ADVERTISEMENT

ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವುದು ಅತಿ ಮುಖ್ಯ: ವಿರಾಟ್ ಕೊಹ್ಲಿ

​ಪ್ರಜಾವಾಣಿ ವಾರ್ತೆ
Published 2 ಜೂನ್ 2021, 14:29 IST
Last Updated 2 ಜೂನ್ 2021, 14:29 IST
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ   

ಮುಂಬೈ: ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಸೃಷ್ಟಿಯಾಗಿರುವ ಬಯೋಬಬಲ್ ನಡುವೆ ಆಟಗಾರರ ಮಾನಸಿಕ ಆರೋಗ್ಯದ ತಾಜಾತನ ಕಾಪಾಡಿಕೊಳ್ಳುವುದು ಅತಿ ಮುಖ್ಯ ಎಂದು ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಬುಧವಾರ ಪ್ರತಿಪಾದಿಸಿದ್ದಾರೆ.

ಜೂನ್ 18ರಂದು ಆರಂಭವಾಗಲಿರುವ ಐಸಿಸಿ ಚೊಚ್ಚಲ ಟೆಸ್ಟ್ ಕ್ರಿಕೆಟ್ ಚಾಂಪಿಯನ್‌ಷಿಪ್ (ಡಬ್ಲ್ಯುಟಿಸಿ) ಫೈನಲ್ ಪಂದ್ಯದಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಪರಸ್ಪರ ಮುಖಾಮುಖಿಯಾಗಲಿವೆ.

ಇದಕ್ಕೂ ಮೊದಲು ನ್ಯೂಜಿಲೆಂಡ್ ತಂಡವು ಇಂಗ್ಲೆಂಡ್ ವಿರುದ್ಧ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾಗವಹಿಸಲಿದೆ. ಸರಣಿಯ ಮೊದಲ ಪಂದ್ಯ ಇಂದಿನಿಂದ (ಬುಧವಾರ) ವಿಶ್ವ ಪ್ರಸಿದ್ಧ ಲಾರ್ಡ್ಸ್ ಮೈದಾನದಲ್ಲಿ ಆರಂಭವಾಗಿದೆ.

ADVERTISEMENT

ಅತ್ತ ಭಾರತ ತಂಡವು ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್ ಪಂದ್ಯದ ಬಳಿಕ ಆಂಗ್ಲರ ವಿರುದ್ಧ ಆಗಸ್ಟ್‌ನಲ್ಲಿ ಬಹುನಿರೀಕ್ಷಿತ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾಗವಹಿಸಲಿವೆ. ಇತ್ತ ಮಗದೊಂದು ತಂಡವು ಜುಲೈನಲ್ಲಿ ಶ್ರೀಲಂಕಾ ವಿರುದ್ಧ ಸೀಮಿತ ಓವರ್‌ಗಳ ಸರಣಿಯಲ್ಲಿ ಭಾಗವಹಿಸಲಿವೆ.

ಈಗ ನಾವು ಎದುರಿಸುತ್ತಿರುವ ಹಾಗೂ ಸ್ಪರ್ಧಿಸುತ್ತಿರುವವ್ಯವಸ್ಥೆಯಲ್ಲಿಇದ್ದುಕೊಂಡು ಪ್ರೇರಣೆಯನ್ನು ಪಡೆಯುವುದು ಮತ್ತು ಆ ಮಾನಸಿಕ ಪರಿಸ್ಥಿತಿಗೆ ಹೊಂದಿಕೊಳ್ಳುವುದು ತುಂಬಾನೇ ಕಷ್ಟಕರ. ಒಂದೇ ಪ್ರದೇಶದಲ್ಲಿ ಇದ್ದುಕೊಂಡು ಒತ್ತಡವನ್ನು ನಿಭಾಯಿಸುವುದು ಮತ್ತು ಅದೇ ಕೆಲಸವನ್ನು ಪುನರಾವರ್ತಿಸುವುದು ಸವಾಲಿನ ವಿಷಯ ಎಂದು ಹೇಳಿದ್ದಾರೆ.

ಭವಿಷ್ಯದಲ್ಲಿ ಕೆಲಸದ ಒತ್ತಡದ ಜೊತಗೆ ಮಾನಸಿಕ ಆರೋಗ್ಯದ ಅಂಶವೂ ದೊಡ್ಡ ವಿಷಯವಾಗಿ ಗೋಚರಿಸಲಿದೆ. ಈಗಿನ ಪರಿಸ್ಥಿತಿಯಲ್ಲಿ ನೀವು ಗ್ರೌಂಡ್‌ಗೆ ಹೋಗುತ್ತೀರಿ ಮತ್ತು ನೇರವಾಗಿ ಕೊಠಡಿಗೆ ಮರಳುತ್ತೀರಿ. ಇದನ್ನು ಬಿಟ್ಟು ಸ್ವಚ್ಚಂಧವಾಗಿ ವಿಹರಿಸುವ ಅಥವಾ ನಡೆದಾಡುವ ಅವಕಾಶವಿಲ್ಲ. ಇದು ಗಂಭೀರವಾದ ವಿಚಾರವಾಗಿದ್ದು, ನಿರ್ಲಕ್ಷ್ಯಿಸುವಂತಿಲ್ಲ. ಈ ತಂಡವನ್ನು ರಚಿಸಲು ತುಂಬಾ ಶ್ರಮ ವಹಿಸಿದ್ದೇವೆ. ಹಾಗಾಗಿ ಆಟಗಾರರು ಹಿಂದೆ ಬೀಳುವುದನ್ನು ನಾವು ಬಯಸುವುದಿಲ್ಲ. ಹಾಗಾಗಿ ನಾವು ಮುಕ್ತರಾಗಿದ್ದು, ವಿರಾಮ ಬೇಕೆಂದು ಬಯಸಿದರೆ ಆಟಗಾರರು ಪಡೆಯಬಹುದಾಗಿದೆ ಎಂದು ಮಾನಸಿಕ ಆರೋಗ್ಯದ ಬಗ್ಗೆ ವಿರಾಟ್ ಕೊಹ್ಲಿ ವಿವರಿಸಿದ್ದಾರೆ.

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಹಾಗೂ ಇಂಗ್ಲೆಂಡ್ ಸರಣಿ ನಡುವಣ ವಿರಾಮದ ಅವಧಿಯು ಆಟಗಾರರಿಗೆ ನೆರವಾಗಲಿದೆ ಎಂದು ನಾಯಕ ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ.

ಇದರಿಂದ ಆಟಗಾರರಿಗೆ ತಾಜಾತನ ಕಂಡುಕೊಳ್ಳಲು ಹಾಗೂ ತಂಡವನ್ನು ಪುನಃ ಕಟ್ಟಲು ನೆರವಾಗಲಿದೆ. ಯಾಕೆಂದರೆ ಸುದೀರ್ಘ ಅವಧಿಯ ವರೆಗೂ ಬಬಲ್‌ನಲ್ಲಿ ಇದ್ದುಕೊಂಡು ಒತ್ತಡವನ್ನು ನಿಭಾಯಿಸುವುದು ಅಷ್ಟು ಸುಲಭದ ವಿಚಾರವಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ:

ಆರ್‌ಟಿಪಿಸಿಆರ್ ಟೆಸ್ಟ್‌ನ ನೆಗೆಟಿವ್ ವರದಿಯೊಂದಿಗೆ ವಿಶೇಷ ಚಾರ್ಟರ್ ವಿಮಾನದಲ್ಲಿ ಜೂನ್ 3ರಂದು (ಗುರುವಾರ) ಭಾರತೀಯ ತಂಡವು ಇಂಗ್ಲೆಂಡ್‌ಗೆ ಬಂದಿಳಿಯಲಿದೆ. ಇದಕ್ಕೂ ಮೊದಲು ಭಾರತದಲ್ಲಿ 14 ದಿನಗಳ ಬಯೋಬಬಲ್‌ ಪೂರ್ಣಗೊಳಿಸಲಿದೆ. ಬಳಿಕ ಹ್ಯಾಂಪ್‌ಶೈರ್ ಬೌಲ್‌ಗೆ ಆಗಮಿಸಲಿರುವ ಆಟಗಾರರು ಜೀವ ಸುರಕ್ಷಾ ವಲಯದಲ್ಲಿ ಪ್ರತ್ಯೇಕ ವಾಸದಲ್ಲಿರಲಿದ್ದಾರೆ. ಈ ವೇಳೆಯಲ್ಲಿ ನಿಮಮಿತವಾಗಿ ಕೋವಿಡ್ ಟೆಸ್ಟಿಂಗ್‌ಗೆ ಒಳಗಾಗಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.