ADVERTISEMENT

ವಿಶ್ವ ಟೆಸ್ಟ್ ಫೈನಲ್, ಮಯಂಕ್ ಆಡಲಿ: ಮೈಕ್ ಹೆಸನ್ ಸಲಹೆ

ನ್ಯೂಜಿಲೆಂಡ್ ಮಾಜಿ ಕೋಚ್ ಮೈಕ್ ಹೆಸನ್ ಸಲಹೆ

ಪಿಟಿಐ
Published 9 ಜೂನ್ 2021, 14:19 IST
Last Updated 9 ಜೂನ್ 2021, 14:19 IST
ಮಯಂಕ್ ಅಗರವಾಲ್
ಮಯಂಕ್ ಅಗರವಾಲ್   

ನವದೆಹಲಿ: ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್ ಪಂದ್ಯದಲ್ಲಿ ಭಾರತ ತಂಡವು ಮಯಂಕ್ ಅಗರವಾಲ್ ಅವರಿಗೆ ಇನಿಂಗ್ಸ್ ಆರಂಭಿಸಲು ಅವಕಾಶ ನೀಡಬೇಕು ಎಂದು ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಮಾಜಿ ಕೋಚ್ ಮೈಕ್ ಹೆಸನ್ ಸಲಹೆ ನೀಡಿದ್ದಾರೆ.

‘ಭಾರತ ತಂಡವು ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್ ಅವರನ್ನೇ ಆರಂಭಿಕರಾಗಿ ಆಯ್ಕೆ ಮಾಡುವುದರ ಬದಲು ಮಯಂಕ್‌ಗೆ ಅವಕಾಶ ನೀಡುವುದು ಸೂಕ್ತ. ಹೋದ ಸಲ ನ್ಯೂಜಿಲೆಂಡ್‌ನಲ್ಲಿ ನಡೆದ ಸರಣಿಯಲ್ಲಿ ಕಿವೀಸ್ ಬೌಲರ್‌ಗಳನ್ನು ಎದುರಿಸಿದ ಅನುಭವ ಮಯಂಕ್‌ಗೆ ಇದೆ. ಆಗಿನ ಅನುಭವವು ತಂಡಕ್ಕೆ ನೆರವಾಗುವ ಸಾಧ್ಯತೆ ಇದೆ. ಅವರೂ ತಮ್ಮ ಲಯವನ್ನು ಮರಳಿ ಕಂಡುಕೊಳ್ಳಲು ಪ್ರಯತ್ನಿಸುವುದರಿಂದ ಉತ್ತಮ ಆಟವೂ ಮೂಡಿಬರಬಹುದು‘ ಎಂದಿದ್ದಾರೆ.

ಹೋದ ವರ್ಷ ಭಾರತ ತಂಡವು 0–2ರಿಂದ ಕಿವೀಸ್ ಎದುರು ಸರಣಿ ಸೋತಿತ್ತು. ಆ ಸರಣಿಯಲ್ಲಿ ಅರ್ಧಶತಕ ಗಳಿಸಿದ್ದ ಭಾರತದ ನಾಲ್ವರಲ್ಲಿ ಮಯಂಕ್ ಕೂಡ ಒಬ್ಬರಾಗಿದ್ದರು. ಆದರೆ. ಹೋದ ಬಾರಿ ಆಸ್ಟ್ರೇಲಿಯಾ ಪ್ರವಾಸದಲ್ಲಿ ಫಾರ್ಮ್ ಕಳೆದುಕೊಂಡಿದ್ದರು.

ADVERTISEMENT

‘ಸೌತಾಂಪ್ಟನ್ ಕ್ರೀಡಾಂಗಣವು ವಿಶಿಷ್ಟವಾಗಿದೆ. ಇಲ್ಲಿ ಅಭ್ಯಾಸ ಪಂದ್ಯಗಳನ್ನು ಆಡುವುದರಿಂದ ಆಟಗಾರರಿಗೆ ಹೆಚ್ಚು ಪ್ರಯೋಜನವಾಗುತ್ತದೆ. ಭಾರತದ ತಂಡವು ದೊಡ್ಡದಾಗಿದೆ. ಆದ್ದರಿಂದ ತಮ್ಮಲ್ಲಿಯೇ ಎರಡು ತಂಡಗಳನ್ನು ಮಾಡಿಕೊಂಡು ಅಭ್ಯಾಸ ಪಂದ್ಯಗಳನ್ನು ಆಡಿಕೊಂಡರೆ ಸೂಕ್ತ‘ ಎಂದು ಹೇಸನ್ ಅಭಿಪ್ರಾಯಪಟ್ಟರು.

‘ಫೈನಲ್ ಪಂದ್ಯ ಆಡುವ ಮುನ್ನ ನ್ಯೂಜಿಲೆಂಡ್ ತಂಡವು ಇಂಗ್ಲೆಂಡ್ ವಿರುದ್ಧ ಮೂರು ಟೆಸ್ಟ್‌ಗಳ ಸರಣಿ ಆಡುತ್ತಿದೆ. ಇದು ಸ್ಪಲ್ಪ ಒತ್ತಡ ಹೆಚ್ಚಿಸಬಹುದು. ಪ್ರತಿ ಟೆಸ್ಟ್ ಮಧ್ಯ ನಾಲ್ಕು ದಿನಗಳ ಬಿಡುವು ಮಾತ್ರ ಇದೆ. ಇದರಿಂದ ಬೌಲರ್‌ಗಳಿಗೆ ಹೆಚ್ಚು ವಿಶ್ರಾಂತಿ ನೀಡುವುದು ಸಾಧ್ಯವಾಗುವುದಿಲ್ಲ. ಡಬ್ಲ್ಯುಟಿಸಿ ಫೈನಲ್‌ಗೆ ಅವರನ್ನು ಲವಲವಿಕೆಯಿಂದ ಇರುವಂತೆ ಕಾಪಾಡುವುದೇ ದೊಡ್ಡ ಸವಾಲಾಗಲಿದೆ‘ ಎಂದು ಹೇಳಿದರು.

ಇದೇ 18ರಂದು ವಿಶ್ವ ಟೆಸ್ಟ್ ಫೈನಲ್ ಪಂದ್ಯವು ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.