕಾಲಿಗೆ ಗಾಯವಾಗಿ ಹೊರಬಿದ್ದಾಗ ಶಮಿಗೆ ತಂಡದ ಬಾಗಿಲು ತೆರೆಯಿತು. ಠಾಕೂರ್ ಮತ್ತು ಆರ್. ಅಶ್ವಿನ್ ಅವರನ್ನು ಆಯ್ಕೆಗೆ ಪರಿಗಣಿಸದೇ ಶಮಿಗೆ ಅವಕಾಶ ನೀಡಲು ನಾಯಕ ರೋಹಿತ್, ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಮಾಡಿದ ನಿರ್ಧಾರವು ಫಲ ನೀಡಿತು.

ಅವರೆಲ್ಲರ ನಿರೀಕ್ಷೆಗೂ ಮೀರಿದ ಆಟವನ್ನು ಶಮಿ ಆಡುತ್ತಿದ್ದಾರೆ. ಅವರು ಅಪ್ಪಟ ಮಧ್ಯಮವೇಗಿ. ಬ್ಯಾಟ್ಸ್‌ಮನ್ ಅಲ್ಲ. ಆದರೆ, ವಿಕೆಟ್‌ಗಳನ್ನು ಉರುಳಿಸುವ ಮೂಲಕ ಎದುರಾಳಿ ಬ್ಯಾಟರ್‌ಗಳಿಗೆ ಸಿಂಹಸ್ವಪ್ನರಾಗಿದ್ದಾರೆ.

‘ಶಮಿ ಗಳಿಸಿದ ಪ್ರತಿಯೊಂದು ವಿಕೆಟ್‌ಗಳನ್ನು ನೋಡಿ. ಅವರ ಎಸೆತಗಳ ನಿಖರತೆ ಅರ್ಥವಾಗುತ್ತದೆ. ಅವರ ಕೈಯಿಂದ ಹೊರಟ ಚೆಂಡಿನ ಸೀಮ್ ಒಂದಿಷ್ಟೂ ಲಯ ತಪ್ಪುವುದಿಲ್ಲ. ಪಿಚ್‌ಗೆ ಬಿರುಸಾಗಿ ಚೆಂಡನ್ನೂ ಅಪ್ಪಳಿಸುವುದಿಲ್ಲ. ಡೆವೊನ್ ಕಾನ್ವೆ ವಿಕೆಟ್‌ ಪಡೆದ ಎಸೆತವನ್ನು ನೋಡಿ’ ಎಂದು ಶಮಿ ಅವರ ಬಾಲ್ಯದ ಕೋಚ್ ಮೊಹಮ್ಮದ್ ಬದರುದ್ದೀನ್ ಪಿಟಿಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

2013ರಲ್ಲಿ ದೆಹಲಿಯಲ್ಲಿ ಪಾಕಿಸ್ತಾನ ಎದುರಿನ ಪಂದ್ಯದಲ್ಲಿ ಏಕದಿನ ಕ್ರಿಕೆಟ್‌ಗೆ ಶಮಿ ಪದಾರ್ಪಣೆ ಮಾಡಿದ್ದರು. ಕಳೆದ ಒಂದು ದಶಕದಲ್ಲಿ ಅವರು ವೃತ್ತಿ ಮತ್ತು ವೈಯಕ್ತಿಕ ಬದುಕಿನಲ್ಲಿ ಹತ್ತಾರು
ಕಷ್ಟನಷ್ಟಗಳನ್ನು ಅನುಭವಿಸಿದ್ದಾರೆ.

ಫಾರ್ಮ್‌ ಕಳೆದುಕೊಂಡು ಸ್ಥಾನ ಕಳೆದುಕೊಂಡಿದ್ದು, ಗಾಯದಿಂದ ಸ್ಥಾನ ಕಳೆದುಕೊಂಡಿದ್ದು ಮತ್ತು ಅಪಘಾತದ ಗಾಯವೂ ಕಾಡಿತು. ಸಾಲದ್ದಕ್ಕೆ ಪತ್ನಿಯೊಂದಿಗಿನ ಕಲಹವು ಸಾಮಾಜಿಕ ಮಾಧ್ಯಮಗಳಲ್ಲಿ ದೊಡ್ಡದಾಗಿ ಸುದ್ದಿ ಮಾಡಿತು. ಬೆಟ್ಟಿಂಗ್ ಆರೋಪಗಳೂ ಕಾಡಿದವು.  ಇವೆಲ್ಲದರಿಂದ ಬೇಸತ್ತು ಆತ್ಮಹತ್ಯೆಗೂ ಯತ್ನಿಸಿದ್ದಾಗಿ ಸ್ವತಃ ಶಮಿ ಅವರೇ ಮೂರು ವರ್ಷಗಳ ಹಿಂದೆ ವಿಡಿಯೋವೊಂದರಲ್ಲಿ ಹೇಳಿಕೊಂಡಿದ್ದರು. ಅವರ ಕುಟುಂಬ, ಬಂಧು ಬಳಗ ಮತ್ತು ಸ್ನೇಹಿತರ ಬೆಂಬಲದಿಂದ ಗಟ್ಟಿಯಾಗಿ ನಿಂತು ಎಲ್ಲವನ್ನೂ ಎದುರಿಸಿದರು. ವಿಶ್ವಕಪ್ ಕ್ರಿಕೆಟ್‌ನಲ್ಲಿ ಅತಿ ವೇಗವಾಗಿ 50 ವಿಕೆಟ್ ಗಳಿಸಿದ ಸಾಧನೆಯನ್ನೂ ಮಾಡಿದರು.

ಇದೀಗ ಅವರು ಈ ದುಃಖ ದುಮ್ಮಾನಗಳ ಬೆಂಕಿಯಲ್ಲಿ ಹಾದು ಬಂದ ಅಪ್ಪಟ ಚಿನ್ನದಂತೆ ಕಂಗೊಳಿಸುತ್ತಿದ್ದಾರೆ. ಅವರ ಪ್ರಖರ ಬೆಳಕು ಎದುರಾಳಿ ಬ್ಯಾಟರ್‌ಗಳ ಕಣ್ಣುಗಳನ್ನು ಕುಕ್ಕುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.