ADVERTISEMENT

ರಣಜಿ ಸೆಮಿಫೈನಲ್‌: ವಿದರ್ಭಕ್ಕೆ ಮೇಲುಗೈ ಒದಗಿಸಿದ ಪಾರ್ಥ

ಪಿಟಿಐ
Published 18 ಫೆಬ್ರುವರಿ 2025, 13:54 IST
Last Updated 18 ಫೆಬ್ರುವರಿ 2025, 13:54 IST
<div class="paragraphs"><p>ಕ್ರಿಕೆಟ್‌ (ಪ್ರಾತಿನಿಧಿಕ ಚಿತ್ರ)</p></div>

ಕ್ರಿಕೆಟ್‌ (ಪ್ರಾತಿನಿಧಿಕ ಚಿತ್ರ)

   

ನಾಗ್ಪುರ: ಎಡಗೈ ಸ್ಪಿನ್ನರ್ ಪಾರ್ಥ ರೇಖಡೆ (16–6–16–3) ಒಂದೇ ಓವರಿನಲ್ಲಿ ಮೂರು ವಿಕೆಟ್ ಪಡೆದು ರಣಜಿ ಟ್ರೋಫಿ ಕ್ರಿಕೆಟ್‌ ಸೆಮಿಫೈನಲ್ ಪಂದ್ಯದ ಎರಡನೇ ದಿನವಾದ ಮಂಗಳವಾರ ವಿದರ್ಭ ತಂಡಕ್ಕೆ ಸ್ಪಷ್ಟ ಮೇಲುಗೈ ಒದಗಿಸಿಕೊಟ್ಟರು. ಆತಿಥೇಯ ತಂಡದ 383 ರನ್‌ಗಳಿಗೆ ಉತ್ತರವಾಗಿ ಮುಂಬೈ ದಿನದಾಟ ಮುಗಿದಾಗ 7 ವಿಕೆಟ್‌ಗೆ 188 ರನ್ ಗಳಿಸಿ ಇಕ್ಕಟ್ಟಿಗೆ ಸಿಲುಕಿದೆ.

ಆರಂಭ ಆಟಗಾರ ಆಕಾಶ್‌ ಆನಂದ್ ಅಜೇಯ 67 ರನ್ (171ಎ, 4x6) ಗಳಿಸಿದರೆ, ಕೊನೆಯ ಪರಿಣತ ಬ್ಯಾಟರ್ ತನುಷ್‌ ಕೋಟ್ಯಾನ್ ಅಜೇಯ 5 ರನ್ ಗಳಿಸಿ ಆಟ ಮುಂದುವರಿಸಲಿದ್ದಾರೆ. ತವರು ವಿಸಿಎ ಕ್ರೀಡಾಂಗಣದಲ್ಲಿ ವಿದರ್ಭದ ಬೌಲರ್‌ಗಳು ಶಿಸ್ತುಬದ್ಧ ಬೌಲಿಂಗ್ ಮೂಲಕ ಹಾಲಿ ಚಾಂಪಿಯನ್ ತಂಡವನ್ನು ಕಾಡಿದರು. ಮುಂಬೈ ಎದುರಾಳಿ ಮೊತ್ತಕ್ಕಿಂತ 195 ರನ್ ಹಿಂದಿದೆ.

ADVERTISEMENT

ಒಂದು ಹಂತದಲ್ಲಿ 2 ವಿಕೆಟ್‌ಗೆ 113 ರನ್ ಗಳಿಸಿ ಹೋರಾಟ ತೋರುತ್ತಿದ್ದ ಮುಂಬೈ ತಂಡಕ್ಕೆ ರೇಖಡೆ ತಲೆನೋವಾದರು. ಮೊದಲ ದರ್ಜೆ ಕ್ರಿಕೆಟ್‌ನಲ್ಲಿ ಕೇವಲ ಎರಡನೇ ಪಂದ್ಯ ಆಡುತ್ತಿರುವ ಅವರು ಘಟಾನುಘಟಿಗಳಾದ ಅಜಿಂಕ್ಯ ರಹಾನೆ (18), ಸೂರ್ಯಕುಮಾರ್ ಯಾದವ್ (0) ಮತ್ತು ಶಿವಂ ದುಬೆ (0) ಅವರ ವಿಕೆಟ್‌ಗಳನ್ನು ಒಂದೇ ಓವರಿನಲ್ಲಿ ಪಡೆದರು. ಆಕಾಶ್ ಮತ್ತು ಶಾರ್ದೂಲ್ ನಂತರ ಆರನೇ ವಿಕೆಟ್‌ಗೆ 60 ರನ್ ಸೇರಿಸಿದ್ದರಿಂದ ಮುಂಬೈ ಕುಸಿತ ತಪ್ಪಿತು.

ಇದಕ್ಕೆ ಮೊದಲು, ಸೋಮವಾರ 5 ವಿಕೆಟ್‌ಗೆ 308 ರನ್ ಗಳಿಸಿದ್ದ ವಿದರ್ಭ ಆ ಮೊತ್ತಕ್ಕೆ 75 ರನ್ ಸೇರಿಸಲು ಶಕ್ತವಾಯಿತು. ಶಿವಂ ದುಬೆ ಐದು ವಿಕೆಟ್ ಗಳಿಸಿದರು.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್‌: ವಿದರ್ಭ: 107.5 ಓವರುಗಳಲ್ಲಿ 383 (ಯಶ್‌ ರಾಥೋಡ್‌ 54, ಅಕ್ಷಯ್ ವಾಡಕರ್ 34; ಶಿವಂ ದುಬೆ 49ಕ್ಕೆ5); ಮುಂಬೈ: 59 ಓವರುಗಳಲ್ಲಿ 7 ವಿಕೆಟ್‌ಗೆ 188 (ಆಕಾಶ್‌ ಆನಂದ್‌ ಔಟಾಗದೇ 67, ಶಾರ್ದೂಲ್ ಠಾಕೂರ್ 37; ಯಶ್‌ ಠಾಕೂರ್‌ 56ಕ್ಕೆ2, ಪಾರ್ಥ ರೇಖಡೆ 16ಕ್ಕೆ3).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.