ADVERTISEMENT

ಐಪಿಎಲ್‌ನಲ್ಲಿ ಮಿಂಚುವತ್ತ ಕರುಣ್ ಚಿತ್ತ

ಪಿಟಿಐ
Published 16 ಮಾರ್ಚ್ 2025, 22:36 IST
Last Updated 16 ಮಾರ್ಚ್ 2025, 22:36 IST
ಕರುಣ್ ನಾಯರ್
ಕರುಣ್ ನಾಯರ್   

ನವದೆಹಲಿ: ಈ ಸಲದ ದೇಶಿ ಕ್ರಿಕೆಟ್ ಋತುವಿನ ಎಲ್ಲ ಮಾದರಿಗಳ ಟೂರ್ನಿಯಲ್ಲಿಯೂ ರನ್‌ಗಳ ರಾಶಿ ಪೇರಿಸಿದ ಕರುಣ್ ನಾಯರ್ ಈಗ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಮಿಂಚಲು ಸಿದ್ಧರಾಗಿದ್ದಾರೆ. 

ಡೆಲ್ಲಿ ಕ್ಯಾಪಿಟಲ್ಸ್‌ ತಂಡದಲ್ಲಿ ಸ್ಥಾನ ಪಡೆದಿರುವ ಕರ್ನಾಟಕದ ಕರುಣ್ ದೇಶಿ ಕ್ರಿಕೆಟ್‌ನಲ್ಲಿ ವಿದರ್ಭ ತಂಡವನ್ನು ಪ್ರತಿನಿಧಿಸಿದ್ದರು. ಅಮೋಘ ಲಯದಲ್ಲಿರುವ ಅವರು ಕ್ಯಾಪಿಟಲ್ಸ್ ತಂಡದ ಬ್ಯಾಟಿಂಗ್‌ ವಿಭಾಗಕ್ಕೆ ಶಕ್ತಿಯಾಗುವ ಭರವಸೆ ಮೂಡಿಸಿದ್ದಾರೆ. 

ಅವರು ಈಚೆಗೆ ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯ (ಏಕದಿನ ಮಾದರಿ) 9ಪಂದ್ಯಗಳಿಂದ  779 ರನ್ ಪೇರಿಸಿದ್ದರು. ಅದರಲ್ಲಿ ಒಂದು ಅರ್ಧಶತಕ ಮತ್ತು ಐದು ಶತಕಗಳು ಸೇರಿದ್ದವು.  ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿಯೂ ಅವರು 860 ರನ್ ಗಳಿಸಿದ್ದರು. ಅದರಲ್ಲೂ ಫೈನಲ್‌ನಲ್ಲಿ ಕೇರಳ ವಿರುದ್ಧ ಎರಡನೇ ಇನಿಂಗ್ಸ್‌ನಲ್ಲಿ ಅಜೇಯ ಶತಕ ದಾಖಲಿಸಿದ್ದರು. 57.33ರ ಸರಾಸರಿಯಲ್ಲಿ ಅವರು ರನ್ ಗಳಿಸಿದ್ದಾರೆ. 

ADVERTISEMENT

‘ಬಹಳ ಕಾಲದಿಂದ ಕ್ರಿಕೆಟ್ ಆಡುತ್ತಿದ್ದೇನೆ. ಈ ಅವಧಿಯಲ್ಲಿ ವೃತ್ತಿಜೀವನದಲ್ಲಿ ಏರಿಳಿತಗಳನ್ನು ಕಂಡಿದ್ದೇನೆ. ಕುಸಿದಾಗ ಪುಟಿದೇಳುವುದನ್ನು ಕಲಿಯುವುದೇ ಈ ಹಾದಿಯಲ್ಲಿ ಮಹತ್ವದ್ದಾಗುತ್ತದೆ. ಅಲ್ಲದೇ ಉನ್ನತ  ಸಾಧನೆ ಮಾಡಿದಾಗಲೂ ಸಮಚಿತ್ತದಿಂದ ಇರುವುದು ಕೂಡ ಮುಖ್ಯ’ ಎಂದು ಕರುಣ್  ಸುದ್ದಿಗಾರರಿಗೆ ಹೇಳಿದರು. 

‘ಆ ದಿನಗಳು ನಿಜಕ್ಕೂ ಬಹಳ ಕಷ್ಟದ್ದಾಗಿದ್ದವು. ಆದರೆ ಸಾಧಿಸಬೇಕೆಂಬ ಹಸಿವು ಮತ್ತು ಕೆಲವರು ತುಂಬಿದ ಆತ್ಮವಿಶ್ವಾಸವು ನೆರವಾಯಿತು. ಈ ಹಂತಕ್ಕೆ ಬಂದೆ ಈಗ ನನ್ನ ಮುಂದಿರುವುದು ಒಂದೇ ಗುರಿ. ಚೆನ್ನಾಗಿ ಸಿದ್ಧತೆ ಮಾಡಿಕೊಳ್ಳಬೇಕು. ಐಪಿಎಲ್‌ನಲ್ಲಿ ಆಡುವ ಪ್ರತಿ  ಪಂದ್ಯದಲ್ಲಿಯೂ ತಂಡಕ್ಕೆ ಉತ್ತಮ ಕಾಣಿಕೆ ನೀಡಬೇಕು ಎಂಬುದಷ್ಟೇ. ನಾನೀಗ ನಿರಾಳವಾಗಿದ್ದೇನೆ ಮತ್ತು  ಆತ್ಮವಿಶ್ವಾಸದೊಂದಿಗೆ ಐಪಿಎಲ್‌ಗೆ ಪ್ರವೇಶಿಸುತ್ತಿರುವೆ. ನನಗೆ ಸಾಧ್ಯವಿರುವುದೆಲ್ಲವನ್ನೂ ಮಾಡುವೆ ’ ಎಂದು ಕರುಣ್ ಹೇಳಿದರು. 

ಡೆಲ್ಲಿ ಕ್ಯಾಪಿಟಲ್ಸ್ ತಂಡವು ಬಿಡ್‌ನಲ್ಲಿ ₹ 50 ಲಕ್ಷ ನೀಡಿ ಖರೀದಿಸಿತ್ತು. 

‘ಡೆಲ್ಲಿ ತಂಡಕ್ಕೆ ಮರಳಿದ್ದು ಅತೀವ ಸಂತಸವಾಗಿದೆ. ತಂಡದಲ್ಲಿರುವ ಎಲ್ಲರೊಂದಿಗೆ ಆಡುವ ಅವಕಾಶ ಲಭಿಸಿದೆ. ಪ್ರಕ್ರಿಯೆಯಲ್ಲಿ ನನಗೆ ವಿಶ್ವಾಸವಿದೆ. ಅದನ್ನು ಸರಿಯಾಗಿ ಪಾಲಿಸಿದರೆ ಗುರಿ ಮುಟ್ಟುವುದು ಸುಲಭ’ ಎಂದರು. 

ತಮ್ಮ ತಂಡದ ಹೊಸ ನಾಯಕ ಅಕ್ಷರ್ ಪಟೇಲ್ ಕುರಿತು ಪ್ರತಿಕ್ರಿಯಿಸಿದ ಕರುಣ್, ‘ಆಟದ ಎಲ್ಲ ಸೂಕ್ಷ್ಮಗಳನ್ನು ಅರಿತಿರುವ ನಾಯಕ  ಅವರಾಗಿದ್ದಾರೆ. ಭವಿಷ್ಯದಲ್ಲಿ ಉತ್ತಮ ನಾಯಕನಾಗಿಯೇ ಅವರು ಗುರುತಿಸಿಕೊಳ್ಳುವ ಸಾಮರ್ಥ್ಯ ಹೊಂದಿದ್ದಾರೆ. ಅವರು ಬಹುಮುಖ ಪ್ರತಿಭೆಯ ಆಟಗಾರ’ ಎಂದರು. 

‘ಕೆ.ಎಲ್. ರಾಹುಲ್ ಅವರ ಜೊತೆಗೂಡಿ ಆಡಲು ಉತ್ಸುಕನಾಗಿದ್ದೇನೆ. ನಾನು ಮತ್ತು ರಾಹುಲ್ ಮೊದಲಿನಿಂದಲೂ ಜೊತೆಯಾಡಿ ಆಡಿದ್ದೇವೆ. ಅವರು ಐಪಿಎಲ್‌ನಲ್ಲಿ ಕಳೆದ ಕೆಲವು ಆವೃತ್ತಿಗಳಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಅವರ ಜೊತೆಗೂಡಿ ಆಡಲು ಸಂತಸವಾಗುತ್ತಿದೆ’ ಎಂದು ಕರುಣ್ ಹೇಳಿದರು. ಕರುಣ್ ಮತ್ತು ರಾಹುಲ್ ಕರ್ನಾಟಕ ಹಾಗೂ ಭಾರತ ತಂಡದಲ್ಲಿ ಜೊತೆ ಆಡಿದ್ದವರು. 

‘ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ತನ್ನ ಮೊದಲ ಐಪಿಎಲ್ ಟ್ರೋಫಿ ಜಯಿಸಲಿದೆ’ ಎಂದೂ ಕರುಣ್ ವಿಶ್ವಾಸ ವ್ಯಕ್ತಪಡಿಸಿದರು. 

ಕ್ಯಾಪಿಟಲ್ಸ್ ತಂಡವು 2020ರಲ್ಲಿ ರನ್ನರ್ಸ್ ಅಪ್ ಆಗಿದ್ದು ಇದುವರೆಗಿನ ಶ್ರೇಷ್ಠ ಸಾಧನೆ ಆಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.