ADVERTISEMENT

ಐಪಿಎಲ್‌: ಸಮಯ ಬದಲಿಲ್ಲ; ಫೈನಲ್ ಮುಂಬೈನಲ್ಲಿ

ಪಿಟಿಐ
Published 27 ಜನವರಿ 2020, 19:45 IST
Last Updated 27 ಜನವರಿ 2020, 19:45 IST
   

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌) ಕ್ರಿಕೆಟ್ ಟೂರ್ನಿಯ ರಾತ್ರಿ ಪಂದ್ಯಗಳ ಸಮಯ ಬದಲಿಸದೇ ಇರಲು ಟೂರ್ನಿಯ ಆಡಳಿತ ಸಮಿತಿ ಸೋಮವಾರ ನಿರ್ಧರಿಸಿದೆ. ಫೈನಲ್ ಹಣಾಹಣಿಯನ್ನು ಮುಂಬೈನಲ್ಲಿ ನಡೆಸುವುದಕ್ಕೂ ನಿರ್ಧರಿಸಲಾಗಿದೆ.

ಸಮಿತಿ ಸಭೆಯ ನಂತರ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮಾಹಿತಿ ನೀಡಿದರು. ‘ರಾತ್ರಿ ಪಂದ್ಯಗಳು ಎಂಟು ಗಂಟೆಗೇ ಆರಂಭವಾಗಲಿವೆ. ಎರಡು ಪಂದ್ಯಗಳು ಇರುವ ದಿನಗಳನ್ನು ಈ ಬಾರಿ ಕೇವಲ ಐದಕ್ಕೆ ಇಳಿಸಲಾಗಿದೆ’ ಎಂದು ಗಂಗೂಲಿ ತಿಳಿಸಿದರು.

‘ಈ ಬಾರಿ ಕಂಕಷನ್ ಸಬ್‌ಸ್ಟಿಟ್ಯೂಟ್ ನಿಯಮ ಜಾರಿಗೆ ತರಲಾಗುವುದು. ಮೂರನೇ ಅಂಪೈರ್‌ ನೋಬಾಲ್‌ ತೀರ್ಪು ಕೊಡುವ ಪದ್ಧತಿಗೂ ನಾಂದಿ ಹಾಡಲಾಗುವುದು’ ಎಂದು ಅವರು ತಿಳಿಸಿದರು.

ADVERTISEMENT

ಮಾರ್ಚ್ 29ರಂದು ಐಪಿಎಲ್ ಆರಂಭಗೊಳ್ಳಲಿದ್ದು ಇದಕ್ಕೂ ಮೂರು ದಿನ ಮೊದಲು ವಿಶ್ವದ ಪ್ರಮುಖ ಆಟಗಾರರನ್ನು ಒಳಗೊಂಡ ತಂಡಗಳ ನಡುವೆ ಪ್ರದರ್ಶನ ಪಂದ್ಯ ನಡೆಯಲಿದೆ. ಈ ಪಂದ್ಯದ ಸ್ಥಳವನ್ನು ಇನ್ನೂ ನಿಗದಿ ಮಾಡಲಿಲ್ಲ ಎಂದೂ ಅವರು ವಿವರಿಸಿದರು.

ಬ್ಯಾಟಿಂಗ್ ವೇಳೆ ಆಟಗಾರರು ಗಾಯಗೊಳ್ಳುವ ಪ್ರಕರಣಗಳು ಹೆಚ್ಚುತ್ತಿದ್ದಂತೆ ಕಂಕಷನ್ ಸಬ್‌ಸ್ಟಿಟ್ಯೂಟ್ ಪದ್ಧತಿಯನ್ನು ಜಾರಿಗೆ ತರಲಾಗಿತ್ತು. ಕಳೆದ ವರ್ಷ ಲಾರ್ಡ್ಸ್‌ನಲ್ಲಿ ನಡೆದಿದ್ದ ಆ್ಯಷಸ್ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಅವರ ಬದಲಿಗೆ ಮಾರ್ನಸ್ ಲಾಬುಶೇನ್ ಕಣಕ್ಕೆ ಇಳಿಯುವುದರೊಂದಿಗೆ ಈ ಪದ್ಧತಿ ಮೊದಲ ಬಾರಿ ಜಾರಿಗೆ ಬಂದಿತ್ತು. ಜನವರಿ 14ರಂದು ಆಸ್ಟ್ರೇಲಿಯಾ ವಿರುದ್ಧದ ಏಕದಿನ ಪಂದ್ಯದಲ್ಲಿ ಭಾರತದ ರಿಷಭ್ ಪಂತ್ ಗಾಯಗೊಂಡು ಮರಳಿದ್ದರು. ಅವರ ಬದಲಿಗೆ ಕೆ.ಎಲ್‌.ರಾಹುಲ್ ವಿಕೆಟ್ ಕೀಪಿಂಗ್ ಮಾಡಿದ್ದರು.

ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಏಕದಿನ ಸರಣಿಯಲ್ಲಿ ಮೂರನೇ ಅಂಪೈರ್‌ ನೋಬಾಲ್‌ ತೀರ್ಪು ನೀಡುವ ಪದ್ಧತಿಯನ್ನು ಮೊದಲ ಬಾರಿ ಜಾರಿಗೆ ತರಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.