ADVERTISEMENT

ಪಿಸಿಎ ಕ್ರೀಡಾಂಗಣಕ್ಕೆ ಯಾದವೀಂದ್ರ ಸಿಂಗ್ ಹೆಸರಿಡಲು ನಿರ್ಧಾರ

ಪಿಟಿಐ
Published 9 ಆಗಸ್ಟ್ 2020, 13:36 IST
Last Updated 9 ಆಗಸ್ಟ್ 2020, 13:36 IST
ಕ್ರಿಕೆಟ್
ಕ್ರಿಕೆಟ್   

ಚಂಡೀಗಢ: ಮೊಹಾಲಿಯ ಮುಲ್ಲಂಪುರದಲ್ಲಿ ನಿರ್ಮಿಸಿರುವ ಹೊಸ ಕ್ರಿಕೆಟ್ ಕ್ರೀಡಾಂಗಣಕ್ಕೆ ಪಟಿಯಾಲದ ಕೊನೆಯ ರಾಜ ಆಗಿದ್ದ ಮಹಾರಾಜ ಯಾದವೀಂದ್ರ ಸಿಂಗ್ ಅವರ ಹೆಸರು ಇಡಲು ಪಂಜಾಬ್ ಕ್ರಿಕೆಟ್ ಸಂಸ್ಥೆ ನಿರ್ಧರಿಸಿದೆ.ಯಾದವೀಂದ್ರ ಸಿಂಗ್ ಅವರು ಭಾರತಕ್ಕಾಗಿ 1934ರಲ್ಲಿ ಏಕೈಕ ಟೆಸ್ಟ್ ಪಂದ್ಯ ಆಡಿದ್ದಾರೆ. ಅವರು ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರ ತಂದೆ.

ಪಂಜಾಬ್ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ರಾಜಿಂದರ್ ಗುಪ್ತ, ಕಾರ್ಯದರ್ಶಿ ಪುನೀತ್ ಬಾಲಿ ಮತ್ತು ಇತರ ಪದಾಧಿಕಾರಿಗಳು ಪಾಲ್ಗೊಂಡ ಸಭೆ ಭಾನುವಾರ ನಡೆದಿದ್ದು ಈ ನಿರ್ಧಾರ ಕೈಗೊಳ್ಳಲಾಯಿತು. ಅಧ್ಯಕ್ಷರು ಪ್ರಸ್ತಾಪ ಇರಿಸಿದರು. ಇದನ್ನು ಅವಿರೋಧವಾಗಿ ಅಂಗೀಕರಿಸಲಾಯಿತು ಎಂದು ಪುನೀತ್ ತಿಳಿಸಿದರು.

ಈಗಾಗಲೇ ಇರುವ ಐ.ಎಸ್ ಬಿಂದ್ರಾ ಕ್ರೀಡಾಂಗಣವನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಾಗಿ ಪರಿವರ್ತಿಸಲು ಪಂಜಾಬ್ ಕ್ರಿಕೆಟ್ ಸಂಸ್ಥೆ ನಿರ್ಧರಿಸಿದ್ದು ನವೀಕರಣ ಕಾರ್ಯ ಆರಂಭವಾಗಿದೆ. ಕ್ರಿಕೆಟ್ ಮೈದಾನಗಳು, ಈಜುಕೊಳ, ಜಿಮ್ ಮತ್ತು ಇತರ ಸೌಲಭ್ಯಗಳು ಇಲ್ಲಿ ತಲೆ ಎತ್ತಲಿವೆ. ಮುಲ್ಲಂಪುರದಲ್ಲಿ ನಿರ್ಮಿಸಿರುವ ಕ್ರೀಡಾಂಗಣವು ಸಂಸ್ಥೆಯ ಮಾಜಿ ಅಧ್ಯಕ್ಷ ಐ.ಎಸ್ ಬಿಂದ್ರಾ ಅವರ ಕನಸಿನ ಕೂಸು.

ADVERTISEMENT

‘ಗುತ್ತಿಗೆ ಆಧಾರದಲ್ಲಿ ತೆಗೆದುಕೊಳ್ಳುತ್ತಿರುವ ಕ್ರಿಕೆಟಿಗರ ಸಂಖ್ಯೆಯನ್ನು 30ರಿಂದ 40ಕ್ಕೆ ಏರಿಸಲು ಅಪೆಕ್ಸ್ ಸಮಿತಿ ಸಭೆಯಲ್ಲಿ ನಿರ್ಧರಿಸಲಾಯಿತು. ಈ ಪೈಕಿ 10 ಮಂದಿ ಮಹಿಳಾ ಕ್ರಿಕೆಟಿಗರು ಇರುವರು. ವಿದ್ಯಾರ್ಥಿ ವೇತನ ನೀಡುವ ಯೋಜನೆ ಹಾಗೂ ಜಿಲ್ಲಾ ಮಟ್ಟದಲ್ಲಿ ಕ್ರಿಕೆಟ್ ಬೆಳೆಸುವ ಕಾರ್ಯಕ್ರಮಕ್ಕೆ ಸಭೆಯಲ್ಲಿ ಅನುಮತಿ ನೀಡಲಾಯಿತು. ಪಂಜಾಬ್‌ನ 18 ಜಿಲ್ಲಾ ಸಂಸ್ಥೆಗಳಲ್ಲಿ ಕ್ರಿಕೆಟ್ ಚಟುವಟಿಕೆ ಗರಿಗೆದರಲು ಈ ಯೋಜನೆ ನೆರವಾಗಲಿದೆ’ ಎಂದು ಪುನೀತ್ ವಿವರಿಸಿದರು.

‘ಕೋವಿಡ್‌–19ರಿಂದ ವಿಷಮ ಸ್ಥಿತಿಯ ಸಂದರ್ಭದಲ್ಲೂ ಕಾರ್ಯನಿರ್ವಹಿಸುತ್ತಿರುವ ಕಚೇರಿ ಸಿಬ್ಬಂದಿ ಮತ್ತು ಮೈದಾನದ ನೆರವು ಸಿಬ್ಬಂದಿಗೆ ₹ 40 ಸಾವಿರ ಬೋನಸ್ ನೀಡುವುದಕ್ಕೂ ನಿರ್ಧರಿಸಲಾಯಿತು’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.