ADVERTISEMENT

ಕ್ರಿಕೆಟ್‌: ನಾಲ್ಕು ರಾಷ್ಟ್ರಗಳಿಗೆ ನ್ಯೂಜಿಲೆಂಡ್ ಆತಿಥ್ಯ

ಪಿಟಿಐ
Published 11 ಆಗಸ್ಟ್ 2020, 11:46 IST
Last Updated 11 ಆಗಸ್ಟ್ 2020, 11:46 IST
ಕೇನ್‌ ವಿಲಿಯಮ್ಸನ್‌–ರಾಯಿಟರ್ಸ್ ಚಿತ್ರ
ಕೇನ್‌ ವಿಲಿಯಮ್ಸನ್‌–ರಾಯಿಟರ್ಸ್ ಚಿತ್ರ   

ಆಕ್ಲಂಡ್‌: ಪಾಕಿಸ್ತಾನ, ಆಸ್ಟ್ರೇಲಿಯಾ, ಬಾಂಗ್ಲಾದೇಶ ಹಾಗೂ ವೆಸ್ಟ್‌ ಇಂಡೀಸ್‌ ತಂಡಗಳು ಮುಂದಿನ ವರ್ಷದ ಬೇಸಿಗೆಯಲ್ಲಿ ನ್ಯೂಜಿಲೆಂಡ್‌ನಲ್ಲಿ ಸರಣಿ ಆಡಲು ಒಪ್ಪಿಕೊಂಡಿವೆ ಎಂದು ನ್ಯೂಜಿಲೆಂಡ್‌ ಕ್ರಿಕೆಟ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡೇವಿಡ್‌ ವೈಟ್‌ ತಿಳಿಸಿದ್ದಾರೆ.

ಸದ್ಯ ಇಂಗ್ಲೆಂಡ್‌ ಮತ್ತು ವೇಲ್ಸ್‌ ಕ್ರಿಕೆಟ್‌ ಮಂಡಳಿಯು ನಡೆಸುತ್ತಿರುವಂತೆ, ನ್ಯೂಜಿಲೆಂಡ್‌ ಕ್ರಿಕೆಟ್ (ಎನ್‌ಝಡ್‌ಸಿ) ಕೂಡ ಜೀವ ಸುರಕ್ಷಾ ವಾತಾವರಣದಲ್ಲಿ ಸರಣಿಗಳನ್ನು ಆಯೋಜಿಸುವ ಪ್ರಯತ್ನ ನಡೆಸಿದೆ.

‘ನಾವು ವೆಸ್ಟ್‌ ಇಂಡೀಸ್‌, ಪಾಕಿಸ್ತಾನ, ಆಸ್ಟ್ರೇಲಿಯಾ ಹಾಗೂ ಬಾಂಗ್ಲಾದೇಶ ತಂಡಗಳನ್ನು ಸಂಪರ್ಕಿಸಿದ್ದೇವೆ. ಅವರು ಇಲ್ಲಿಗೆ ಆಗಮಿಸುವುದನ್ನು ಖಚಿತಪಡಿಸಿದ್ದಾರೆ. ಹೀಗಾಗಿ 37 ದಿನಗಳ ಅಂತರರಾಷ್ಟ್ರೀಯ ಕ್ರಿಕೆಟ್‌ ಸಾಧ್ಯವಾಗಲಿದೆ‘ ಎಂದು ವೈಟ್‌ ಹೇಳಿದ್ದಾಗಿ ಇಎಸ್‌ಪಿನ್‌ಕ್ರಿಕ್‌ಇನ್ಫೊ ತಿಳಿಸಿದೆ.

ADVERTISEMENT

ನ್ಯೂಜಿಲೆಂಡ್‌ಗೆ ಆಗಮಿಸುವ ಎಲ್ಲ ತಂಡಗಳಿಗೆ ಅಲ್ಲಿಯ ಸರ್ಕಾರ 14 ದಿನಗಳ ಕ್ವಾರಂಟೈನ್‌ ನಿಗದಿಪಡಿಸಿದೆ.

ಭವಿಷ್ಯದ ಪ್ರವಾಸ ಕಾರ್ಯಕ್ರಮದ (ಎಫ್‌ಟಿಟಿ) ಪ್ರಕಾರ, ನ್ಯೂಜಿಲೆಂಡ್‌ ಕ್ರಿಕೆಟ್‌ ಮಂಡಳಿಯು ವೆಸ್ಟ್‌ ಇಂಡೀಸ್‌ ಹಾಗೂ ಪಾಕಿಸ್ತಾನ ತಂಡಗಳ ವಿರುದ್ಧ ತಲಾ ಒಂದು ಟೆಸ್ಟ್‌ ಹಾಗೂ ಟ್ವೆಂಟಿ–20 ಸರಣಿಗೆ ಆತಿಥ್ಯ ವಹಿಸಲಿದೆ. ಈ ಟೆಸ್ಟ್‌ ಸರಣಿಯು ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ನ ಭಾಗವಾಗಿ ನಡೆಯಲಿದೆ.

ಬಾಂಗ್ಲಾದೇಶ ತಂಡವು ಏಕದಿನ ಹಾಗೂ ಟಿ20 ಸರಣಿಗಳನ್ನು ಆಡಲಿದ್ದು, ಬಳಿಕ ಆಸ್ಟ್ರೇಲಿಯಾ ತಂಡ ಟಿ20 ಸರಣಿಯಲ್ಲಿ ನ್ಯೂಜಿಲೆಂಡ್‌ಅನ್ನು ಎದುರಿಸಲಿದೆ.

ಕಿವೀಸ್‌ನ ಮಹಿಳಾ ತಂಡವು ಸೆಪ್ಟೆಂಬರ್‌ನಲ್ಲಿ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದ್ದು, ಆಸ್ಟ್ರೇಲಿಯಾ ತಂಡವು ಫೆಬ್ರುವರಿಯಲ್ಲಿ ನ್ಯೂಜಿಲೆಂಡ್‌ನಲ್ಲಿ ಆಡಲಿದೆ ಎಂದೂ ವೈಟ್‌ ಮಾಹಿತಿ ನೀಡಿದರು.

ಕೋವಿಡ್‌–19 ಸೋಂಕು ಪ್ರಕರಣಗಳಲ್ಲಿ ಏರಿಕೆ ಕಂಡುಬಂದ ಕಾರಣ ನ್ಯೂಜಿಲೆಂಡ್‌ನಲ್ಲಿ ಮಾರ್ಚ್‌ನಿಂದ ಕ್ರಿಕೆಟ್‌ ಚಟುವಟಿಕೆಗಳು ಸ್ಥಗಿತಗೊಂಡಿದ್ದವು. ನಾಯಕ ಕೇನ್‌ ವಿಲಿಯಮ್ಸನ್‌, ವೇಗಿ ಟ್ರೆಂಟ್‌ ಬೌಲ್ಟ್‌‌ ಹಾಗೂ ರಾಸ್‌ ಟೇಲರ್ ಸೇರಿದಂತೆ ದೇಶದ ಪ್ರಮುಖ ಆಟಗಾರರು ಕಳೆದ ತಿಂಗಳು ಅಭ್ಯಾಸಕ್ಕೆ ಮರಳಿದ್ದಾರೆ.

ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ), 2021ರ ಫೆಬ್ರುವರಿಯಲ್ಲಿ ನ್ಯೂಜಿಲೆಂಡ್‌ನಲ್ಲಿ ನಡೆಯಬೇಕಿದ್ದ ಮಹಿಳೆಯರ ಏಕದಿನ ವಿಶ್ವಕಪ್‌ ಟೂರ್ನಿಯನ್ನು ಮುಂದೂಡಿದೆ. ಅರ್ಹತಾ ಟೂರ್ನಿಗಳಿಗೆ ಹಾಗೂ ಟೂರ್ನಿಯ ಸಿದ್ಧತೆಗೆ ಸಾಕಷ್ಟು ಸಮಯ ಇಲ್ಲದ ಕಾರಣ ಈ ನಿರ್ಧಾರ ಕೈಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.