ADVERTISEMENT

ಸದ್ದುಗದ್ದಲವಿಲ್ಲದ ಅಂಗಳದಲ್ಲಿ ಚೆನ್ನೈ ಬೌಲರ್‌ಗಳ ಕೈಚಳಕ

ಪರದೆಯೊಳಗೆ ಚಿಯರ್‌ ಲೀಡರ್ಸ್‌, ಜೀವ ಸುರಕ್ಷಾ ನಿಯಮದ ಪರದೆ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2020, 16:58 IST
Last Updated 19 ಸೆಪ್ಟೆಂಬರ್ 2020, 16:58 IST
ವಿಕೆಟ್ ಪಡೆದ ರವೀಂದ್ರ ಜಡೇಜ ಸಂಭ್ರಮ  –ಪಿಟಿಐ ಚಿತ್ರ
ವಿಕೆಟ್ ಪಡೆದ ರವೀಂದ್ರ ಜಡೇಜ ಸಂಭ್ರಮ  –ಪಿಟಿಐ ಚಿತ್ರ   

ಅಬುಧಾಬಿ: ಕೊರೊನಾ ಕಾಲದ ಇಂಡಿಯನ್ ಪ್ರೀಮಿಯರ್ ಲೀಗ್‌ನ ಮೊದಲ ಪಂದ್ಯದ ಪ್ರಥಮ ಎಸೆತವನ್ನು ಮುಂಬೈ ಇಂಡಿಯನ್ಸ್ ತಂಡದ ರೋಹಿತ್ ಶರ್ಮಾ ಬೌಂಡರಿಗಟ್ಟಿದಾಗ ಗ್ಯಾಲರಿಯಲ್ಲಿ ಚಪ್ಪಾಳೆ ತಟ್ಟುವವರು ಇರಲಿಲ್ಲ. ಆದರೆ ದೊಡ್ಡ ಮೊತ್ತ ಕಲೆಹಾಕುವ ಸಂದೇಶ ಆ ಹೊಡೆತದಲ್ಲಿತ್ತು.

ಆದರೆ, ರೋಹಿತ್ ಲೆಕ್ಕಾಚಾರ ಪೂರ್ತಿಯಾಗಿ ಕೈಗೂಡಲಿಲ್ಲ. ‘ಕೂಲ್ ಕ್ಯಾಪ್ಟನ್’ ಮಹೇಂದ್ರಸಿಂಗ್ ಧೋನಿ ತಂತ್ರಗಾರಿಕೆ ಫಲ ನೀಡಿತು. ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ಸ್ಪಿನ್ನರ್ ರವೀಂದ್ರ ಜಡೇಜ (42ಕ್ಕೆ2) ಮತ್ತು ವೇಗಿ ಲುಂಗಿ ಗಿಡಿ (38ಕ್ಕೆ3) ಅವರ ಕರಾಮತ್ತು ಕಳೆಗಟ್ಟಿತು. ಇದರಿಂದಾಗಿ ಮುಂಬೈ ತಂಡವು 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 162 ರನ್‌ಗಳ ಸಾಧಾರಣ ಮೊತ್ತ ಗಳಿಸಿತು.

ಸುಮಾರು 14 ತಿಂಗಳುಗಳ ನಂತರ ಕ್ರಿಕೆಟ್ ಆಡಲು ಶನಿವಾರ ಮೈದಾನಕ್ಕಿಳಿದ ಮಹೇಂದ್ರಸಿಂಗ್ ಧೋನಿ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಮುಂಬೈ ಇನಿಂಗ್ಸ್‌ ಆರಂಭಿಸಿದ ರೋಹಿತ್ ಮತ್ತು ಕ್ವಿಂಟನ್ ಡಿ ಕಾಕ್ ಅವರು ಐದು ಓವರ್‌ಗಳಿಗೂ ಮುನ್ನವೇ ತಂಡದ ಮೊತ್ತವನ್ನು 50ರ ಸಮೀಪಕ್ಕೆ ತಂದರು. ಆದರೆ, ಸ್ಪಿನ್ನರ್ ಪೀಯೂಷ್ ಚಾವ್ಲಾ ಹಾಕಿದ ಎಸೆತ ಲಾಫ್ಟ್‌ ಮಾಡಲೆತ್ನಿಸಿದ ರೋಹಿತ್, ಮಿಡ್‌ ಆಫ್‌ನಲ್ಲಿದ್ದ ಸ್ಯಾಮ್‌ ಕರನ್‌ಗೆ ಕ್ಯಾಚಿತ್ತರು. ಫೀಲ್ಡರ್‌ಗಳು ಪರಸ್ಪರ ಮೊಣಕೈ ತಾಗಿಸಿ ಅಭಿನಂದಿಸಿಕೊಂಡರು.

ADVERTISEMENT

ಇನ್ನೊಂದೆಡೆ ಇದ್ದ ಕ್ವಿಂಟನ್ ಮಾತ್ರ ರನ್‌ ಗಳಿಕೆಯತ್ತ ಚಿತ್ತ ನೆಟ್ಟರು. ಕೇವಲ 20 ಎಸೆತಗಳಲ್ಲಿ 33 ರನ್ ಗಳಿಸಿದರು. ಅವರಿಗೆ ಸ್ಯಾಮ್ ಕರನ್ ಪೆವಿಲಿಯನ್ ದಾರಿ ತೋರಿದರು. ಸೂರ್ಯಕುಮಾರ್ ಯಾದವ್ (17ರನ್) ಹೋರಾಟಕ್ಕೆ ದೀಪಕ್ ಚಾಹರ್ ಅಡ್ಡಿಯಾದರು. ಸೌರಭ್ ತಿವಾರಿ ಮಾತ್ರ ಬಿರುಸಾದ ಆಟವಾಡಿದರು. ಒಂಬತ್ತನೇ ಓವರ್‌ನಲ್ಲಿ ಟೂರ್ನಿಯ ಮೊದಲ ಸಿಕ್ಸರ್‌ ಎತ್ತಿದರು. ಜಡೇಜ ಹಾಕಿದ ನಿಧಾನಗತಿ ಎಸೆತವನ್ನು ಲಾಂಗ್‌ ಆಫ್‌ಗೆ ಎತ್ತಿದರು. ಖಾಲಿ ಕುರ್ಚಿಗಳ ಮೇಲೆ ಬಿದ್ದ ಚೆಂಡು ಪುಟಿಯಿತು. ಜಡೇಜ ಹಾಕಿದ 12ನೇ ಓವರ್‌ನಲ್ಲಿ ಹಾರ್ದಿಕ್ ಪಾಂಡ್ಯ ಸತತ ಎರಡು ಸಿಕ್ಸರ್‌ ಎತ್ತಿ ಸಂಭ್ರಮಿಸಿದರು.

ಆದರೆ ಜಡೇಜ ತಮ್ಮ ಇನ್ನೊಂದು ಓವರ್‌ನಲ್ಲಿ ಇಬ್ಬರ ಮೇಲೂ ಸೇಡು ತೀರಿಸಿಕೊಂಡರು. 15ನೇ ಓವರ್‌ನ ಮೊದಲ ಎಸೆತದಲ್ಲಿ ಸೌರಭ್ ಮತ್ತು ಐದನೇ ಎಸೆತದಲ್ಲಿ ಹಾರ್ದಿಕ್‌ ವಿಕೆಟ್‌ ಕಬಳಿಸಿದರು. ಬೌಂಡರಿಲೈನ್‌ನಲ್ಲಿ ಫಾಫ್‌ ಡುಪ್ಲೆಸಿ ಪಡೆದ ಆಕರ್ಷಕ ಕ್ಯಾಚ್‌ಗೆ ಹಾರ್ದಿಕ್ ಇನಿಂಗ್ಸ್‌ಗೆ ತೆರೆಬಿತ್ತು. ಕೆಳಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಹೆಚ್ಚು ರನ್‌ ಗಳಿಸದಂತೆ ಲುಂಗಿ ಗಿಡಿ ನೋಡಿಕೊಂಡರು.

ಚೀಯರ್ ಲೀಡರ್ಸ್‌ ವಿಡಿಯೊ: ಕೊರೊನಾ ತಡೆಗೆ ಜೀವ ಸುರಕ್ಷಾ ನಿಯಮವಿರುವುದರಿಂದ ಐಪಿ ಎಲ್‌ ಪಂದ್ಯಗಳಿಗೆ ಪ್ರೇಕ್ಷಕರಿಗೆ ಪ್ರವೇಶವಿಲ್ಲ. ಅಲ್ಲದೇ ಚೀಯರ್‌ ಲೀಡರ್ಸ್‌ ನೃತ್ಯವನ್ನೂ ರದ್ದು ಮಾಡಲಾಗಿದೆ. ಆದರೆ, ಮೈದಾನದಲ್ಲಿ ಅಳವಡಿಸಲಾಗಿದ್ದ ದೊಡ್ಡ ಟಿವಿ ಪರದೆಯಲ್ಲಿ ಚಿಯರ್ಸ್‌ ಲಲನೆಯರ ನೃತ್ಯದ ತುಣುಕುಗಳನ್ನು ತೋರಿಸಲಾಗುತ್ತಿತ್ತು. ಹಳೆಯ ಪಂದ್ಯಗಳ ಪ್ರೇಕ್ಷಕರ ಸಮೂಹವಿದ್ದ ದೃಶ್ಯಾವಳಿಗಳನ್ನೂ ಪ್ರದರ್ಶಿಸಲಾಯಿತು.

ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಕಾರ್ಯದರ್ಶಿ ಜಯ್ ಶಾ ಅವರು ‘ಗಣ್ಯರ ಗಾಜಿನ ಮನೆ’ಯಲ್ಲಿ ಕುಳಿತು ಪಂದ್ಯ ವೀಕ್ಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.