ADVERTISEMENT

ಕ್ರಿಕೆಟ್ | ಕ್ರಿಕ್‌ಇನ್ಫೊ ದಶಕದ ತಂಡಗಳಿಗೆ ಧೋನಿ, ಕೊಹ್ಲಿಯೇ ನಾಯಕರು

ಮೂರು ಮಾದರಿಯ ತಂಡದಲ್ಲಿರುವ ಭಾರತದ ಏಕೈಕ ಆಟಗಾರ ವಿರಾಟ್

ಪಿಟಿಐ
Published 2 ಜನವರಿ 2020, 6:21 IST
Last Updated 2 ಜನವರಿ 2020, 6:21 IST
ವಿರಾಟ್‌ ಕೊಹ್ಲಿ (ಎಡ) ಹಾಗೂ ಮಹೇಂದ್ರ ಸಿಂಗ್‌ ಧೋನಿ–ಪಿಟಿಐ ಚಿತ್ರ
ವಿರಾಟ್‌ ಕೊಹ್ಲಿ (ಎಡ) ಹಾಗೂ ಮಹೇಂದ್ರ ಸಿಂಗ್‌ ಧೋನಿ–ಪಿಟಿಐ ಚಿತ್ರ   

ನವದೆಹಲಿ: ಅನುಭವಿ ಆಟಗಾರ ಮಹೇಂದ್ರ ಸಿಂಗ್‌ ಧೋನಿ ಅವರು ಕ್ರಿಕ್‌ಇನ್ಫೊ ವೆಬ್‌ಸೈಟ್‌ನ ದಶಕದ ಏಕದಿನ ಹಾಗೂ ಟ್ವೆಂಟಿ–20 ತಂಡಗಳ ನಾಯಕರಾಗಿ ಆಯ್ಕೆಯಾಗಿದ್ದಾರೆ. ಭಾರತ ಕ್ರಿಕೆಟ್‌ ತಂಡದ ಹಾಲಿ ನಾಯಕ ವಿರಾಟ್‌ ಕೊಹ್ಲಿ ಅವರಿಗೆ ಟೆಸ್ಟ್ ತಂಡದ ನಾಯಕನ ಗೌರವ ಲಭಿಸಿದೆ.

23 ಮಂದಿಯ ಸಮಿತಿಯು ತಂಡಗಳನ್ನು ಆಯ್ಕೆ ಮಾಡಿದೆ. ಕನಿಷ್ಠ 50 ಟೆಸ್ಟ್‌ ಪಂದ್ಯಗಳು ಅಥವಾ ಈ ಮಾದರಿಯಲ್ಲಿ ಆರು ವರ್ಷ ಆಟಗಾರರ ಸಕ್ರಿಯತೆಯನ್ನು ಮಾನದಂಡವಾಗಿ ಇಟ್ಟುಕೊಳ್ಳಲಾಗಿತ್ತು. ಸೀಮಿತ ಓವರ್‌ಗಳ ಮಾದರಿಯ ಆಟಗಾರರ ಆಯ್ಕೆಗೆ ಕನಿಷ್ಠ 75 ಏಕದಿನ ಮತ್ತು 100 ಟ್ವೆಂಟಿ–20 ಪಂದ್ಯಗಳನ್ನು ಆಡಿದವರನ್ನು ಪರಿಗಣಿಸಲಾಗಿದೆ.

ಆಫ್‌ಸ್ಪಿನ್ನರ್‌ ಆರ್‌. ಅಶ್ವಿನ್‌ ಟೆಸ್ಟ್‌ ಇಲೆವನ್‌ನಲ್ಲಿ ಸ್ಥಾನ ಪಡೆದ ಭಾರತದ ಇನ್ನೊಬ್ಬ ಆಟಗಾರ. ಇಂಗ್ಲೆಂಡ್‌ನ ಅಲಸ್ಟೇರ್‌ ಕುಕ್‌ ಮತ್ತು ನ್ಯೂಜಿಲೆಂಡ್‌ ತಂಡದ ನಾಯಕ ಕೇನ್‌ ವಿಲಿಯಮ್ಸನ್‌ ಈ ಪಟ್ಟಿಯಲ್ಲಿದ್ದಾರೆ.

ADVERTISEMENT

ಈ ದಶಕದಲ್ಲಿ ಕೊಹ್ಲಿ 54.97ರ ಸರಾಸರಿಯಲ್ಲಿ 7202 ರನ್‌ ಕಲೆಹಾಕಿದ್ದಾರೆ. ಅಶ್ವಿನ್‌ 362 ವಿಕೆಟ್‌ ಕಿತ್ತಿದ್ದಾರೆ. ಅವರ ಬೌಲಿಂಗ್ ಸರಾಸರಿ 25.36.

ಮೂರು ಮಾದರಿಯ ತಂಡಗಳಲ್ಲಿರುವ ಭಾರತದ ಏಕೈಕ ಆಟಗಾರ ಕೊಹ್ಲಿ. ಭಾರತದ ತಂಡದ ಉಪನಾಯಕ ರೋಹಿತ್‌ ಶರ್ಮಾ (7991 ರನ್) ದಶಕದ ಏಕದಿನ ತಂಡದಲ್ಲಿ ಸ್ಥಾನ ಗಿಟ್ಟಿಸಿದ್ದಾರೆ. ಕೆರಿಬಿಯನ್‌ ನಾಡಿನ ಆಟಗಾರರೇ ಹೆಚ್ಚಾಗಿರುವ ಟಿ–20 ತಂಡದಲ್ಲಿ ಕೊಹ್ಲಿಯೊಂದಿಗೆ ಧೋನಿ, ಬೂಮ್ರಾ ಕೂಡ ಕಾಣಿಸಿಕೊಂಡಿದ್ದಾರೆ.

ವೆಸ್ಟ್‌ ಇಂಡೀಸ್‌ನ ಐವರು ಆಟಗಾರರ ದಂಡು ಟಿ–20 ತಂಡದಲ್ಲಿದೆ. ಅವರೆಂದರೆ ಕ್ರಿಸ್‌ ಗೇಲ್‌, ಡ್ವೇನ್‌ ಬ್ರಾವೊ ಸುನಿಲ್‌ ನಾರಾಯಣ್‌, ಕೀರನ್‌ ಪೊಲಾರ್ಡ್‌ ಹಾಗೂ ಆ್ಯಂಡ್ರೆ ರಸೆಲ್‌.

ಏಕದಿನ ಹಾಗೂ ಟ್ವೆಂಟಿ–20 ಸೇರಿದಶಕದ ಒಂದೇ ಮಹಿಳಾ ತಂಡವನ್ನು ಪ್ರಕಟಿಸಲಾಗಿದ್ದು, ಭಾರತ ತಂಡದ ಮಾಜಿ ನಾಯಕಿ ಮಿಥಾಲಿ ರಾಜ್‌ ಹಾಗೂ ವೇಗದ ಬೌಲರ್‌ ಜೂಲನ್‌ ಗೋಸ್ವಾಮಿಸ್ಥಾನ ಪಡೆದಿದ್ದಾರೆ. ಆಸ್ಟ್ರೇಲಿಯಾದ ಮೆಗ್‌ ಲ್ಯಾನಿಂಗ್‌ ಈ ತಂಡದ ನಾಯಕಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.