ರಿಷಭ್ ಪಂತ್ ಮತ್ತು ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ –ಎಪಿ/ಪಿಟಿಐ ಚಿತ್ರ
ಲೀಡ್ಸ್: ರಿಷಭ್ ಪಂತ್ ಅವರನ್ನು ಸ್ಟುಪಿಡ್..ಸ್ಟುಪಿಡ್..ಸ್ಟುಪಿಡ್.. ಎಂದು ಕೆಲವು ತಿಂಗಳುಗಳ ಹಿಂದಷ್ಟೇ ತಮ್ಮ ಕಾಮೆಂಟ್ರಿಯಲ್ಲಿ ಬೈಯ್ದಿದ್ದ ಮಾಜಿ ಕ್ರಿಕೆಟಿಗ ಸುನಿಲ್ ಗಾವಸ್ಕರ್ ಅವರು ಶನಿವಾರ ‘ಸೂಪರ್..’ ಎಂದರು.
ಹೆಡಿಂಗ್ಲೆಯಲ್ಲಿ ಇಂಗ್ಲೆಂಡ್ ಎದುರಿನ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ರಿಷಭ್ ಶತಕ ಪೂರೈಸಿದಾಗ ಕಾಮೆಂಟ್ರಿ ಮಾಡುತ್ತಿದ್ದ ಗಾವಸ್ಕರ್ ಸಂತಸ ವ್ಯಕ್ತಪಡಿಸಿದರು. ‘ಸೂಪರ್..’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕೆಲವು ತಿಂಗಳುಗಳ ಹಿಂದೆ ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಟೆಸ್ಟ್ ಸರಣಿಯ ಪಂದ್ಯಗಳಲ್ಲಿ ರಿಷಭ್ ಅವರು ವೈಫಲ್ಯ ಅನುಭವಿಸಿದ್ದರು. ಅನಗತ್ಯ ಹೊಡೆತಗಳಿಗೆ ಪ್ರಯತ್ನಿಸಿ ಔಟಾಗಿದ್ದರು. ಇದರಿಂದಾಗಿ ಅಸಮಾಧಾನಗೊಂಡಿದ್ದ ಗಾವಸ್ಕರ್ ಅವರು ಪಂದ್ಯವೊಂದರಲ್ಲಿ ರಿಷಭ್ ಔಟಾದಾಗ ಸ್ಟುಪಿಡ್ (ಮೂರ್ಖ) ಎಂದು ಹೇಳಿದ್ದರು. ಅವರ ಮಾತು ಸಾಮಾಜಿಕ ಜಾಲತಾಣಗಳಲ್ಲಿ ಕೆಲವರ ಅಸಮಾಧಾನಕ್ಕೂ ಕಾರಣವಾಗಿತ್ತು. ಇದೀಗ ಅವರೇ ಮೆಚ್ಚಿ ನುಡಿಯುವಂತೆ ಪಂತ್ ಸಾಧನೆ ಮಾಡಿದ್ದಾರೆ.
ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕ ಗಳಿಸಿದ ಭಾರತೀಯ ವಿಕೆಟ್‌ಕೀಪರ್–ಬ್ಯಾಟರ್ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾದರು. ಈ ಹಾದಿಯಲ್ಲಿ ಅವರು ಮಹೇಂದ್ರಸಿಂಗ್ ಧೋನಿಯವರ ದಾಖಲೆಯನ್ನು ಮೀರಿದರು.
27 ವರ್ಷದ ಪಂತ್ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ 3 ಸಾವಿರ ರನ್ ಪೂರೈಸಿದರು. 44 ಟೆಸ್ಟ್‌ಗಳಲ್ಲಿ 15 ಅರ್ಧಶತಕಗಳನ್ನೂ ರಿಷಭ್ ಗಳಿಸಿದ್ದಾರೆ.
ಪಟ್ಟಿ 1
ಒಂದೇ ಇನಿಂಗ್ಸ್‌ನಲ್ಲಿ ಭಾರತದ ಮೂವರ ಶತಕ
ಬ್ಯಾಟರ್‌ಗಳು;ಎದುರಾಳಿ;ಸ್ಥಳ;ವರ್ಷ
ಗಾವಸ್ಕರ್, ಶ್ರೀಕಾಂತ್, ಮೋಹಿಂದರ್;ಆಸ್ಟ್ರೇಲಿಯಾ;ಸಿಡ್ನಿ;1986
ದ್ರಾವಿಡ್, ತೆಂಡೂಲ್ಕರ್, ಗಂಗೂಲಿ; ಇಂಗ್ಲೆಂಡ್;ಹೆಡಿಂಗ್ಲೆ;2002
ಸೆಹ್ವಾಗ್, ದ್ರಾವಿಡ್, ಕೈಫ್;ವೆಸ್ಟ್ ಇಂಡೀಸ್;ಗ್ರಾಸ್ ಐಲೆಟ್;2006
ಜೈಸ್ವಾಲ್, ಗಿಲ್, ಪಂತ್;ಇಂಗ್ಲೆಂಡ್;ಹೆಡಿಂಗ್ಲೆ;2025
ಪಟ್ಟಿ 2
ಭಾರತದ ವಿಕೆಟ್‌ಕೀಪರ್‌ಗಳ ಟೆಸ್ಟ್ ಶತಕಗಳು
ಶತಕ;ವಿಕೆಟ್‌ಕೀಪರ್
7;ರಿಷಭ್ ಪಂತ್
6;ಮಹೇಂದ್ರಸಿಂಗ್ ಧೋನಿ
3;ವೃದ್ಧಿಮಾನ್ ಸಹಾ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.