ADVERTISEMENT

ಕೊನೆಯ ಓವರ್‌ನಲ್ಲಿ ಬೇಕಾಗಿದ್ದು 35 ರನ್; 6 ಸಿಕ್ಸರ್‌‌ ಬಾರಿಸಿ ಫೈನಲ್ ಗೆಲುವು!

ರಾಯಿಟರ್ಸ್
Published 16 ಜುಲೈ 2021, 16:35 IST
Last Updated 16 ಜುಲೈ 2021, 16:35 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಫೈನಲ್ ಪಂದ್ಯದ ಕೊನೆಯ ಓವರ್‌ನಲ್ಲಿ ಗೆಲ್ಲಲು ಬೇಕಾಗಿದ್ದು 35 ರನ್..! ಈ ಅತಿ ಒತ್ತಡದ ಸನ್ನಿವೇಶದಲ್ಲಿ ಕ್ರೀಸಿನಲ್ಲಿದ್ದ ಬ್ಯಾಟ್ಸ್‌ಮನ್, ಎಲ್ಲ ಆರು ಎಸೆತಗಳಲ್ಲಿ ಸಿಕ್ಸರ್‌ ಬಾರಿಸುವ ಮೂಲಕ ತಂಡಕ್ಕೆ ಟ್ರೋಫಿ ಗೆಲ್ಲಿಸಿಕೊಟ್ಟಿರುವ ರೋಚಕ ಘಟನೆ ವರದಿಯಾಗಿದೆ.

ಹೌದು, ಎಲ್ಲ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸಿರುವ ಬ್ಯಾಲಿಮೆನಾ ಉಸ್ತುವಾರಿ ನಾಯಕ ಜಾನ್ ಗ್ಲಾಸ್, ಪಂದ್ಯದ ಅಂತಿಮ ಓವರ್‌ನಲ್ಲಿ ಎಲ್ಲ ಆರು ಎಸೆತಗಳನ್ನು ಸಿಕ್ಸರ್‌ಗಟ್ಟುವ ಮೂಲಕ ಅಮೋಘ ಗೆಲುವು ಒದಗಿಸಿಕೊಟ್ಟಿದ್ದಾರೆ.

ಕ್ರಿಕೆಟ್ ಪ್ರೇಮಿಗಳಿಗಂತೂ ಇದನ್ನು ನಂಬಲು ಸಾಧ್ಯವಾಗುತ್ತಿಲ್ಲ. ಎಲ್‌ವಿಎಸ್ ಟ್ವೆಂಟಿ-20 ಟ್ರೋಫಿ ಫೈನಲ್ ಪಂದ್ಯದಲ್ಲಿ ಉತ್ತರ ಐರ್ಲೆಂಡ್‌ನ ಕ್ರಿಕೆಟ್ ಕ್ಲಬ್ ಕ್ರೆಗಾಘ್ ವಿರುದ್ಧ ಗೆಲುವು ದಾಖಲಾಗಿದೆ.

ತವರಿನ ಗಿಬ್ಸನ್ ಪಾರ್ಕ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಕ್ರೆಗಾಘ್ ತಂಡವು, 147 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಿತ್ತು. ಅಲ್ಲದೆ ಒಂದು ಹಂತದಲ್ಲಿ ಎದುರಾಳಿ ತಂಡವನ್ನು ಕಟ್ಟಿ ಹಾಕುವಲ್ಲಿ (113ಕ್ಕೆ 7 ವಿಕೆಟ್) ಯಶಸ್ವಿಯಾಗಿತ್ತು.

ಆದರೆ ಪಂದ್ಯದ ಕೊನೆಯ ಓವರ್‌ನಲ್ಲಿ ಸನ್ನಿವೇಶ ಬದಲಾಯಿತು. 51 ರನ್ ಗಳಿಸಿ ಕ್ರೀಸಿನಲ್ಲಿದ್ದ ಬ್ಯಾಲಿಮೆನಾ ತಂಡದ ಉಸ್ತುವಾರಿ ನಾಯಕ ಗ್ಲಾಸ್, ಸತತ ಆರು ಸಿಕ್ಸರ್ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಅಲ್ಲದೆ 87 ರನ್ ಗಳಿಸಿ ಅಜೇಯರಾಗುಳಿದರು. ಅರ್ಹವಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿಗೂ ಭಾಜನರಾದರು.

ಇದೇ ಪಂದ್ಯದಲ್ಲಿ ಗ್ಲಾಸ್ ಹಿರಿಯ ಸೋದರ ಸ್ಯಾಮ್, ಹ್ಯಾಟ್ರಿಕ್ ವಿಕೆಟ್ ಸಾಧನೆ ಮಾಡಿರುವುದು ಸಂಭ್ರಮವನ್ನು ಇಮ್ಮಡಿಗೊಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.