
ಅಹಮದಾಬಾದ್ (ಪಿಟಿಐ): ಸೂಪರ್ ಎಂಟರ ಘಟ್ಟಕ್ಕೆ ಅರ್ಹತೆಯನ್ನು ಬಹುತೇಕ ಖಚಿತಪಡಿಸಿಕೊಂಡಿರುವ ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಶನಿವಾರ ‘ಡಿ’ ಗುಂಪಿನ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಈ ಪಂದ್ಯ ಗುಂಪಿನಲ್ಲಿ ಅಗ್ರಸ್ಥಾನ ಪಡೆಯುವ ತಂಡವನ್ನೂ ನಿರ್ಧರಿಸಲಿದೆ.
ಉಭಯ ತಂಡಗಳು ಆಡಿರುವ ಎರಡೂ ಪಂದ್ಯಗಳನ್ನು ಗೆದ್ದುಕೊಂಡಿವೆ. ಆದರೆ ಭಿನ್ನ ಶೈಲಿಯಲ್ಲಿ. ನ್ಯೂಜಿಲೆಂಡ್ ಪಕ್ಕಾ ವೃತ್ತಿಪರ ರೀತಿಯಲ್ಲಿ ಎದುರಾಳಿಗಳನ್ನು ಸೋಲಿಸಿದೆ. ಅಫ್ಗಾನಿಸ್ತಾನದ ವಿರುದ್ಧ 183 ರನ್ ಗುರಿಯನ್ನು ಕಿವೀಸ್ ಪಡೆ ಕೇವಲ 17.5 ಓವರುಗಳಲ್ಲಿ ತಲುಪಿತ್ತು. ಯುಎಇ ವಿರುದ್ಧ ಹತ್ತು ವಿಕೆಟ್‌ಗಳ ಅಧಿಕಾರಯುತ ಜಯ ಸಾಧಿಸಿತ್ತು. ಆರಂಭ ಆಟಗಾರ ಸೀಫರ್ಟ್ ಎರಡೂ ಪಂದ್ಯಗಳಲ್ಲಿ ಅರ್ಧ ಶತಕ ಸಿಡಿಸಿದ್ದಾರೆ.
ಒಂದೆಡೆ ಸ್ಯಾಂಟ್ನರ್ ಪಡೆ ಎದುರಾಳಿಗಳನ್ನು ಬಗ್ಗಬಡಿದರೆ, ದಕ್ಷಿಣ ಆಫ್ರಿಕಾ ತಂಡವು ಒತ್ತಡದ ಸನ್ನಿವೇಶ ಎದುರಿಸಿ ಯಶಸ್ಸು ಗಳಿಸಿದೆ. ಕೆನಡಾ ವಿರುದ್ಧ ಗೆಲುವಿಗೆ ಅಷ್ಟೇನೂ ಪ್ರಯಾಸವಾಗದಿದ್ದರೂ, ಅಫ್ಗಾನಿಸ್ತಾನ ವಿರುದ್ಧ ಪಂದ್ಯವು ‘ಡಬಲ್ ಸೂಪರ್‌ಓವರ್’ಗೆ ಹೋಗಿತ್ತು. ಡೇವಿಡ್ ಮಿಲ್ಲರ್ ಮತ್ತು ಟ್ರಿಸ್ಟನ್ ಸ್ಟನ್ಸ್ ಆಟ ಗೆಲುವಿಗೆ ನೆರವಾಗಿತ್ತು.
ದಕ್ಷಿಣ ಆಫ್ರಿಕಾ ಎರಡೂ ಪಂದ್ಯಗಳನ್ನು ಇದೇ ತಾಣದಲ್ಲಿ ಆಡಿದ್ದು, ಇಲ್ಲಿನ ಪಿಚ್, ಪರಿಸ್ಥಿತಿಗೆ ಒಗ್ಗಿಕೊಂಡಿದೆ. ನ್ಯೂಜಿಲೆಂಡ್‌ಗೆ ಈ ವಿಷಯದಲ್ಲಿ ಸವಾಲು ಇದೆ.
ಕಿವೀಸ್ ಪಡೆಯ ಆರಂಭ ಆಟಗಾರರಾದ ಸೀಫರ್ಟ್ ಮತ್ತು ಫಿನ್ ಅಲೆನ್ ಅವರು ಹರಿಣಗಳ ಪಡೆಯ ಆರಂಭಿಕ ವೇಗದ ಬೌಲರ್‌ಗಳಾದ ಕಗಿಸೊ ರಬಾಡ, ಲುಂಗಿ ಎನ್‌ಗಿಡಿ ಅವರನ್ನು ಹೇಗೆ ನಿಭಾಯಿಸಬಲ್ಲರೆಂಬ ಕುತೂಹಲವಿದೆ. ಅದೇ ರೀತಿ ಮ್ಯಾಟ್ ಹೆನ್ರಿ ಮತ್ತು ಲಾಕಿ ಫರ್ಗ್ಯೂಸನ್ ಅವರು ಕ್ವಿಂಟನ್ ಡಿಕಾಕ್ ಮತ್ತು ರಿಯಾನ್ ರಿಕೆಲ್ಟನ್ ಅವರನ್ನು ಪವರ್‌ಪ್ಲೇ ಅವಧಿಯಲ್ಲಿ ನಿಯಂತ್ರಿಸಬಲ್ಲರೇ ಎಂಬ ಆಸಕ್ತಿಯೂ ಇದೆ. ನಾಯಕ ಏಡನ್ ಮರ್ಕರಂ– ಮಿಚೆಲ್ ಸ್ಯಾಂಟ್ನರ್ ಹಣಾಹಣಿಯ ಮೇಲೂ ಕುತೂಹಲದ ಕಣ್ಣುಗಳಿವೆ. ಸ್ಯಾಂಟ್ನರ್ ಅವರು ಯುಎಇ ವಿರುದ್ಧ 4 ಓವರುಗಳಲ್ಲಿ ತೆತ್ತಿದ್ದು 23 ರನ್‌ಗಳನ್ನಷ್ಟೇ.
ಪಂದ್ಯ ಆರಂಭ: ರಾತ್ರಿ 7.00
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.