ADVERTISEMENT

ಹಾರ್ದಿಕ್ ನನ್ನ ಪ್ರತಿಸ್ಪರ್ಧಿ ಅಲ್ಲ: ವಿಜಯಶಂಕರ್

ಪಿಟಿಐ
Published 21 ಮೇ 2019, 17:44 IST
Last Updated 21 ಮೇ 2019, 17:44 IST
ವಿಜಯಶಂಕರ್
ವಿಜಯಶಂಕರ್   

ನವದೆಹಲಿ: ‘ನಾನು ಹಾರ್ದಿಕ್ ಪಾಂಡ್ಯ ಅವರಿಗೆ ಪ್ರತಿಸ್ಪರ್ಧಿ ಅಲ್ಲ. ನಾವಿಬ್ಬರೂ ಸೇರಿ ಭಾರತಕ್ಕೆ ಪಂದ್ಯಗಳನ್ನು ಗೆದ್ದುಕೊಡುತ್ತೇವೆ’ ಎಂದು ಭಾರತ ಕ್ರಿಕೆಟ್ ತಂಡದ ಆಲ್‌ರೌಂಡರ್ ವಿಜಯಶಂಕರ್ ಹೇಳಿದರು.

ಇದೇ 30ರಿಂದ ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಆಡುವ ಭಾರತ ತಂಡದಲ್ಲಿ ತಮಿಳುನಾಡಿನ ವಿಜಯಶಂಕರ್ ಸ್ಥಾನ ಪಡೆದಿದ್ದಾರೆ.

ಸುದ್ದಿಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಅವರು,‘ಹಾರ್ದಿಕ್ ಉತ್ತಮ ಆಟಗಾರ. ನಾವೆಲ್ಲರೂ ಆಲ್‌ರೌಂಡರ್‌ಗಳು. ಆದರೆ ಪ್ರತಿಯೊಬ್ಬರೂ ವಿಭಿನ್ನ ಶೈಲಿ ಮತ್ತು ಸಾಮರ್ಥ್ಯಗಳನ್ನು ಹೊಂದಿದ್ದೇವೆ. ತಂಡದ ಗೆಲುವಿಗೆ ಮಹತ್ವದ ಕಾಣಿಕೆ ನೀಡುವುದು ನಮ್ಮ ಗುರಿ’ ಎಂದರು.

ADVERTISEMENT

‘ಅವಕಾಶ ಸಿಕ್ಕರೆ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತೇನೆ. ತಂಡಕ್ಕೆ ಅಗತ್ಯವಿರುವುದನ್ನು ನೀಡುವುದು ನನ್ನ ಕರ್ತವ್ಯ. ಆಡಳಿತದ ಸೂಚನೆಯಂತೆ ನಡೆದುಕೊಳ್ಳುತ್ತೇನೆ’ ಎಂದು ಹೇಳಿದರು.

‘ಚೆನ್ನೈನಲ್ಲಿ ಅಭ್ಯಾಸ ನಡೆಸುತ್ತಿದ್ದೇನೆ. ಐಪಿಎಲ್‌ನಲ್ಲಿ ಆಡುವಾಗ ಸನ್‌ರೈಸರ್ಸ್ ಹೈದರಾಬಾದ್ ತಂಡದಲ್ಲಿದ್ದೆ. ಅಲ್ಲಿ ಹಿರಿಯ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಅವರು ಉತ್ತಮ ಮಾರ್ಗದರ್ಶನ ನೀಡಿದರು’ ಎಂದರು.

‘ಒಳಾಂಗಣ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸುತ್ತಿದ್ದೇನೆ. ಆದರೆ ಆಲ್ಲಿ ಬೌಲಿಂಗ್ ಅಭ್ಯಾಸ ಮಾಡುವುದಿಲ್ಲ. ಹೊರಾಂಗಣದಲ್ಲಿ ಸಂಪೂರ್ಣ ರನ್‌ ಅಪ್ ತೆಗೆದುಕೊಂಡು ಬೌಲಿಂಗ್ ಮಾಡುತ್ತೇನೆ. ಪ್ರತಿ ಗಂಟೆಗೆ 120 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡುತ್ತೇನೆ’ ಎಂದು ಹೇಳಿದರು.

ಎಂಬಿಎ ವಿದ್ಯಾರ್ಥಿಯಾಗಿರುವ ಅವರು, ‘ಓದಲು ಸಮಯ ಸಿಗುತ್ತಿಲ್ಲ. ಕ್ರಿಕೆಟ್‌ನಲ್ಲಿ ಸಂಪೂರ್ಣ ತೊಡಗಿಸಿಕೊಂಡಿದ್ದೇನೆ. ಆದರೆ, ಎಂಬಿಎ ಮುಗಿಸಲು ಹಂಬಲ ಇದೆ. ಟೂರ್ನಿಯ ನಂತರ ಅತ್ತ ಗಮನ ಹರಿಸುವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.