ADVERTISEMENT

ಪಾಕ್‌ ಸೆಮಿ ಕನಸಿಗೆ ಅಡ್ಡಿಯಾಗುವುದೇ ಅಫ್ಗಾನ್‌

ಸರ್ಫರಾಜ್‌ ಬಳಗಕ್ಕೆ ನಿರ್ಣಾಯಕ ಹೋರಾಟ; ಏಷ್ಯಾದ ತಂಡಗಳ ನಡುವೆ ಪೈಪೋಟಿ

​ಪ್ರಜಾವಾಣಿ ವಾರ್ತೆ
Published 28 ಜೂನ್ 2019, 19:30 IST
Last Updated 28 ಜೂನ್ 2019, 19:30 IST
ಪಾಕಿಸ್ತಾನ ತಂಡದವರು ಅಫ್ಗಾನಿಸ್ತಾನ ಎದುರು ಸುಲಭವಾಗಿ ಗೆಲ್ಲುವ ಹುಮ್ಮಸ್ಸಿನಲ್ಲಿದ್ದಾರೆ –ಎಎಫ್‌ಪಿ ಚಿತ್ರ
ಪಾಕಿಸ್ತಾನ ತಂಡದವರು ಅಫ್ಗಾನಿಸ್ತಾನ ಎದುರು ಸುಲಭವಾಗಿ ಗೆಲ್ಲುವ ಹುಮ್ಮಸ್ಸಿನಲ್ಲಿದ್ದಾರೆ –ಎಎಫ್‌ಪಿ ಚಿತ್ರ   

ಲೀಡ್ಸ್‌ (ಪಿಟಿಐ): ಸತತ ಎರಡು ಪಂದ್ಯಗಳಲ್ಲಿ ಗೆದ್ದಿರುವ ಪಾಕಿಸ್ತಾನದ ಪಾಳಯದಲ್ಲಿ ಸೆಮಿಫೈನಲ್‌ ಕನಸು ಚಿಗುರೊಡೆದಿದೆ. ಸರ್ಫರಾಜ್‌ ಅಹಮದ್‌ ಬಳಗದ ಈ ಕನಸನ್ನು ಅಫ್ಗಾನಿಸ್ತಾನ ತಂಡ ಚಿವುಟಿ ಹಾಕುವುದೇ ಎಂಬ ಕುತೂಹಲ ಈಗ ಕ್ರಿಕೆಟ್‌ ಪ್ರಿಯರಲ್ಲಿ ಗರಿಗೆದರಿದೆ.

ಹೆಡಿಂಗ್ಲೆ ಮೈದಾನದಲ್ಲಿ ಶನಿವಾರ ನಡೆಯುವ ಉಭಯ ತಂಡಗಳ ನಡುವಣ ಈ ಹೋರಾಟ ಪಾಕಿಸ್ತಾನದ ಪಾಲಿಗೆ ಮಹತ್ವದ್ದು. ಈ ಪಂದ್ಯದಲ್ಲಿ ಗೆದ್ದರಷ್ಟೇ ಸರ್ಫರಾಜ್‌ ಪಡೆಯ ನಾಲ್ಕರ ಘಟ್ಟದ ಹಾದಿ ಸುಗಮವಾಗಲಿದೆ. ಒಂದೊಮ್ಮೆ ಸೋತರೆ ತಂಡ ಟೂರ್ನಿಯಿಂದ ಬಹುತೇಕ ಹೊರಬೀಳಲಿದೆ.

ಪಾಕಿಸ್ತಾನವು ಏಕದಿನ ಮಾದರಿಯಲ್ಲಿ ಅಫ್ಗಾನಿಸ್ತಾನ ವಿರುದ್ಧ ಆಡಿರುವ ಮೂರು ಪಂದ್ಯಗಳಲ್ಲೂ ಗೆದ್ದಿದೆ. ವಿಶ್ವಕಪ್‌ನಲ್ಲಿ ಉಭಯ ತಂಡಗಳು ಮೊದಲ ಸಲ ಮುಖಾಮುಖಿಯಾಗುತ್ತಿವೆ. ಈ ಪಂದ್ಯದಲ್ಲೂ ಗೆದ್ದು ಅಜೇಯವಾಗಿ ಉಳಿಯುವುದು ಪಾಕಿಸ್ತಾನದ ಗುರಿ.

ADVERTISEMENT

ಮೂರು ಪಂದ್ಯಗಳಲ್ಲಿ ಸೋತು ಲೀಗ್‌ ಹಂತದಲ್ಲೇ ಹೊರಬೀಳುವ ಅಪಾಯದಲ್ಲಿದ್ದ ಸರ್ಫರಾಜ್‌ ಪಡೆ ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್‌ ಎದುರು ಗೆಲುವಿನ ಕೇಕೆ ಹಾಕಿ ಅಭಿಮಾನಿಗಳ ಪ್ರೀತಿಗೆ ಪಾತ್ರವಾಗಿದೆ.

ನ್ಯೂಜಿಲೆಂಡ್‌ ಎದುರಿನ ಹಣಾಹಣಿಯಲ್ಲಿ ‍ಬಾಬರ್‌ ಅಜಂ ಶತಕ ಸಿಡಿಸಿ ಮಿಂಚಿದ್ದರು. ಶಾಹೀನ್‌ ಶಾ ಅಫ್ರಿದಿ ಮೂರು ವಿಕೆಟ್‌ ಉರುಳಿಸಿ ಗಮನ ಸೆಳೆದಿದ್ದರು. ಇವರ ಮೇಲೆ ಈಗ ಎಲ್ಲರ ಗಮನ ನೆಟ್ಟಿದೆ. ಹ್ಯಾರಿಸ್‌ ಸೋಹೆಲ್‌ ಕೂಡಾ ಉತ್ತಮ ಲಯದಲ್ಲಿದ್ದಾರೆ.

ಇಮಾಮ್‌ ಉಲ್‌ ಹಕ್‌ ಮತ್ತು ಫಖರ್‌ ಜಮಾನ್‌, ತಂಡಕ್ಕೆ ಉತ್ತಮ ಅಡಿಪಾಯ ಹಾಕಿಕೊಡಬೇಕಿದೆ. ಅನುಭವಿ ಮೊಹಮ್ಮದ್‌ ಹಫೀಜ್‌, ನಾಯಕ ಸರ್ಫರಾಜ್‌, ಶೋಯಬ್‌ ಅಖ್ತರ್‌, ಇಮಾದ್‌ ವಾಸೀಂ ಮತ್ತು ಶಾದಬ್‌ ಖಾನ್‌ ಅವರು ಜವಾಬ್ದಾರಿಯುತವಾಗಿ ಆಡಿದರೆ ತಂಡದ ಗೆಲುವಿನ ಹಾದಿ ಇನ್ನಷ್ಟು ಸುಲಭವಾಗಬಹುದು.

ಮೊಹಮ್ಮದ್‌ ಅಮೀರ್‌ ಮತ್ತು ವಹಾಬ್‌ ರಿಯಾಜ್‌, ವೇಗದ ಬೌಲಿಂಗ್‌ ವಿಭಾಗದ ಶಕ್ತಿಯಾಗಿದ್ದು ಅಫ್ಗಾನ್‌ ಬ್ಯಾಟಿಂಗ್‌ ಪಡೆಗೆ ಪೆಟ್ಟು ನೀಡಬಲ್ಲರು. ಹಸನ್‌ ಅಲಿ, ನಿರೀಕ್ಷಿತ ಸಾಮರ್ಥ್ಯ ತೋರದಿರುವುದು ನಾಯಕ ಸರ್ಫರಾಜ್‌ ಚಿಂತೆಗೆ ಕಾರಣವಾಗಿದೆ.

ಅಫ್ಗಾನಿಸ್ತಾನ ತಂಡವು ವಿಶ್ವಕಪ್‌ನಲ್ಲಿ ಚೊಚ್ಚಲ ಗೆಲುವು ದಾಖಲಿಸುವ ಉತ್ಸಾಹದಲ್ಲಿದೆ. ತಂಡವು ಈ ಬಾರಿ ಆಡಿರುವ ಏಳು ಪಂದ್ಯಗಳಲ್ಲೂ ಸೋತಿದೆ. ಉಳಿದ ಎರಡು ಪಂದ್ಯಗಳಲ್ಲಿ ಗೆದ್ದು ಅಭಿಯಾನ ಮುಗಿಸುವುದು ಈ ತಂಡದ ಆಲೋಚನೆ. ಇದಕ್ಕಾಗಿ ಗುಲ್ಬದೀನ್‌ ನೈಬ್‌ ಬಳಗವು ಆಟದ ಎಲ್ಲಾ ವಿಭಾಗಗಳಲ್ಲೂ ಸಂಘಟಿತ ಸಾಮರ್ಥ್ಯ ತೋರುವುದು ಅಗತ್ಯ.

***
ತಂಡಗಳು ಇಂತಿವೆ: ಪಾಕಿಸ್ತಾನ: ಸರ್ಫರಾಜ್‌ ಅಹಮದ್‌ (ನಾಯಕ), ಫಖರ್‌ ಜಮಾನ್‌, ಇಮಾಮ್‌ ಉಲ್‌ ಹಕ್‌, ಬಾಬರ್‌ ಅಜಂ, ಹ್ಯಾರಿಸ್‌ ಸೋಹೆಲ್‌, ಹಸನ್‌ ಅಲಿ, ಶಾದಬ್‌ ಖಾನ್‌, ಮೊಹಮ್ಮದ್‌ ಹಫೀಜ್‌, ಮೊಹಮ್ಮದ್‌ ಹಸನೇನ್‌, ಶಾಹೀನ್‌ ಶಾ ಅಫ್ರಿದಿ, ವಹಾಬ್‌ ರಿಯಾಜ್‌, ಮೊಹಮ್ಮದ್‌ ಆಮೀರ್‌, ಶೋಯಬ್‌ ಮಲಿಕ್‌, ಇಮಾದ್‌ ವಾಸೀಂ ಮತ್ತು ಆಸಿಫ್‌ ಅಲಿ.

ಅಫ್ಗಾನಿಸ್ತಾನ: ಗುಲ್ಬದೀನ್‌ ನೈಬ್‌ (ನಾಯಕ), ಸೈಯದ್‌ ಅಹಮದ್‌ ಶಿರ್ಜಾದ್‌, ಹಜರತ್‌ಉಲ್ಲಾ ಜಜಾಯ್‌, ಅಸ್ಗರ್‌ ಅಫ್ಗಾನ್‌, ರಶೀದ್‌ ಖಾನ್‌, ಮೊಹಮ್ಮದ್‌ ನಬಿ, ಮುಜೀಬ್‌ ಉರ್‌ ರಹಮಾನ್‌, ದವಲತ್‌ ಜದ್ರಾನ್‌, ನಜೀಬುಲ್ಲಾ ಜದ್ರಾನ್‌, ಹಮೀದ್‌ ಹಸನ್‌, ಹಸಮತ್‌ಉಲ್ಲಾ ಶಾಹಿದಿ, ಸಮೀವುಲ್ಲಾ ಶಿನ್ವಾರಿ, ರಹಮತ್‌ ಶಾ, ನೂರ್‌ ಅಲಿ ಜದ್ರಾನ್‌ ಮತ್ತು ಇಕ್ರಾಂ ಅಲಿಖಿಲ್‌.

ವಿಶ್ವ ರ‍್ಯಾಂಕಿಂಗ್‌:ಪಾಕಿಸ್ತಾನ: 6,ಅಫ್ಗಾನಿಸ್ತಾನ: 10

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.