ADVERTISEMENT

ಸೈಯದ್ ಮುಷ್ತಾಕ್ ಅಲಿ ಟ್ರೋಫಿ| ದೇವದತ್ತ ಸಿಡಿಲಬ್ಬರ: ಜಯದ ಹಾದಿಗೆ ಮರಳಿದ ಕರ್ನಾಟಕ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಡಿಸೆಂಬರ್ 2025, 7:54 IST
Last Updated 2 ಡಿಸೆಂಬರ್ 2025, 7:54 IST
<div class="paragraphs"><p>ದೇವದತ್ತ ಪಡಿಕ್ಕಲ್</p></div>

ದೇವದತ್ತ ಪಡಿಕ್ಕಲ್

   

ಚಿತ್ರ:  @ImTanujSingh

ಅಹಮದಾಬಾದ್: ದೇವದತ್ತ ಪಡಿಕ್ಕಲ್ ಸಿಡಿಲಬ್ಬರದ ಬ್ಯಾಟಿಂಗ್ ಮುಂದೆ ತಮಿಳುನಾಡು ತಂಡವು ದೂಳೀಪಟವಾಯಿತು. 

ADVERTISEMENT

ನರೇಂದ್ರ ಮೋದಿ  ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ದೇವದತ್ತ 46 ಎಸೆತಗಳಲ್ಲಿ 102 ರನ್‌ ಗಳಿಸಿದರು. 10 ಬೌಂಡರಿ ಮತ್ತು 6 ಸಿಕ್ಸರ್‌ಗಳನ್ನು ಸಿಡಿಸಿದರು. ಅವರ ಬ್ಯಾಟಿಂಗ್ ಭರಾಟೆಯಿಂದಾಗಿ ಕರ್ನಾಟಕ ತಂಡವು 145 ರನ್‌ಗಳ ಭರ್ಜರಿ ಜಯ ಗಳಿಸಿತು. ಡಿ ಗುಂಪಿನಲ್ಲಿ ಕಳೆದೆರಡು ಪಂದ್ಯಗಳಲ್ಲಿ ಸೋತಿದ್ದ ತಂಡವು ಮತ್ತೆ ಗೆಲುವಿನ ಹಾದಿಗೆ ಮರಳಿತು. ಒಟ್ಟು ಎಂಟು ಅಂಕಗಳೊಂದಿಗೆ 3ನೇ ಸ್ಥಾನಕ್ಕೇರಿತು. 

ಟಾಸ್ ಗೆದ್ದ ತಮಿಳುನಾಡು ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಕರ್ನಾಟಕ ತಂಡವು 20 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 245 ರನ್ ಗಳಿಸಿತು. ಅದಕ್ಕುತ್ತರವಾಗಿ ತಮಿಳುನಾಡು ತಂಡವು 14.2 ಓವರ್‌ಗಳಲ್ಲಿ 100 ರನ್ ಗಳಿಸಿ ಆಲೌಟ್ ಆಯಿತು. ಸ್ಪಿನ್ನರ್ ಶ್ರೇಯಸ್ ಗೋಪಾಲ್ (21ಕ್ಕೆ3), ವೈಶಾಖ ವಿಜಯಕುಮಾರ್ (7ಕ್ಕೆ2), ಪ್ರವೀಣ ದುಬೆ (15ಕ್ಕೆ3) ಮತ್ತು ಶುಭಾಂಗ್ ಹೆಗ್ಡೆ (19ಕ್ಕೆ2)  ಅಮೋಘ ಬೌಲಿಂಗ್ ಮಾಡಿದರು. 

ದೇವದತ್ತ ಅಬ್ಬರ: ಆರಂಭಿಕ ಬ್ಯಾಟರ್ ಬಿ.ಆರ್. ಶರತ್ (53; 23ಎ, 4X4, 6X4) ಮತ್ತು ನಾಯಕ ಮಯಂಕ್ ಅಗರವಾಲ್ (24; 15ಎ, 4X4) ಉತ್ತಮ ಆರಂಭ ನೀಡಿದರು. ಮೊದಲ ವಿಕೆಟ್ ಜೊತೆಯಾಟದಲ್ಲಿ 69 ರನ್ ಸೇರಿಸಿದರು. ಟಿ. ನಟರಾಜನ್ ಎಸೆತದಲ್ಲಿ ಮಯಂಕ್ ಅವರು ಜಗದೀಶನ್‌ಗೆ ಕ್ಯಾಚಿತ್ತು ನಿರ್ಗಮಿಸಿದಾಗ ತಮಿಳುನಾಡು ತಂಡದಲ್ಲಿ ಸಂತಸ ಹೆಚ್ಚು ಸಮಯ ಉಳಿಯಲಿಲ್ಲ.  ಕ್ರೀಸ್‌ಗೆ ಬಂದ  ಪಡಿಕ್ಕಲ್ ಅವರ ಆಟ ಶುರುವಾಯಿತು.  ಒಂದು ಕಡೆ ಶರತ್ ಮತ್ತು ಇನ್ನೊಂದೆಡೆ ದೇವದತ್ತ ಅವರ ಆಟಕ್ಕೆ ಬೌಲರ್‌ಗಳು ಬಸವಳಿದರು. ಎರಡನೇ ವಿಕೆಟ್ ಜೊತೆಯಾಟದಲ್ಲಿ 16 ಎಸೆತಗಳಲ್ಲಿ 39 ರನ್ ಸೇರಿದವು. 9ನೇ ಓವರ್‌ನಲ್ಲಿ ಶರತ್ ವಿಕೆಟ್ ಗಳಿಸಿದ ಸೋನು ಯಾದವ್ ಅವರು ಜೊತೆಯಾಟ ಮುರಿದರು. 

ಕರುಣ್ ನಾಯರ್ (4 ರನ್)ಬೇಗನೆ ನಿರ್ಗಮಿಸಿದರು.  ದೇವದತ್ತ ಅವರೊಂದಿಗೆ ಸೇರಿಕೊಂಡ ಆರ್. ಸ್ಮರಣ್ (46; 29ಎ, 4X3, 6X3) ಕೂಡ ತಂಡದ ಮೊತ್ತ ಬೆಳೆಯಲು ಕಾಣಿಕೆ ನೀಡಿದರು. 

ತಮಿಳುನಾಡು ತಂಡದಲ್ಲಿರುವ ಅನುಭವಿ ಬ್ಯಾಟರ್‌ಗಳಾದ ಸಾಯಿ ಸುದರ್ಶನ್, ಎನ್. ಜಗದೀಶನ್ ಹಾಗೂ ಶಾರೂಕ್ ಖಾನ್ ಅವರು ಪ್ರಭಾವಿ ಆಟವಾಡಲಿಲ್ಲ. 

ಸಂಕ್ಷಿಪ್ತ ಸ್ಕೋರು: ಕರ್ನಾಟಕ: 20 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 245 (ಬಿ.ಆರ್. ಶರತ್ 53, ಮಯಂಕ್ ಅಗರವಾಲ್ 24, ದೇವದತ್ತ ಪಡಿಕ್ಕಲ್ ಔಟಾಗದೇ 102, ಸ್ಮರಣ್ ರವಿಚಂದ್ರನ್ ಔಟಾಗದೇ 46, ಸೋನು ಯಾದವ್ 34ಕ್ಕೆ2) ತಮಿಳುನಾಡು: 14.2 ಓವರ್‌ಗಳಲ್ಲಿ100 (ತುಷಾರ್ ರಹೇಜಾ 29, ಎನ್. ಜಗದೀಶನ್ 21, ಆರ್. ರಾಜಕುಮಾರ್ 16, ಶ್ರೇಯಸ್ ಗೋಪಾಲ್ 21ಕ್ಕೆ3, ವೈಶಾಖ ವಿಜಯಕುಮಾರ್ 7ಕ್ಕೆ2, ಪ್ರವೀಣ ದುಬೆ 15ಕ್ಕೆ3, ಶುಭಾಂಗ್ ಹೆಗ್ಡೆ 19ಕ್ಕೆ2) ಫಲಿತಾಂಶ: ಕರ್ನಾಟಕ ತಂಡಕ್ಕೆ 145 ರನ್‌ಗಳ ಜಯ. ಪಂದ್ಯಶ್ರೇಷ್ಠ: ದೇವದತ್ತ ಪಡಿಕ್ಕಲ್. 

ದೆಹಲಿ ತಂಡಕ್ಕೆ ತ್ರಿಪುರ ಆಘಾತ

ಅಹಮದಾಬಾದ್‌: ದೇಶೀಯ ಕ್ರಿಕೆಟ್‌ನಲ್ಲಿ ದೆಹಲಿ ತಂಡದ ನಿರಾಶಾದಾಯಕ ಪ್ರದರ್ಶನ ಮುಂದುವರಿದಿದೆ. ತ್ರಿಪುರ ತಂಡವು ಮಂಗಳವಾರ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ಡಿ ಗುಂಪಿನ ಪಂದ್ಯದಲ್ಲಿ ದೆಹಲಿ ತಂಡಕ್ಕೆ ಆಘಾತ ನೀಡಿತು.

ಈ ಹಿಂದೆ ದೆಹಲಿ ತಂಡವು ರಣಜಿ ಟ್ರೋಫಿಯಲ್ಲಿ ಜಮ್ಮು ಮತ್ತು ಕಾಶ್ಮೀರ ವಿರುದ್ಧ ಆಘಾತಕಾರಿ ಸೋಲು ಅನುಭವಿಸಿತ್ತು. ಇದೀಗ ಸೈಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಐಪಿಎಲ್ ತಾರೆಯರನ್ನು ಒಳಗೊಂಡ ದೆಹಲಿ ತಂಡವು 12 ರನ್‌ಗಳಿಂದ ತ್ರಿಪುರ ವಿರುದ್ಧ ಮುಗ್ಗರಿಸಿತು.‌

ಮೊದಲು ಬ್ಯಾಟಿಂಗ್‌ ಮಾಡಿದ ತ್ರಿಪುರ ತಂಡವು 5 ವಿಕೆಟ್‌ಗೆ 157 ರನ್‌ ಗಳಿಸಿತು. ಗುರಿ ಬೆನ್ನಟ್ಟಿದ ದೆಹಲಿ ತಂಡವು 8 ವಿಕೆಟ್‌ಗೆ 145 ರನ್‌ ಗಳಿಸಲಷ್ಟೇ ಶಕ್ತವಾಯಿತು. ನಾಲ್ಕು ಪಂದ್ಯಗಳ ಪೈಕಿ ಎರಡರಲ್ಲಿ ಗೆದ್ದು, ಮತ್ತೆರಡರಲ್ಲಿ ಸೋತಿರುವ ದೆಹಲಿ ತಂಡವು ಗುಂಪಿನಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ನಾಕೌಟ್‌ ಹಾದಿಯೂ ಅನಿಶ್ಚಿತತೆಯಿಂದ ಕೂಡಿದೆ.

ಮಿಂಚಿದ ಪಾಂಡ್ಯ

ಹೈದರಾಬಾದ್ : ಎರಡೂವರೆ ತಿಂಗಳ ನಂತರ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಿರುವ ಭಾರತದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರು ಮಂಗಳವಾರ ನಡೆದ ಸೈಯದ್ ಮುಷ್ತಾಕ್ ಅಲಿ ಟೂರ್ನಿಯ ಸಿ ಗುಂಪಿನ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಅಜೇಯ 77 ರನ್ (42ಎ, 7x4, 4x6) ಗಳಿಸಿದರು. ಅವರ ಬ್ಯಾಟಿಂಗ್‌ ನೆರವಿನಿಂದ ಬರೋಡಾ ತಂಡವು ಏಳು ವಿಕೆಟ್‌ಗಳ ಜಯ ಸಾಧಿಸಿತು.

ಅಭಿಷೇಕ್ ಶರ್ಮಾ (50; 19ಎ) ಮತ್ತು ಅನ್ಮೋಲ್‌ ಪ್ರೀತ್ ಸಿಂಗ್ (69;32ಎ) ಅವರ ಮಿಂಚಿನ ಅರ್ಧಶತಕಗಳ ನೆರವಿನಿಂದ ಪಂಜಾಬ್‌ ತಂಡವು ನಿಗದಿತ ಓವರ್‌ಗಳಲ್ಲಿ 8 ವಿಕೆಟ್‌ಗೆ 222 ರನ್‌ ಕಲೆಹಾಕಿತು. ಗುರಿ ಬೆನ್ನಟ್ಟಿದ ಬರೋಡಾ ತಂಡವು 5 ಎಸೆತ ಬಾಕಿ ಇರುವಂತೆ ಮೂರು ವಿಕೆಟ್‌ಗೆ 244 ರನ್‌ ಗಳಿಸಿ ಜಯ ಗಳಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.