ADVERTISEMENT

ನ್ಯೂಜಿಲೆಂಡ್‌–ಇಂಗ್ಲೆಂಡ್‌ ಫೈನಲ್‌ ಪಂದ್ಯ; ₹14 ಲಕ್ಷಕ್ಕೆ ಮಾರಾಟವಾದ ಟಿಕೆಟ್‌!

ವಿಶ್ವಕಪ್‌ ಕ್ರಿಕೆಟ್‌

ಏಜೆನ್ಸೀಸ್
Published 13 ಜುಲೈ 2019, 15:44 IST
Last Updated 13 ಜುಲೈ 2019, 15:44 IST
ಸ್ಟಬ್‌ಹಬ್‌ ಜಾಲತಾಣದಲ್ಲಿ ಲಭ್ಯವಿರುವ ಟಿಕೆಟ್‌
ಸ್ಟಬ್‌ಹಬ್‌ ಜಾಲತಾಣದಲ್ಲಿ ಲಭ್ಯವಿರುವ ಟಿಕೆಟ್‌   

ಬೆಂಗಳೂರು: ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯ ಅಂತಿಮ ಹಣಾಹಣಿ ಭಾನುವಾರ ಲಾರ್ಡ್ಸ್‌ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಪಂದ್ಯ ವೀಕ್ಷಣೆಗೆ ದೂರದೂರಿನಿಂದ ಬಂದಿರುವ ಕ್ರಿಕೆಟ್‌ ಪ್ರಿಯರು ಟಿಕೆಟ್‌ ಸಿಗದೆ ಪರಿತಪಿಸುತ್ತಿದ್ದಾರೆ. ನಿಮ್ಮಲ್ಲಿರುವ ಟಿಕೆಟ್‌ ಕೊಡುವಂತೆ ಭಾರತ ತಂಡದ ಅಭಿಮಾನಿಗಳಿಗೆ ಕಿವೀಸ್‌ ಪಡೆಯ ಜಿಮ್ಮಿ ನೀಶಮ್‌ ಕೇಳಿದ್ದಾರೆ.

30 ಸಾವಿರ ಜನರು ಪಂದ್ಯ ವೀಕ್ಷಿಸಬಹುದಾದ ಲಾರ್ಡ್ಸ್ ಕ್ರೀಡಾಂಗಣದ ಪ್ರವೇಶಕ್ಕೆ ನ್ಯೂಜಿಲೆಂಡ್‌ ಮತ್ತು ಇಂಗ್ಲೆಂಡ್‌ ತಂಡದ ಅಭಿಮಾನಿಗಳು ಕಾತರರಾಗಿದ್ದಾರೆ. ಆದರೆ, ಈಗಾಗಲೇ ಬಹುತೇಕ ಟಿಕೆಟ್‌ಗಳು ಮಾರಾಟವಾಗಿದ್ದು, ಸ್ಟಬ್‌ಹಬ್‌ ರೀತಿಯ ಕೆಲವು ವೆಬ್‌ಸೈಟ್‌ಗಳಲ್ಲಿ ಅಧಿಕ ಬೆಲೆ ಟಿಕೆಟ್‌ಗಳು ಲಭ್ಯವಿದೆ.

ತಿಂಗಳ ಹಿಂದೆ ₹34,000–₹24,000 ಬೆಲೆಗೆ ಫೈನಲ್‌ ಪಂದ್ಯದ ಟಿಕೆಟ್‌ಗಳು ಮಾರಾಟವಾಗಿವೆ. ಆದರೆ, ಅಂತಿಮ ಕ್ಷಣದಲ್ಲಿ ಒಂದು ಟಿಕೆಟ್‌ ಬೆಲೆ ಕನಿಷ್ಠ ₹80 ಸಾವಿರ ಹಾಗೂಗರಿಷ್ಠ ₹14 ಲಕ್ಷಕ್ಕೆಏರಿಕೆಯಾಗಿದೆ.ಐಸಿಸಿ ಈಗಾಗಲೇ ಟಿಕೆಟ್‌ಗಳು ಲಭ್ಯವಿಲ್ಲ ಎಂದು ಪ್ರಕಟಿಸಿಕೊಂಡಿದೆ. ಕ್ರಿಕೆಟ್‌ ಪಡೆದವರು ಅಧಿಕೃತ ವೆಬ್‌ಸೈಟ್‌ ಮೂಲಕ ಟಿಕೆಟ್‌ ಹಿಂದಿರುಗಿಸಿದರೆ, ಮತ್ತೆ ಐಸಿಸಿ ಟಿಕೆಟ್‌ಗಳನ್ನು ಮಾರಾಟಕ್ಕೆ ಇಡಲಿದೆ. ಆದರೆ, ಟಿಕೆಟ್‌ ಹಿಂದಿರುಗಿಸಿದ ವ್ಯಕ್ತಿಗೆ ಮುಖಬೆಲೆ ಮಾತ್ರ ಸಿಗಲಿದೆ. ಬಹುತೇಕ ಟಿಕೆಟ್‌ಗಳು ಖಾಸಗಿ ವೆಬ್‌ಸೈಟ್‌ಗಳಲ್ಲಿ ದುಪ್ಪಟ್ಟು ಬೆಲೆಗೆ ಮಾರಾಟಕ್ಕಿವೆ.

ನ್ಯೂಜಿಲೆಂಡ್‌ ಕ್ರಿಕೆಟಿಗ ನೀಶಮ್‌, ಭಾರತ ತಂಡದ ಕ್ರಿಕೆಟ್‌ ಅಭಿಮಾನಿಗಳಿಗೆ ‘ನಿಮಗೆ ಪಂದ್ಯ ವೀಕ್ಷಿಸಲು ಮನಸ್ಸಿಲ್ಲದಿದ್ದರೆದಯವಿಟ್ಟು ನೀವು ತೆಗೆದುಕೊಂಡಿರುವ ಟಿಕೆಟ್‌ಗಳನ್ನು ಅಧಿಕೃತ ಟಿಕೆಟ್‌ ವಿತರಕರಿಗೆಮರಳಿಸುವ ಮೂಲಕ ಕ್ರಿಕೆಟ್‌ ಅಭಿಮಾನಿಗಳಿಗೆ ಪಂದ್ಯ ವೀಕ್ಷಿಸಲು ಅನುವು ಮಾಡಿಕೊಡಿ. ಈ ಸಂದರ್ಭ ದೊಡ್ಡ ಲಾಭ ಮಾಡಿಕೊಳ್ಳಲು ಉತ್ತೇಜಿಸುತ್ತದೆ ಎಂಬುದು ತಿಳಿದಿದೆ. ಆದರೆ, ಲಾಭಕ್ಕಿಂತ ನಿಜವಾದ ಕ್ರಿಕೆಟ್‌ ಅಭಿಮಾನಿಗಳಿಗೆ ದಯವಿಟ್ಟುಅವಕಾಶ ಮಾಡಿಕೊಡಿ’ ಎಂದು ಟ್ವೀಟ್‌ ಮೂಲಕ ಮನವಿ ಮಾಡಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಸಚಿನ್ ಎಂಬ ಭಾರತೀಯ ಕ್ರಿಕೆಟ್‌ ಅಭಿಮಾನಿಯೊಬ್ಬರು ‘ನಿಮಗೆ ಯಾರು ಹೇಳಿದ್ದು, ಟಿಕೆಟ್‌ ಖರಿದಿಸಿದ್ದ ಭಾರತೀಯರು ಹೆಚ್ಚಿನ ಬೆಲೆಗೆ ಮಾರುತ್ತಿದ್ದಾರೆಂದು? ಅಷ್ಟಕ್ಕೂ ಮುಂಬರುವ ಪಂದ್ಯವನ್ನು ನಾವು ನೋಡಿ ಆನಂದಿಸುತ್ತೇವೆ’ ಎಂದು ಟ್ವೀಟಿಸಿದ್ದಾರೆ. ಇನ್ನು ಕೆಲವು ಭಾರತೀಯರು ನಾವು ನ್ಯೂಜಿಲೆಂಡ್‌ಗೆ ಬೆಂಬಲಿಸುತ್ತೇವೆ ಎಂದು ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ.

ಪ್ರಸ್ತುತ ಸ್ಟಬ್‌ಹಬ್‌ ಜಾಲತಾಣದಲ್ಲಿ ಪ್ರತಿ ಟಿಕೆಟ್‌ಗೆ ಕನಿಷ್ಠ ಬೆಲೆ ₹75 ಸಾವಿರ ಹಾಗೂ ಗರಿಷ್ಠ ₹1.7 ಲಕ್ಷವಿದೆ. ಇನ್ನೂ ಬಹಳಷ್ಟು ಟಿಕೆಟ್‌ಗಳು ಇಲ್ಲಿ ಲಭ್ಯವಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.