ADVERTISEMENT

ಐಪಿಎಲ್ ನಡೆಯುತ್ತಿರುವುದೇ ಮುಖ್ಯ, ಉಳಿದೆದ್ದಲ್ಲವೂ ಗೌಣ: ಮಯಂಕ್ ಅಗರವಾಲ್

ಪಿಟಿಐ
Published 1 ಸೆಪ್ಟೆಂಬರ್ 2020, 14:33 IST
Last Updated 1 ಸೆಪ್ಟೆಂಬರ್ 2020, 14:33 IST
ಮಯಂಕ್ ಅಗರವಾಲ್
ಮಯಂಕ್ ಅಗರವಾಲ್   

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್ ಟೂರ್ನಿಯು ನಡೆಯಲಿದೆ ಎನ್ನುವುದೇ ಸಂತಸದ ವಿಚಾರ. ಅದರ ಮುಂದೆ ಉಳಿದ ಸಮಸ್ಯೆಗಳೆಲ್ಲವೂ ಗೌಣ ಎಂದು ಕಿಂಗ್ಸ್‌ ಇಲೆವನ್ ಪಂಜಾಬ್ ತಂಡದ ಆಟಗಾರ ಮಯಂಕ್ ಅಗರವಾಲ್ ಹೇಳಿದ್ದಾರೆ.

‘ಜೀವ ಸುರಕ್ಷಾ ನಿಯಮಗಳ ಕುರಿತು ಆಸಮಾಧಾನ ಅಥವಾ ಯಾವುದೇ ದೊಡ್ಡಮಟ್ಟದ ನಿರೀಕ್ಷೆಗಳು ನನಗಿಲ್ಲ. ಇಲ್ಲಿ ನೆಟ್ಸ್‌ನಲ್ಲಿ ಅಭ್ಯಾಸ ಮಾಡುವಾಗ ಐದಾರು ತಿಂಗಳ ಹಿಂದೆ ಇದ್ದ ಲಯಕ್ಕೆ ಮರಳುವ ಪ್ರಯತ್ನ ಮಾಡುತ್ತಿದ್ದೇನೆ ಅಷ್ಟೇ. ಎಲ್ಲಿ ನಿಲ್ಲಿಸಿದ್ದೆನೋ ಅಲ್ಲಿಂದ ಮತ್ತೆ ಆರಂಭಿಸುವ ಪ್ರಯತ್ನವನ್ನಷ್ಟೇ ಮಾಡುತ್ತಿದ್ದೇನೆ. ಅಭ್ಯಾಸದ ಮೊದಲ ಮೂರ್ನಾಲ್ಕು ದಿನಗಳಲ್ಲಿ ’ ಎಂದು ಬೆಂಗಳೂರಿನ ಮಯಂಕ್ ಮಂಗಳವಾರ ಹೇಳಿದ್ದಾರೆ.

‘ಫಿಟ್‌ನೆಸ್‌ ವ್ಯಾಯಾಮಗಳ ಮೂಲಕ ನಿಧಾನವಾಗಿ ದೈಹಿಕ ಕ್ಷಮತೆಯನ್ನು ಮರಳಿ ಗಳಿಸಿಕೊಳ್ಳುತ್ತಿದ್ದೇನೆ. ಬ್ಯಾಟಿಂಗ್ ಲಯ ಕಂಡುಕೊಂಡರೆ ಉಳಿದೆದ್ದಲ್ಲವೂ ಸರಿಯಾಗುತ್ತವೆ. ಇಲ್ಲಿಯ ಹೆಚ್ಚು ಉಷ್ಣ ವಾತಾವರಣ ಇದೆ. ಮೊದಲು ಇಲ್ಲಿಯ ಹವಾಮಾನಕ್ಕೆ ಹೊಂದಿಕೊಳ್ಳುವುದು ಮುಖ್ಯ. ಆದಕ್ಕೆ ತಕ್ಕಂತೆ ಅಭ್ಯಾಸದ ಮಾದರಿಯನ್ನು ರೂಪಿಸಲಾಗಿದೆ’ ಎಂದು 29 ವರ್ಷದ ಮಯಂಕ್ ಹೇಳಿದರು.

ADVERTISEMENT

ಬೆಂಗಳೂರಿನಿಂದ ತಂಡವು ಯುಎಇಗೆ ಪ್ರಯಾಣಿಸಿತ್ತು. ದುಬೈಗೆ ಹೋದ ನಂತರ ಆರು ದಿನಗಳ ಪ್ರತ್ಯೇಕವಾಸ ಮತ್ತು ಮೂರು ಕೋವಿಡ್‌–19 ಪರೀಕ್ಷೆಗಳಿಗೆ ಆಟಗಾರರನ್ನು ಒಳಪಡಿಸಲಾಗಿತ್ತು. ಎಲ್ಲರ ಫಲಿತಾಂಶವೂ ಸೋಂಕುರಹಿತ ಎಂದು ಖಚಿತವಾದ ನಂತರ ಜೀವ ಸುರಕ್ಷಾ ವಾತಾವರಣದಲ್ಲಿ ಅಭ್ಯಾಸಕ್ಕೆ ಅನುವು ಮಾಡಿಕೊಡಲಾಗಿದೆ. ಆಟಗಾರರು ತಮ್ಮ ಕೋಣೆಗಳಲ್ಲಿಯೇ ಇರಬೇಕು. ಬೇರೆಯವರ ಕೋಣೆಗಳಿಗೆ ಹೋಗದಿರುವುದು ಮತ್ತು ಅಭ್ಯಾಸದ ಸಂದರ್ಭದಲ್ಲಿಯೂ ಅಂತರ ಕಾಪಾಡಿಕೊಳ್ಳುವ ನಿಯಮಗಳನ್ನು ವಿಧಿಸಲಾಗಿದೆ.

ಈ ಹೊಸ ನಿಯಮಗಳಿಂದ ಒತ್ತಡ ಹೆಚ್ಚುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಮಯಂಕ್, ‘ವೃತ್ತಿಪರ ಆಟಗಾರರು ಮಾನಸಿಕವಾಗಿ ಗಟ್ಟಿಯಾಗಿರುತ್ತಾರೆ. ನಾನು ಸೇರಿದಂತೆ ಎಲ್ಲ ಆಟಗಾರರೂ ಈ ಪರಿಸ್ಥಿತಿಯನ್ನು ನಿಭಾಯಿಸುವ ಸಾಮರ್ಥ್ಯ ಹೊಂದಿದ್ದೇವೆ’ ಎಂದರು.

ಕೆಲವು ವರ್ಷಗಳ ಹಿಂದೆ ವಿಪಾಸನಾ ಧ್ಯಾನ ಕಲಿತ ಕುರಿತು ಮಾತನಾಡಿದ ಮಯಂಕ್, ‘ಅದರಿಂದ ನನಗೆ ಬಹಳ ಅನುಕೂಲವಾಗಿದೆ. ಧ್ಯಾನದಲ್ಲಿ ಸಮಯ ವಿನಿಯೋಗಿಸುವುದರಿಂದ ಅಪಾರ ಪ್ರಮಾಣದ ಪ್ರಯೋಜನವಾಗಿದೆ. ನನ್ನ ವ್ಯಕ್ತಿತ್ವ ರೂಪುಗೊಂಡಿದೆ. ದೇಹದ ನರಮಂಡಲವನ್ನು ಶಾಂತಚಿತ್ತ ಮತ್ತು ಸುಸ್ಥಿತಿಯಲ್ಲಿಡಲು ಧ್ಯಾನ ಸಹಕಾರಿ’ ಎಂದರು.

‘ಕಿಂಗ್ಸ್‌ ಇಲೆವನ್ ಪಂಜಾಬ್ ತಂಡದ ಆಡಳಿತವು ತಂಡದ ಎಲ್ಲ ಆಟಗಾರರೂ ಪರಸ್ಪರ ಸೌಹಾರ್ದದಿಂದ ಇರುವ ವಾತಾವರಣ ನಿರ್ಮಿಸಿದ್ದಾರೆ. ಪ್ರತ್ಯೇಕವಾಸ ಮತ್ತು ಪ್ರತ್ಯೇಕ ಕೋಣೆಗಳಲ್ಲಿ ಏಕಾಂಗಿಯಾಗಿರುವುದು ಎಂದಿಗೂ ನನಗೆ ಒತ್ತಡ ಎನಿಸಿಲ್ಲ. ದೀರ್ಘ ಅವಧಿಯ ನಂತರ ಒಂದು ಟೂರ್ನಿ ನಡೆಯಲಿದೆ ಮತ್ತು ನಾವು ಆಡಲಿದ್ದೇವೆ ಎನ್ನುವ ವಿಷಯ ದೊಡ್ಡದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.