ADVERTISEMENT

ವಾಯುಮಾಲಿನ್ಯ: ಮಾಸ್ಕ್ ಧರಿಸಿ ಆಡಿದ ಮುಂಬೈ ಆಟಗಾರರು

ಪಿಟಿಐ
Published 29 ಜನವರಿ 2026, 16:06 IST
Last Updated 29 ಜನವರಿ 2026, 16:06 IST
   

ಮುಂಬೈ: ಆತಿಥೇಯ ಮುಂಬೈ ತಂಡದ ಆಟಗಾರರು ಗುರುವಾರ ಇಲ್ಲಿ ಆರಂಭವಾದ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ದೆಹಲಿ ಎದುರಿನ ಪಂದ್ಯದಲ್ಲಿ ಮುಖಗವಸು ಧರಿಸಿ ಆಡಿದರು. 

ಎಂಸಿಎ–ಬಿಕೆಸಿ ಮೈದಾನದಲ್ಲಿ ಈ ಪಂದ್ಯ ನಡೆಯುತ್ತಿದೆ. ಈ ಕ್ರೀಡಾಂಗಣದ ಪಕ್ಕದ ನಿವೇಶನದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಅದರಿಂದಾಗಿ ಈ ಪ್ರದೇಶದಲ್ಲಿ ವಾಯುಮಾಲಿನ್ಯ ಹೆಚ್ಚಿದೆ. ಇಲ್ಲಿಯ ವಾಯು ಗುಣಮಟ್ಟ ಸೂಚ್ಯಂಕ(ಎಕ್ಯೂಐ) 160ರ ಪ್ರಮಾಣದಲ್ಲಿದೆ. ಇದು ‘ಅನಾರೋಗ್ಯಕರ’ ಮಟ್ಟವಾಗಿದೆ. 

ದಿನದಾಟದ ಮೂರನೇ ಅವಧಿಯಲ್ಲಿ ಮುಂಬೈ ತಂಡದ ಬ್ಯಾಟರ್ ಸರ್ಫರಾಜ್ ಖಾನ್, ಅವರ ತಮ್ಮ ಮುಷೀರ್ ಖಾನ್ ಮತ್ತು ಸ್ಪಿನ್ನರ್ ಹಿಮಾಂಶು ಸಿಂಗ್ ಅವರು ಮಾಸ್ಕ್ ಧರಿಸಿದ್ದು ಕಂಡುಬಂದಿತು. ಸುಮಾರು ಅರ್ಧಗಂಟೆ ಮಾಸ್ಕ್‌ ಧರಿಸಿದ್ದ ಅವರು ಫೀಲ್ಡಿಂಗ್ ಮಾಡಿದರು. 

ADVERTISEMENT

ಮುಂಬೈ ನಗರಿಯಲ್ಲಿ ವಾಯುಮಾಲಿನ್ಯವು ಸಾಮಾನ್ಯ ಸಂಗತಿ. ಆದರೆ ಪಂದ್ಯ ನಡೆಯುತ್ತಿರುವ ಜಾಗದ ಸಮೀಪದಲ್ಲಿ ಕಟ್ಟಡ ನಿರ್ಮಾಣದಿಂದಾಗಿ ಮಾಲಿನ್ಯದ ಪ್ರಮಾಣ ಹೆಚ್ಚಿದೆ ಎನ್ನಲಾಗಿದೆ.

‘ಕಟ್ಟಡ ನಿರ್ಮಾಣ ಕಾಮಗಾರಿಯಿಂದಾಗಿ ಮಾಲಿನ್ಯವುಂಟಾಗಿದೆ. ಅದರಿಂದಾಗಿ ಉಸಿರಾಟದಲ್ಲಿ ಸ್ವಲ್ಪ ತೊಂದರೆಯಾಗುತ್ತಿದ್ದ ಕಾರಣ ಆಟಗಾರರು ಮಾಸ್ಕ್ ಧರಿಸಿದರು. ಇದರಲ್ಲಿ ಯಾವುದೇ ತರಹದ ಚೇಷ್ಟೆ ಇರಲಿಲ್ಲ’ ಎಂದು ಮುಂಬೈ ತಂಡದ ಬೌಲರ್ ಮೋಹಿತ್ ಅವಸ್ತಿ ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.