ADVERTISEMENT

ರಾಷ್ಟ್ರೀಯ ಅಂಧರ ಟಿ20 ಕ್ರಿಕೆಟ್‌ ಟೂರ್ನಿ: ಪ್ರಶಸ್ತಿಗಾಗಿ ಒಡಿಶಾ–ಆಂಧ್ರ ಹಣಾಹಣಿ

ನಾಗೇಶ್‌ ಟ್ರೋಫಿ ರಾಷ್ಟ್ರೀಯ ಅಂಧರ ಟಿ20 ಕ್ರಿಕೆಟ್‌ ಟೂರ್ನಿ: ಪ್ರಕಾಶ್‌ ಶತಕ ವ್ಯರ್ಥ: ಕರ್ನಾಟಕಕ್ಕೆ ಸೋಲು

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2021, 13:49 IST
Last Updated 15 ಫೆಬ್ರುವರಿ 2021, 13:49 IST
ಒಡಿಶಾ ತಂಡದ ಸುಖರಾಮ್ ಮಜಿ
ಒಡಿಶಾ ತಂಡದ ಸುಖರಾಮ್ ಮಜಿ   

ಬೆಂಗಳೂರು: ಆರಂಭದ ಆಟಗಾರ ಪ್ರಕಾಶ್‌ ಜಯರಾಮಯ್ಯ (ಔಟಾಗದೆ 105) ಅವರ ಕೆಚ್ಚೆದೆಯ ಶತಕದ ಹೊರತಾಗಿಯೂ ಕರ್ನಾಟಕ, ಇಲ್ಲಿ ನಡೆಯುತ್ತಿರುವ ನಾಗೇಶ್‌ ಟ್ರೋಫಿ ರಾಷ್ಟ್ರೀಯ ಟಿ20 ಅಂಧರ ಕ್ರಿಕೆಟ್‌ ಟೂರ್ನಿಯ ಸೆಮಿಫೈನಲ್‌ನಲ್ಲಿ ಒಡಿಶಾ ತಂಡಕ್ಕೆ 42 ರನ್‌ಗಳಿಂದ ಮಣಿಯಿತು.

ಸೋಮವಾರ ಆಲ್ಟಾಯರ್‌ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ರನ್‌ಗಳ ಹೊಳೆಯೇ ಹರಿಯಿತು. ಮೊದಲು ಬ್ಯಾಟ್‌ ಮಾಡಿದ ಒಡಿಶಾ ನಿಗದಿತ ಓವರ್‌ಗಳಲ್ಲಿ ಮೂರು ವಿಕೆಟ್‌ ನಷ್ಟಕ್ಕೆ 224 ರನ್‌ಗಳ ಬೃಹತ್‌ ಮೊತ್ತ ಪೇರಿಸಿತು. ಮೂರನೇ ವಿಕೆಟ್‌ ಜೊತೆಯಾಟದಲ್ಲಿ ಸುಖರಾಮ್‌ ಮಜಿ (87, 47 ಎಸೆತ, 13 ಬೌಂಡರಿ) ಮತ್ತು ಪ್ರಕಾಶ್‌ ಬುವೆ (88, 54 ಎಸೆತ, 13 ಬೌಂ.) 152 ರನ್‌ ಸೇರಿಸಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು.

ಗುರಿ ಬೆನ್ನಟ್ಟಿದ ಕರ್ನಾಟಕದ ಆಟಗಾರರನ್ನು ಒಡಿಶಾದ ಬೌಲರ್‌ಗಳು ಶಿಸ್ತುಬದ್ಧ ಬೌಲಿಂಗ್‌ ಮೂಲಕ ಕಟ್ಟಿ ಹಾಕಿದರು. ಕರ್ನಾಟಕ ಯಾವ ಹಂತದಲ್ಲಿಯೂ ಗೆಲ್ಲುವ ಲಕ್ಷಣ ಕಾಣಿಸಲಿಲ್ಲ. ಟೂರ್ನಿಯಲ್ಲಿ ಸತತ ಎರಡು ಶತಕಗಳಲ್ಲದೆ ಕ್ವಾರ್ಟರ್‌ ಫೈನಲ್‌ನಲ್ಲಿ ಔಟಾಗದೇ 99 ಗಳಿಸಿದ್ದ ಪ್ರಕಾಶ್‌ ಜಯರಾಮಯ್ಯ ಇಂದೂ ತಮ್ಮ ಆಕ್ರಮಣಕಾರಿ ಆಟವಾಡಿದರೂ ಇನ್ನೊಂದು ಕಡೆಯಿಂದ ಬೆಂಬಲ ದೊರೆಯಲಿಲ್ಲ. 65 ಎಸೆತಗಳನ್ನು ಎದುರಿಸಿದ ಪ್ರಕಾಶ್‌ ಔಟಾಗದೆ 105 ರನ್‌ ಗಳಿಸಿದರು. ಅವರ ಇನಿಂಗ್ಸ್‌ನಲ್ಲಿ 16 ಬೌಂಡರಿಗಳಿದ್ದವು. ತಂಡವು ಮೂರು ವಿಕೆಟ್‌ ಕಳೆದುಕೊಂಡು 182 ರನ್‌ ಗಳಿಸಲಷ್ಟೇ ಶಕ್ತವಾಯಿತು.

ADVERTISEMENT

ತೀವ್ರ ಕುತೂಹಲ ಕೆರಳಿಸಿದ ಇನ್ನೊಂದು ಸೆಮಿಫೈನಲ್‌ನಲ್ಲಿ ಆಂಧ್ರಪ್ರದೇಶ ತಂಡವು ಹರಿಯಾಣ ತಂಡವನ್ನು ಏಳು ವಿಕೆಟ್‌ಗಳಿಂದ ಮಣಿಸಿತು. ಹರಿಯಾಣ ನೀಡಿದ (198/5) 199 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಆಂಧ್ರ ಪ್ರದೇಶ ಎಂಟು ಎಸೆತಗಳಿರುವಂತೆಯೇ ಗೆಲುವಿನ ದಡ ಮುಟ್ಟಿತು. ಆಂಧ್ರದ ಪರವಾಗಿ ಅಜಯಕುಮಾರ್‌ ರೆಡ್ಡಿ ಔಟಾಗದೆ 60 ರನ್‌ ಗಳಿಸಿದರು.

ಒಡಿಶಾ ಮತ್ತು ಆಂಧ್ರಪ್ರದೇಶ ತಂಡಗಳ ನಡುವೆ ಫೈನಲ್‌ ಪಂದ್ಯ ಮಂಗಳವಾರ ಆಲ್ಟಾಯರ್‌ ಮೈದಾನದಲ್ಲಿ ನಡೆಯಲಿದೆ.

ಸಂಕ್ಷಿಪ್ತ ಸ್ಕೋರುಗಳು: ಒಡಿಶಾ: 20 ಓವರ್‌ಗಳಲ್ಲಿ 3ಕ್ಕೆ 224 (ಸುಖರಾಂ ಮಜಿ ಔಟಾಗದೆ 87, ಪಂಕಜ್‌ ಬುವೆ 88). ಕರ್ನಾಟಕ: 20 ಓವರ್‌ಗಳಲ್ಲಿ 3ಕ್ಕೆ 182 (ಪ್ರಕಾಶ್‌ ಜಯರಾಮಯ್ಯ ಔಟಾಗದೆ 105). ಫಲಿತಾಂಶ: ಒಡಿಶಾ ತಂಡಕ್ಕೆ 42 ರನ್‌ಗಳ ಜಯ.

ಹರಿಯಾಣ: 20 ಓವರ್‌ಗಳಲ್ಲಿ 5ಕ್ಕೆ 198 (ದೀಪಕ್‌ ಮಲಿಕ್‌ 90, ರೋಹಿತ್‌ ಶರ್ಮಾ 68). ಆಂಧ್ರಪ್ರದೇಶ: 18.4 ಓವರ್‌ಗಳಲ್ಲಿ 3 ವಿಕೆಟ್‌ಗೆ 199 (ಅಜಯಕುಮಾರ್‌ ರೆಡ್ಡಿ 60). ಫಲಿತಾಂಶ: ಆಂಧ್ರಪ್ರದೇಶ ತಂಡಕ್ಕೆ ಏಳು ವಿಕೆಟ್‌ಗಳ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.