
ಮಥುರಾ(ಉತ್ತರ ಪ್ರದೇಶ): ಭಾರತ ಮಹಿಳಾ ತಂಡದ ತಾರಾ ಆಟಗಾರ್ತಿ ಸ್ಮೃತಿ ಮಂದಾನ ಜತೆ ಮದುವೆ ಮುಂದೂಡಿಕೆ ಬೆನ್ನಲ್ಲೇ ಗಾಯಕ, ಸಂಗೀತ ನಿರ್ದೇಶಕ ಪಲಾಶ್ ಮುಚ್ಚಲ್ ಅವರು ಬೃಂದಾವನದ ಪ್ರೇಮಾನಂದ ಮಹಾರಾಜರ ಆಶ್ರಮಕ್ಕೆ ಭೇಟಿ ನೀಡಿದ್ದಾರೆ.
ಎರಡು ದಿನಗಳ ಹಿಂದೆ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದ ಪಲಾಶ್ ಅವರು ಅದಾದ ಬಳಿಕ ಪ್ರೇಮಾನಂದ ಸ್ವಾಮೀಜಿ ಆಶ್ರಮಕ್ಕೆ ಭೇಟಿ ನೀಡಿದ್ದಾರೆ ಎಂದು ವರದಿಯಾಗಿದೆ. ಮಾಸ್ಕ್ ಧರಿಸಿ ಕುಳಿತಿರುವ ಪಲಾಶ್ ಅವರ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ದೇವಾಲಯಗಳ ಪಟ್ಟಣ ಬೃಂದಾವನದಲ್ಲಿರುವ ಈ ಆಶ್ರಮಕ್ಕೆ ಅನೇಕ ಸೆಲೆಬ್ರಿಟಿಗಳು ಭೇಟಿ ನೀಡುತ್ತಿದ್ದಾರೆ. ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅವರು ತಮ್ಮ ಮಕ್ಕಳೊಂದಿಗೆ ಆಶ್ರಮಕ್ಕೆ ಭೇಟಿ ನೀಡಿ ಸ್ವಾಮೀಜಿಗಳ ಆರ್ಶೀವಾದ ಪಡೆದುಕೊಂಡಿದ್ದರು. ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರ ಪತಿ ರಾಜ್ ಕುಂದ್ರಾ ಸಹ ಇತ್ತೀಚೆಗೆ ಈ ಆಶ್ರಮಕ್ಕೆ ಭೇಟಿ ನೀಡಿದ್ದರು.
ನವೆಂಬರ್ 23ರಂದು ಸ್ಮೃತಿ ಮಂದಾನ ಮತ್ತು ಪಲಾಶ್ ಅವರ ವಿವಾಹ ನಿಗದಿಯಾಗಿತ್ತು. ಮದುವೆ ದಿನವೇ ಸ್ಮೃತಿ ತಂದೆಗೆ ಎದೆ ನೋವು ಕಾಣಿಸಿಕೊಂಡಿದ್ದರಿಂದ ಮದುವೆ ಕಾರ್ಯಕ್ರಮವನ್ನು ಮುಂದೂಡಲಾಗಿತ್ತು ಎಂದು ವರದಿಯಾಗಿತ್ತು. ಮರುದಿನ ಪಲಾಶ್ ಅವರೂ ಆಸ್ಪತ್ರೆಗೆ ದಾಖಲಾಗಿದ್ದು, ನಂತರ ಸಾಂಗ್ಲಿಯಿಂದ ಮುಂಬೈ ಆಸ್ಪತ್ರೆಗೆ ಅವರನ್ನು ಸ್ಥಳಾಂತರಿಸಲಾಗಿತ್ತು.
ಇದಾದ ಬೆನ್ನಲ್ಲೇ ಸ್ಮೃತಿ ಅವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಿಂದ ಮದುವೆ ಸಮಾರಂಭದ ಫೋಟೊಗಳನ್ನು ಅಳಿಸಿ ಹಾಕಿದ್ದು, ಹಲವು ಅನುಮಾನಗಳನ್ನು ಹುಟ್ಟುಹಾಕಿತ್ತು. ಪಲಾಶ್ ಅವರು ಮೋಸ ಮಾಡಿದ್ದರಿಂದಲೇ ಮದುವೆ ನಿಂತಿದೆ ಎಂಬ ವದಂತಿಗಳು ಹರಡಿದ್ದವು.
ಏತನ್ಮಧ್ಯೆ, ಡಿಸೆಂಬರ್ 7ರಂದು ಪಲಾಶ್–ಸ್ಮೃತಿ ಮದುವೆ ನಡೆಯಲಿದೆ ಎಂಬ ವದಂತಿಗಳನ್ನು ಸ್ಮೃತಿ ಸಹೋದರ ತಳ್ಳಿಹಾಕಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.