ADVERTISEMENT

ಏಕದಿನ ಕ್ರಿಕೆಟ್ ವಿಶ್ವಕಪ್ | ದಕ್ಷಿಣ ಆಫ್ರಿಕಾಕ್ಕೆ ರೋಚಕ ಜಯ: ಬಾಂಗ್ಲಾಗೆ ನಿರಾಶೆ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2025, 23:35 IST
Last Updated 13 ಅಕ್ಟೋಬರ್ 2025, 23:35 IST
<div class="paragraphs"><p>ಬಾಂಗ್ಲಾದೇಶ ತಂಡದ ಶೊರ್ನಾ ಅಖ್ತರ್‌ ಬ್ಯಾಟಿಂಗ್‌&nbsp; </p></div>

ಬಾಂಗ್ಲಾದೇಶ ತಂಡದ ಶೊರ್ನಾ ಅಖ್ತರ್‌ ಬ್ಯಾಟಿಂಗ್‌ 

   

 –ಐಸಿಸಿ ಚಿತ್ರ

ವಿಶಾಖಪಟ್ಟಣ:  ಆಲ್‌ರೌಂಡರ್ ಕ್ಲೊಯೆ ಟ್ರಯನ್ ಮತ್ತು ನದೀನ್ ಡಿ ಕ್ಲರ್ಕ್ ಅವರ ಅಮೋಘ ಆಟದಿಂದಾಗಿ ದಕ್ಷಿಣ ಆಫ್ರಿಕಾ ತಂಡವು ಮಹಿಳೆಯರ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ರೋಚಕ ಜಯಸಾಧಿಸಿತು. 

ADVERTISEMENT

ಎಸಿಎ– ವಿಡಿಸಿಎ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ  233 ರನ್‌ಗಳ ಗೆಲುವಿನ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡವು 49.3 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 235 ರನ್‌ ಗಳಿಸಿತು. ಅದಕ್ಕೆ ಕಾರಣವಾಗಿದ್ದು ಮರೈಝಾನ್ ಕಾಪ್ (56; 71ಎ) ಹಾಗೂ ಟ್ರಯನ್ (62; 69ಎ) ಅರ್ಧಶತಕಗಳು. ಅಲ್ಲದೇ ಕೊನೆಯ ಹಂತದಲ್ಲಿ ನದೀನ್ ಡಿ ಕರ್ಕ್ (ಔಟಾಗದೇ 37; 29ಎ) ಅವರು ತಂಡದ ಗೆಲುವಿಗೆ ಮಹತ್ವದ ಕಾಣಿಕೆ ನೀಡಿದರು. 

ಕೊನೆಯ ಹಂತದ ಓವರ್‌ಗಳಲ್ಲಿ ಬಾಂಗ್ಲಾದ ಫೀಲ್ಡರ್‌ಗಳು ಫೀಲ್ಡಿಂಗ್‌ನಲ್ಲಿ ಮಾಡಿದ ಕೆಲವು ಲೋಪಗಳು ಮತ್ತು ಕ್ಯಾಚ್‌ಗಳನ್ನು ನೆಲಕ್ಕೆ ಚೆಲ್ಲಿದ್ದು ಸೋಲಿಗೆ ಕಾರಣವಾದವು. ಬಾಂಗ್ಲಾದ ಬೌಲರ್‌ಗಳ ಉತ್ತಮ ದಾಳಿಯಿಂದ ದಕ್ಷಿಣ ಆಫ್ರಿಕಾ ತಂಡವು 78 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡಿತ್ತು. ಈ ಹಂತದಲ್ಲಿ ಹಿಡಿತ ಸಾಧಿಸುವಲ್ಲಿ ಬಾಂಗ್ಲಾ ಎಡವಿತು. 

ಕಾಪ್ ಮತ್ತು ಟ್ರಯನ್ ಅವರು 6ನೇ ವಿಕೆಟ್ ಜೊತೆಯಾಟದಲ್ಲಿ 85 ರನ್‌ ಸೇರಿಸಿದರು. ಕಾಪ್ ಔಟಾದ ನಂತರ ಟ್ರಯನ್ ಮತ್ತು ನದೀನ್ 7ನೇ ವಿಕೆಟ್ ಜೊತೆಯಾಟದಲ್ಲಿ 35 ರನ್‌ ಕಲೆಹಾಕಿದರು. ಇದರಿಂದಾಗಿ ಗೆಲುವು ಸಾಧ್ಯವಾಯಿತು.

ಶೊರ್ನಾ–ಶರ್ಮಿನ್ ಅರ್ಧಶತಕ:  ಟಾಸ್ ಗೆದ್ದ ಬಾಂಗ್ಲಾದೇಶ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು.  ಶರ್ಮಿನ್‌ ಅಖ್ತರ್ ಮತ್ತು ಶೊರ್ನಾ ಅಖರ್‌ ಅವರ ಅರ್ಧಶತಕಗಳ ಬಲದಿಂದ 50 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 232 ರನ್ ಗಳಿಸಿತು. 

ಶರ್ಮಿನ್ ಅಖ್ತರ್ (50;77ಎ, 4X5) ಮತ್ತು ನಿಗಾರ್ ಸುಲ್ತಾನ (32; 42ಎ, 4X5) ಅವರಿಬ್ಬರೂ ಮೂರನೇ ವಿಕೆಟ್ ಜೊತೆಯಾಟದಲ್ಲಿ 77 ರನ್‌ ಕಲೆಹಾಕಿದರು. ಆದರೆ ಅಷ್ಟೊತ್ತಿಗೆ 40 ಓವರ್‌ಗಳು ಮುಗಿದಿದ್ದವು. ನಿಗಾರ್ ವಿಕೆಟ್ ಪಡೆದ ಮ್ಲಾಬಾ ಜೊತೆಯಾಟಕ್ಕೆ ತಡೆಯೊಡ್ಡಿದರು.  ಆಗ ಕ್ರೀಸ್‌ಗೆ ಬಂದ ಶೊರ್ನಾ ಅವರ ಬೀಸಾಟಕ್ಕೆ ರನ್‌ಗಳು ವೇಗವಾಗಿ ಹರಿದುಬಂದವು. ಅವರು 3 ಬೌಂಡರಿ ಮತ್ತು 3 ಸಿಕ್ಸರ್‌ ಹೊಡೆದರು. 

ಸಂಕ್ಷಿಪ್ತ ಸ್ಕೋರು: ಬಾಂಗ್ಲಾದೇಶ: 50 ಓವರ್‌ಗಳಲ್ಲಿ 6ಕ್ಕೆ232 (ಫರ್ಗಾನಾ ಹಕ್ 30, ರುಬಿಯಾ ಹೈದರ್ 25, ಶರ್ಮಿನ್ ಅಖ್ತರ್ 50, ನಿಗಾರ್ ಸುಲ್ತಾನ 32, ಶೋರ್ನಾ ಅಖ್ತರ್ ಔಟಾಗದೇ 51, ರಿತು ಮೋನಿ ಔಟಾಗದೇ 19, ನಾನ್‌ಕುಲುಲೆಕೊ ಮ್ಲಾಬಾ 42ಕ್ಕೆ2)  ದಕ್ಷಿಣ ಆಫ್ರಿಕಾ: 49.3 ಓವರ್‌ಗಳಲ್ಲಿ  7ಕ್ಕೆ235 (ಲಾರಾ ವೊಲ್ವಾರ್ಟ್ 31, ಅನಕ್ ಬಾಷ್ 28, ಮರೈಝಾನ್ ಕಾಪ್ 56, ಕ್ಲೊಯೆ ಟ್ರಯನ್ 62, ನದೀನ್ ಡಿ ಕರ್ಕ್ ಔಟಾಗದೇ 37, ನಹೀದಾ ಅಖ್ತರ್ 44ಕ್ಕೆ2) ಫಲಿತಾಂಶ: ದಕ್ಷಿಣ ಆಫ್ರಿಕಾ ತಂಡಕಿಕೆ 3 ವಿಕೆಟ್‌ಗಳ ಜಯ

ಇಂದಿನ ಪಂದ್ಯ

ಶ್ರೀಲಂಕಾ–ನ್ಯೂಜಿಲೆಂಡ್

ಆರಂಭ: ಮಧ್ಯಾಹ್ನ3

ನೇರಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್, ಜಿಯೊಸ್ಟಾರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.