ADVERTISEMENT

ನ್ಯೂಜಿಲೆಂಡ್ ಕ್ರಿಕೆಟಿಗ ಮಾರ್ಟನ್ ಗಪ್ಟಿಲ್ ನಿವೃತ್ತಿ

ಪಿಟಿಐ
Published 8 ಜನವರಿ 2025, 16:02 IST
Last Updated 8 ಜನವರಿ 2025, 16:02 IST
ನ್ಯೂಜಿಲೆಂಡ್ ತಂಡದ ಬ್ಯಾಟರ್ ಮಾರ್ಟಿನ್ ಗಪ್ಟಿಲ್  –ಎಎಫ್‌ಪಿ ಚಿತ್ರ
ನ್ಯೂಜಿಲೆಂಡ್ ತಂಡದ ಬ್ಯಾಟರ್ ಮಾರ್ಟಿನ್ ಗಪ್ಟಿಲ್  –ಎಎಫ್‌ಪಿ ಚಿತ್ರ   

ಆಕ್ಲೆಂಡ್: ನ್ಯೂಜಿಲೆಂಡ್ ತಂಡದ ಬ್ಯಾಟರ್ ಮಾರ್ಟಿನ್ ಗಪ್ಟಿಲ್ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಬುಧವಾರ ವಿದಾಯ ಹೇಳಿದ್ದಾರೆ. 

ಕಿವೀಸ್ ದೇಶದ ಕ್ರಿಕೆಟ್ ಕ್ಷೇತ್ರದ ಶ್ರೇಷ್ಠ ಬ್ಯಾಟರ್‌ಗಳಲ್ಲಿ ಒಬ್ಬರಾಗಿರುವ ಗಪ್ಟಿಲ್ ಭಾರತದ ಕ್ರಿಕೆಟಿಗರಿಗೆ ನೆನಪಿನಲ್ಲಿ ಉಳಿಯುವುದು 2019ರ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಹಿ ಅವರ ಫೀಲ್ಡಿಂಗ್ ಕೈಚಳಕದ ಮೂಲಕ. ಇಂಗ್ಲೆಂಡ್‌ನಲ್ಲಿ ನಡೆದಿದ್ದ ಟೂರ್ನಿಯ ಸೆಮಿಫೈನಲ್‌ನಲ್ಲಿ ಮಾರ್ಟಿನ್ ನೇರ ಥ್ರೋನಿಂದಾಗಿ ಮಹೇಂದ್ರಸಿಂಗ್ ಧೋನಿ ರನ್‌ಔಟ್ ಆಗಿದ್ದರು.  ಅದರೊಂದಿಗೆ ಭಾರತದ ಜಯದ ಆಸೆಯೂ ಕಮರಿತ್ತು. 

ಗಪ್ಟಿಲ್ ಅವರು 2009ರಲ್ಲಿ ಸೆಡಾನ್ ಪಾರ್ಕ್‌ನಲ್ಲಿ ನಡೆದಿದ್ದ ಟೆಸ್ಟ್ ಪಂದ್ಯದಲ್ಲಿ ಭಾರತದ ವಿರುದ್ಧ ಪದಾರ್ಪಣೆ ಮಾಡಿದ್ದರು. 2016ರಲ್ಲಿ ಅವರು ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನು ಭಾರತದ ವಿರುದ್ಧ ಆಡಿದ್ದರು. ಅದೂ  ಇಂದೋರಿನ ಹೋಳ್ಕರ್ ಮೈದಾನದಲ್ಲಿ. 

ADVERTISEMENT

ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಅವರು 2022ರವರೆಗೂ ಸಕ್ರಿಯರಾಗಿದ್ದರು. ನಂತರ ಅವರಿಗೆ ಕಿವೀಸ್ ತಂಡದಲ್ಲಿ ಸ್ಥಾನ ಲಭಿಸಿರಲಿಲ್ಲ. 

‘ಬಾಲ್ಯದಿಂದಲೂ ನ್ಯೂಜಿಲೆಂಡ್ ತಂಡದಲ್ಲಿ ಆಡುವ ಕನಸು ಕಂಡಿದ್ದೆ. ನಾನು ಬಹಳ ಅದೃಷ್ಟಶಾಲಿ. ಅದು ನನಸಾಗಿದೆ.  ಒಟ್ಟು 367 ಪಂದ್ಯಗಳಲ್ಲಿ ದೇಶವನ್ನು ಪ್ರತಿನಿಧಿಸುವ ಅವಕಾಶ ಲಭಿಸಿತು’ ಎಂದು 38 ವರ್ಷದ  ಮಾರ್ಟಿನ್ ಅವರು ನ್ಯೂಜಿಲೆಂಡ್‌ ಕ್ರಿಕೆಟ್‌ಗೆ ನೀಡಿರುವ ವಿದಾಯಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಬಲಗೈ ಬ್ಯಾಟರ್ ಮಾರ್ಟಿನ್ ಅವರು ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ಪದಾರ್ಪಣೆ ಪಂದ್ಯದಲ್ಲಿ ಶತಕ ಗಳಿಸಿದ್ದರು. 2015ರ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಕ್ವಾರ್ಟರ್‌ಫೈನಲ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ದ್ವಿಶತಕ ಗಳಿಸಿದ್ದರು. ಈ ಎರಡೂ ಸಾಧನೆಗಳನ್ನು ಮಾಡಿದ ನ್ಯೂಜಿಲೆಂಡ್ ತಂಡದ ಮೊದಲ ಬ್ಯಾಟರ್ ಅವರಾಗಿದ್ದರು. 

‘ಗಪ್ಟಿಲ್ ಅವರ ನಿವೃತ್ತಿ ಜೀವನವು ಸುಖಕರವಾಗಿರಲಿ. ಅವರೊಬ್ಬ ನಿಜವಾದ ಮ್ಯಾಚ್ ವಿನ್ನರ್. ಅವರೊಂದಿಗೆ ಇನಿಂಗ್ಸ್‌ ಆರಂಭಿಸುವ ಅದೃಷ್ಟ ನನ್ನದಾಗಿತ್ತು. ಹಲವು ದಿನಗಳು ಅವರೊಂದಿಗೆ ಆಡಿದ್ದೇನೆ. ಅವರ ಕೆಲವು ಅವಿಸ್ಮರಣೀಯ ಇನಿಂಗ್ಸ್‌ಗಳನ್ನು ಸಮೀಪದಿಂದ ನೋಡಿದ್ದೇನೆ’ ಎಂದು ಕಿವೀಸ್ ತಂಡದ ನಾಯಕ ಟಾಮ್ ಲೇಥಮ್ ಹೇಳಿದ್ದಾರೆ. 

ಮಾರ್ಟಿನ್ ಅವರು ಫ್ರ್ಯಾಂಚೈಸಿ ಲೀಗ್ ಕ್ರಿಕೆಟ್‌ನಲ್ಲಿ ತಮ್ಮ ಆಟ ಮುಂದುವರಿಸುವರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.