ADVERTISEMENT

ಚಿನ್ನಸ್ವಾಮಿ ಅಂಗಳದಲ್ಲಿ 'ರಜತ್" ಸಂಭ್ರಮ: ರನ್‌ಗಳ ಹೊಳೆ ಹರಿಸಿದ ಪಾಟೀದಾರ್

ನ್ಯೂಜಿಲೆಂಡ್ ಎ ವಿರುದ್ಧ ಪಾಂಚಾಲ್ ಬಳಗಕ್ಕೆ ಇನಿಂಗ್ಸ್ ಮುನ್ನಡೆ: ಅಭಿಮನ್ಯು ಶತಕ

ಗಿರೀಶದೊಡ್ಡಮನಿ
Published 3 ಸೆಪ್ಟೆಂಬರ್ 2022, 14:52 IST
Last Updated 3 ಸೆಪ್ಟೆಂಬರ್ 2022, 14:52 IST
ರಜತ್ ಪಾಟೀದಾರ್ ಹಾಗೂ ತಿಲಕ್‌ ವರ್ಮಾ ಜೊತೆಯಾಟದ ಓಟ  –ಪ್ರಜಾವಾಣಿ ಚಿತ್ರ/ ಪುಷ್ಕರ್ ವಿ
ರಜತ್ ಪಾಟೀದಾರ್ ಹಾಗೂ ತಿಲಕ್‌ ವರ್ಮಾ ಜೊತೆಯಾಟದ ಓಟ  –ಪ್ರಜಾವಾಣಿ ಚಿತ್ರ/ ಪುಷ್ಕರ್ ವಿ   

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರ ರಜತ್ ಪಾಟೀದಾರ್‌ಗೆ ಚಿನ್ನಸ್ವಾಮಿ ಕ್ರೀಡಾಂಗಣವೇ ತವರು. ಶನಿವಾರ ಇದೇ ಅಂಗಳದಲ್ಲಿ ಅವರು ರನ್‌ಗಳ ಹೊಳೆ ಹರಿಸಿದರು.

ರಜತ್ (ಬ್ಯಾಟಿಂಗ್ 170; 241ಎ, 4X14, 6X4) ಹಾಗೂ ಅಭಿಮನ್ಯು ಈಶ್ವರನ್ (132; 194ಎ, 4X13, 6X1) ಅವರ ಸುಂದರ ಶತಕಗಳ ಬಲದಿಂದ ಭಾರತ ಎ ತಂಡವು ನ್ಯೂಜಿಲೆಂಡ್ ಎ ವಿರುದ್ಧದ ‘ಟೆಸ್ಟ್’ ಪಂದ್ಯದಲ್ಲಿ ಮೊದಲ ಇನಿಂಗ್ಸ್‌ನಲ್ಲಿ 92 ರನ್‌ಗಳ ಮುನ್ನಡೆ ಸಾಧಿಸಿತು.

ಮೂರನೇ ದಿನದಾಟದ ಅಂತ್ಯಕ್ಕೆ ಆತಿಥೇಯ ತಂಡವು 124 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 492 ರನ್‌ ಗಳಿಸಿತು. ರಜತ್ ಹಾಗೂ ಶತಕದತ್ತ ದಾಪುಗಾಲಿಟ್ಟಿರುವ ತಿಲಕ್ ವರ್ಮಾ (ಬ್ಯಾಟಿಂಗ್ 82) ಕ್ರೀಸ್‌ನಲ್ಲಿದ್ದಾರೆ. ಪಂದ್ಯದಲ್ಲಿ ಇನ್ನೊಂದು ದಿನ ಬಾಕಿ ಇದೆ.

ADVERTISEMENT

ಮೊದಲು ಬ್ಯಾಟಿಂಗ್ ಮಾಡಿದ್ದ ಪ್ರವಾಸಿ ಬಳಗವು ಪ್ರಥಮ ಇನಿಂಗ್ಸ್‌ನಲ್ಲಿ 400 ರನ್‌ ಗಳಿಸಿದೆ. ಅದಕ್ಕುತ್ತರವಾಗಿ ಶುಕ್ರವಾರದ ದಿನದಾಟದ ಮುಕ್ತಾಯಕ್ಕೆ ಆತಿಥೇಯ ತಂಡವು37 ಓವರ್‌ಗಳಲ್ಲಿ 1 ವಿಕೆಟ್‌ಗೆ 156 ರನ್‌ ಗಳಿಸಿತ್ತು. 87 ರನ್ ಗಳಿಸಿದ್ದ ಅಭಿಮನ್ಯು ಈಶ್ವರನ್ ಹಾಗೂ 20 ರನ್‌ ಗಳಿಸಿದ್ದ ಋತುರಾಜ್ ಕ್ರೀಸ್‌ನಲ್ಲಿದ್ದರು. ಶನಿವಾರದ ಎರಡನೇ ಓವರ್‌ನಲ್ಲಿಯೇ ಋತುರಾಜ್ ವಿಕೆಟ್ ಗಳಿಸಿದ ರಚಿನ್ ರವೀಂದ್ರ ಸಂಭ್ರಮಿಸಿದರು. ಆದರೆ ಈ ಸಂತಸ ಬಹಳ ಹೊತ್ತು ಉಳಿಯಲಿಲ್ಲ.

ಕ್ರೀಸ್‌ಗೆ ಕಾಲಿಟ್ಟ ರಜತ್ ಅವರು ಅಭಿಮನ್ಯು ಜೊತೆಗೂಡಿ ಬೌಲರ್‌ಗಳ ದಾಳಿಯನ್ನು ಹಿಮ್ಮೆಟ್ಟಿಸಿದರು. ಮೂರನೇ ವಿಕೆಟ್ ಜೊತೆಯಾಟದಲ್ಲಿ 104 ರನ್‌ಗಳನ್ನು ಕೇವಲ 26 ಓವರ್‌ಗಳಲ್ಲಿ ಸೇರಿಸಿದರು. ಊಟದ ವಿರಾಮಕ್ಕೂ ಮುನ್ನವೇ ತಮ್ಮ ಶತಕ ಪೂರೈಸಿದ ಅಭಿಮನ್ಯು ಸಂಭ್ರಮಿಸಿದರು. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಇದು ಅವರ 16ನೇ ಶತಕ. ಎಡಗೈ ಸ್ಪಿನ್ನರ್ ಮಿಚೆಲ್ ರಿಪನ್ ಬೌಲಿಂಗ್‌ನಲ್ಲಿ ಔಟಾದರು.

ಆದರೆ ರಜತ್ ತಮ್ಮ ವಿಶ್ವಾಸಭರಿತ ಹಾಗೂ ಚುರುಕಿನ ಆಟವನ್ನು ನಿಲ್ಲಿಸಲಿಲ್ಲ. ಅವರೊಂದಿಗೆ ಸೇರಿದ ಸರ್ಫರಾಜ್ ಖಾನ್ ಕೂಡ ಬೌಲರ್‌ಗಳನ್ನು ದಂಡಿಸಿದರು. ಐದು ಬೌಂಡರಿಗಳನ್ನು ಹೊಡೆದ ಅವರು 67ಎಸೆತಗಳಲ್ಲಿ 36 ರನ್‌ಗಳನ್ನು ಗಳಿಸಿದರು.

ಸರ್ಫರಾಜ್ ಔಟಾದ ಮೇಲೆ ರಜತ್ ಜೊತೆಗೂಡಿದ ತಿಲಕ್ ವರ್ಮಾ ಕೂಡ ಬೀಸಾಟವಾಡಿದರು. ಈ ಇಬ್ಬರೂ ಐಪಿಎಲ್ ತಾರೆಗಳು ಮುರಿಯದ ಐದನೇ ವಿಕೆಟ್ ಜೊತೆಯಾಟದಲ್ಲಿ 167 ರನ್‌ ಪೇರಿಸಿದರು.

ಸಂಕ್ಷಿಪ್ತ ಸ್ಕೋರು:

ಮೊದಲ ಇನಿಂಗ್ಸ್: ನ್ಯೂಜಿಲೆಂಡ್ ಎ: 400, ಭಾರತ ಎ: 124 ಓವರ್‌ಗಳಲ್ಲಿ 4ಕ್ಕೆ492 (ಅಭಿಮನ್ಯು ಈಶ್ವರನ್ 132, ಋತುರಾಜ್ ಗಾಯಕವಾಡ್ 21, ರಜತ್ ಪಾಟೀದಾರ್ ಬ್ಯಾಟಿಂಗ್ 170, ಸರ್ಫರಾಜ್ ಖಾನ್ 36, ತಿಲಕ್ ವರ್ಮಾ ಬ್ಯಾಟಿಂಗ್ 82, ರಚಿನ್ ರವೀಂದ್ರ 96ಕ್ಕೆ2, ಜೇಕಬ್ ಡಫಿ 73ಕ್ಕೆ1, ಮಿಚೆಲ್ ರಿಪನ್ 101ಕ್ಕೆ1)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.