ADVERTISEMENT

ಶತಕ ವಂಚಿತ ವಿಲಿಯಮ್ಸನ್; ಆಂಗ್ಲರ ವಿರುದ್ಧ ಕಿವೀಸ್‌ಗೆ ಮೊದಲ ದಿನದ ಗೌರವ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ನವೆಂಬರ್ 2024, 10:47 IST
Last Updated 28 ನವೆಂಬರ್ 2024, 10:47 IST
<div class="paragraphs"><p>ಕೇನ್ ವಿಲಿಯಮ್ಸನ್</p></div>

ಕೇನ್ ವಿಲಿಯಮ್ಸನ್

   

(ಚಿತ್ರ ಕೃಪೆ: X/@BLACKCAPS)

ಕ್ರೈಸ್ಟ್‌ಚರ್ಚ್: ಕೇನ್ ವಿಲಿಯಮ್ಸನ್ ಸಮಯೋಚಿತ ಅರ್ಧಶತಕದ ಬೆಂಬಲದಿಂದ ನ್ಯೂಜಿಲೆಂಡ್, ಪ್ರವಾಸಿ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಪ್ರಥಮ ಟೆಸ್ಟ್ ಪಂದ್ಯದ ಮೊದಲ ದಿನದಾಟದ ಅಂತ್ಯಕ್ಕೆ 83 ಓವರ್‌ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 319 ರನ್ ಗಳಿಸಿದೆ.

ADVERTISEMENT

ಮೂರು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ಇಂದು ಆರಂಭವಾಯಿತು. ಗಾಯದಿಂದಾಗಿ ಭಾರತದ ವಿರುದ್ಧದ ಸರಣಿಯಿಂದ ಹೊರಗುಳಿದಿದ್ದ ವಿಲಿಯಮ್ಸನ್ ಭರ್ಜರಿ ಪುನರಾಗಮನ ಮಾಡಿಕೊಂಡರು.

ಆಂಗ್ಲರ ಬೌಲಿಂಗ್ ಪಡೆಯನ್ನು ಸಮರ್ಥವಾಗಿ ಎದುರಿಸಿದ ವಿಲಿಯಮ್ಸನ್, 93 ರನ್‌ಗಳ ಉಪಯುಕ್ತ ಇನಿಂಗ್ಸ್ ಕಟ್ಟಿದರು. ಆದರೆ ಕೇವಲ ಏಳು ರನ್ ಅಂತರದಿಂದ ಟೆಸ್ಟ್ ಕ್ರಿಕೆಟ್‌ನಲ್ಲಿ 33ನೇ ಶತಕ ಗಳಿಸುವ ಅವಕಾಶದಿಂದ ವಂಚಿತರಾದರು.

197 ಎಸೆತಗಳನ್ನು ಎದುರಿಸಿದ ವಿಲಿಯಮ್ಸನ್‌ ಇನಿಂಗ್ಸ್‌ನಲ್ಲಿ 10 ಬೌಂಡರಿಗಳು ಸೇರಿದ್ದವು.

ನಾಯಕ ಟಾಮ್ ಲೇಥಮ್ (47), ರಚಿನ್ ರವೀಂದ್ರ (34) ಹಾಗೂ ಗ್ಲೆನ್ ಫಿಲಿಪ್ಸ್ (41*) ಉಪಯುಕ್ತ ಕಾಣಿಕೆ ನೀಡಿದರು.

ಇನ್ನುಳಿದಂತೆ ಡೆವೊನ್ ಕಾನ್ವೆ (2), ಡೆರಿಲ್ ಮಿಚೆಲ್ (19), ಟಾಮ್ ಬ್ಲಂಡೆಲ್ (17), ನಥನ್ ಸ್ಮಿತ್ (3) ಮ್ಯಾಟ್ ಹೆನ್ರಿ (18) ವೈಫಲ್ಯ ಅನುಭವಿಸಿದರು.

ಆದರೆ ದಿನದ ಕೊನೆಯ ಅವಧಿಯಲ್ಲಿ ಇಂಗ್ಲೆಂಡ್ ತಿರುಗೇಟು ನೀಡುವಲ್ಲಿ ಯಶಸ್ವಿಯಾಯಿತು. ಶೋಯಬ್ ಬಶೀರ್ ನಾಲ್ಕು ವಿಕೆಟ್ ಗಳಿಸಿ ಮಿಂಚಿದರು.

ಫಿಲಿಪ್ಸ್ ಹಾಗೂ ಟಿಮ್ ಸೌಥಿ (10*) ಎರಡನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಇಂಗ್ಲೆಂಡ್ ವಿರುದ್ಧದ ಸರಣಿಯ ಬಳಿಕ ಟಿಮ್ ಸೌಥಿ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಘೋಷಿಸಲಿದ್ದಾರೆ.

ಇತ್ತೀಚೆಗೆ ಭಾರತದಲ್ಲಿ ನಡೆದ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಐತಿಹಾಸಿಕ ಸಾಧನೆ ಮಾಡಿದ್ದ ನ್ಯೂಜಿಲೆಂಡ್, 3-0 ಅಂತರದ ಕ್ಲೀನ್ ಸ್ವೀಪ್ ಸಾಧನೆಗೈದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.