ಬಾಂಗ್ಲಾದೇಶದ ಬ್ಯಾಟರ್‌ಗಳು
ಕೃಪೆ: @BCBtigers
ಢಾಕಾ: ಬಾಂಗ್ಲಾದೇಶ ವಿರುದ್ಧದ ಟಿ20 ಕ್ರಿಕೆಟ್ ಸರಣಿಯ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ಹೀನಾಯ ಸೋಲು ಕಂಡಿದೆ. ಇದರೊಂದಿಗೆ ಮೂರು ಪಂದ್ಯಗಳ ಸರಣಿಯಲ್ಲಿ 1– 0 ಅಂತರದ ಹಿನ್ನಡೆ ಅನುಭವಿಸಿದೆ.
'ಶೇರ್ ಎ ಬಾಂಗ್ಲಾ ನ್ಯಾಷನಲ್ ಸ್ಟೇಡಿಯಂ'ನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕ್, 19.3 ಓವರ್‌ಗಳಲ್ಲಿ ಕೇವಲ 110 ರನ್ ಗಳಿಸಿ ಆಲೌಟ್ ಆಯಿತು. ಈ ಗುರಿ ಬೆನ್ನತ್ತಿದ ಬಾಂಗ್ಲಾ, ಇನ್ನೂ 4.3 ಓವರ್ ಬಾಕಿ ಇರುವಂತೆಯೇ 3 ವಿಕೆಟ್‌ಗೆ 112 ರನ್ ಗಳಿಸಿ ಜಯದ ನಗೆ ಬೀರಿತು.
ಎರಡಂಕಿ ತಲುಪಿದ್ದು ಮೂವರೇ
ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಪಾಕ್ ಬ್ಯಾಟರ್‌ಗಳು ಬಾಂಗ್ಲಾ ದಾಳಿ ಎದುರು ದಿಕ್ಕೆಟ್ಟರು. ಅನುಭವಿ ಫಖರ್ ಜಮಾನ್, ಕುಶ್‌ದಿಲ್ ಶಾ ಹಾಗೂ ಅಬ್ಬಾಸ್ ಅಫ್ರಿದಿ ಹೊರತುಪಡಿಸಿ ಉಳಿದವರು ಎರಡಂಕಿಯನ್ನೂ ಮುಟ್ಟಲು ಸಾಧ್ಯವಾಗಿಲ್ಲ. ಫಕರ್ 34 ಎಸೆತಗಳಲ್ಲಿ 44 ರನ್ ಗಸಿದ್ದು, ಪಾಕ್ ಪರ ಗರಿಷ್ಠ ವೈಯಕ್ತಿಕ ಮೊತ್ತವಾಯಿತು.
ಬಾಂಗ್ಲಾ ಪರ ಉತ್ತಮ ಬೌಲಿಂಗ್ ಮಾಡಿದ ತಸ್ಕಿನ್ ಅಹ್ಮದ್ 22 ರನ್ ನೀಡಿ ಮೂರು ವಿಕೆಟ್ ಪಡೆದರೆ, ಮುಸ್ತಫಿಜುರ್ ರಹಮಾನ್ ಎರಡು ವಿಕೆಟ್ ಉರುಳಿಸಿದರು. ಮೆಹದಿ ಹಸನ್ ಹಾಗೂ ತಂಜೀಮ್ ಹಸನ್ ಶಕಿಬ್ ಒಂದೊಂದು ವಿಕೆಟ್ ಕಿತ್ತರೆ ಉಳಿದ ಮೂರು ವಿಕೆಟ್ ರನೌಟ್ ಆದವು.
ಗುರಿ ಮುಟ್ಟಿಸಿದ ಎಮೊನ್
ಅಲ್ಪ ಮೊತ್ತದ ಸವಾಲಿನೆದುರು ಇನಿಂಗ್ಸ್ ಆರಂಭಿಸಿದ ಆತಿಥೇಯ ಬಾಂಗ್ಲಾ ಆರಂಭದಲ್ಲೇ ಆಘಾತ ಅನುಭವಿಸಿತು. ಕೇವಲ 7 ರನ್ ಆಗುವಷ್ಟರಲ್ಲೇ ಎರಡು ವಿಕೆಟ್ ಕಳೆದುಕೊಂಡಿತ್ತು.
ಈ ಹಂತದಲ್ಲಿ ಜೊತೆಯಾದ ಪರ್ವೇಜ್ ಹೊಸನ್ ಎಮೊನ್ ಹಾಗೂ ತೌಹಿದ್ ಹೃದೊಯ್, ತಮ್ಮ ತಂಡವನ್ನು ಗುರಿ ಮುಟ್ಟಿಸಿದರು. ಈ ಜೋಡಿ, 3ನೇ ವಿಕೆಟ್‌ಗೆ 73 ರನ್ ಕಲೆಹಾಕಿತು. 36 ರನ್ ಗಳಿಸಿದ್ದ ಹೃದೊಯ್ ಔಟಾದರೂ ಕೊನೆವರೆಗೆ ಆಡಿದ ಎಮೊನ್, ಅಮೋಘ ಅರ್ಧಶತಕ ಸಿಡಿಸಿದರು. 39 ಎಸೆತಗಳಲ್ಲಿ 55 ರನ್ ಗಳಿಸುವ ಮೂಲಕ ಪಂದ್ಯ ಶ್ರೇಷ್ಠ ಎನಿಸಿದರು.
ಎರಡನೇ ಪಂದ್ಯವೂ ಇದೇ ಕ್ರೀಡಾಂಗಣದಲ್ಲೇ ನಾಳೆ (ಜುಲೈ 22ರಂದು) ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.