ADVERTISEMENT

ಐಪಿಎಲ್‌ನಲ್ಲಿ ಡೋಪ್ ಟೆಸ್ಟಿಂಗ್‌ಗೆ ಕಟ್ಟುನಿಟ್ಟಿನ ಕ್ರಮ

ಪಿಟಿಐ
Published 25 ಆಗಸ್ಟ್ 2020, 13:03 IST
Last Updated 25 ಆಗಸ್ಟ್ 2020, 13:03 IST
ಡೋಪಿಂಗ್
ಡೋಪಿಂಗ್   

ನವದೆಹಲಿ: ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಡೋಪಿಂಗ್‌ ನಿಯಂತ್ರಣಕ್ಕಾಗಿ ರಾಷ್ಟ್ರೀಯ ಉದ್ದೀಪನ ಮದ್ದು ಸೇವನೆ ತಡೆ ಘಟಕ (ನಾಡಾ) ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ಇದರ ಭಾಗವಾಗಿ ನಾಡಾದ ಮೂವರು ಉನ್ನತ ಮಟ್ಟದ ಅಧಿಕಾರಿಗಳು ಇತರ ಆರು ಮಂದಿ ಅಧಿಕಾರಿಗಳ ಜೊತೆ ಯುಎಇಗೆ ತೆರಳಲಿದ್ದಾರೆ.

ಕೋವಿಡ್–19 ಹಾವಳಿಯಿಂದಾಗಿ ಮುಂದೂಡಿ ನಂತರ ಯುಎಇಗೆ ಸ್ಥಳಾಂತರಿಸಿರುವ ಐಪಿಎಲ್ ಟೂರ್ನಿ ಸೆಪ್ಟೆಂಬರ್ 19ರಂದು ಉದ್ಗಾಟನೆಗೊಂಡು ನವೆಂಬರ್ 10ರಂದು ಮುಕ್ತಾಯಗೊಳ್ಳಲಿದೆ. ಟೂರ್ನಿ ಆರಂಭಗೊಂಡ ನಂತರ ಹಾಗೂ ಅದಕ್ಕೂ ಮೊದಲು ಒಟ್ಟು 50 ಮಾದರಿಗಳನ್ನು ಸಂಗ್ರಹಿಸುವ ಗುರಿಯೊಂದಿಗೆ ಅಧಿಕಾರಿಗಳು ಯುಎಇಗೆ ತೆರಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

’ಭಾರತದ ಐವರು ಅಧಿಕಾರಿಗಳು ಯುಎಇಯಲ್ಲಿರುತ್ತಾರೆ. ಆಟಗಾರರಿಗಾಗಿ ನಿರ್ಮಿಸಲಾಗುವ ಜೀವ ಸುರಕ್ಷಾ ವಲಯದಲ್ಲಿ ಅಧಿಕಾರಿಗಳು ವಾಸಿಸಲಿದ್ದಾರೆ. ಅಲ್ಲಿನ ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಸಂಸ್ಥೆಯ ಸಿಬ್ಬಂದಿಯ (ನಾಡೊ) ನೆರವನ್ನು ಕೂಡ ಕೋರಲಾಗಿದೆ‘ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ಅಧಿಕಾರಿಯೊಬ್ಬರು ತಿಳಿಸಿದರು.

ADVERTISEMENT

‘ಐಪಿಎಲ್ ಟೂರ್ನಿಯ ಪಂದ್ಯಗಳು ಮೂರು ಕ್ರೀಡಾಂಗಣಗಳಲ್ಲಿ ನಡೆಯಲಿವೆ. ಈ ಮೂರು ಸ್ಥಳಗಳಲ್ಲಿ ತಲಾ ಒಬ್ಬರು ಹಿರಿಯ ಅಧಿಕಾರಿಯ ನೇತೃತ್ವದಲ್ಲಿ ಇಬ್ಬರು ಅಧಿಕಾರಿಗಳು ಕಾರ್ಯನಿರ್ವಹಿಸಲಿದ್ದಾರೆ. ಮೂರೂ ತಂಡಗಳಿಗೆ ನಾಡೊ ಸಿಬ್ಬಂದಿ ನೆರವು ನೀಡಲಿದ್ದಾರೆ’ ಎಂದು ಹೇಳಿದ ಅಧಿಕಾರಿ ಇದಕ್ಕೆ ತಗಲುವ ವೆಚ್ಚವನ್ನು ಸಂಪೂರ್ಣವಾಗಿ ನಾಡಾ ಭರಿಸಲಿದೆಯೇ ಅಥವಾ ಬಿಸಿಸಿಐ ಕೂಡ ಕೈಜೋಡಿಸಲಿದೆಯೇ ಎಂಬುದನ್ನು ಸ್ಪಷ್ಟಪಡಿಸಲಿಲ್ಲ. ಭಾರತದಲ್ಲಿ ಪರೀಕ್ಷೆ ನಡೆಯುವುದಾದರೆ ಮಾದರಿ ಸಂಗ್ರಹ, ಸಾಗಣೆ ಮತ್ತು ಪರೀಕ್ಷೆಯ ಪೂರ್ಣ ವೆಚ್ಚವನ್ನು ನಾಡಾ ಭರಿಸುತ್ತದೆ.

ಯುಎಇಯಲ್ಲಿ ಐದು ಡೋಪಿಂಗ್ ನಿಯಂತ್ರಣ ಕೇಂದ್ರಗಳನ್ನು ಸ್ಥಾಪಿಸುವಂತೆ ಬಿಸಿಸಿಐಗೆ ನಾಡಾ ಸೂಚಿಸಿದೆ. ಇವುಗಳ ಪೈಕಿ ಮೂರು ಕೇಂದ್ರಗಳು ಪಂದ್ಯ ನಡೆಯುವ ಅಬುಧಾಬಿ, ಶಾರ್ಜಾ ಮತ್ತು ದುಬೈನಲ್ಲಿ ಇರಬೇಕು ಮತ್ತು ಉಳಿದೆರಡನ್ನು ಆಟಗಾರರು ಅಭ್ಯಾಸ ನಡೆಸಲಿರುವ ದುಬೈ ಮತ್ತು ಅಬುಧಾಬಿಯಲ್ಲಿ ಸ್ಥಾಪಿಸಬೇಕು ಎಂದು ತಿಳಿಸಲಾಗಿದೆ.

ನಾಡಾವು ಸೀಮಿತ ಸಂಖ್ಯೆಯ ಮಾದರಿಗಳನ್ನು ಸಂಗ್ರಹಿಸುವುದಾದರೂ ಒಂದಷ್ಟು ಆಟಗಾರರ ಮಾದರಿಗಳನ್ನು ಬಿಸಿಸಿಐ ಸಂಗ್ರಹಿಸಲಿದೆ. ದುಬೈನಲ್ಲಿ ವಾಡಾದ ಮಾನ್ಯತೆ ಇರುವ ಪ್ರಯೋಗಾಲಯಕ್ಕೆ ಮಾದರಿಗಳನ್ನು ಕಳುಹಿಸಲು ಇದರಿಂದ ಸುಲಭವಾಗಲಿದೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.