ADVERTISEMENT

ಪುದುಚೇರಿಗೆ ಪವನ್ ದೇಶಪಾಂಡೆ ವಲಸೆ

ಎಲ್ಲ ಮಾದರಿಗಳಲ್ಲಿ ಆಡುವ ಅವಕಾಶಕ್ಕಾಗಿ ತಂಡ ಬದಲಾವಣೆ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2021, 13:19 IST
Last Updated 19 ಆಗಸ್ಟ್ 2021, 13:19 IST
ಪವನ್ ದೇಶಪಾಂಡೆ
ಪವನ್ ದೇಶಪಾಂಡೆ   

ಬೆಂಗಳೂರು: ಕರ್ನಾಟಕ ಕ್ರಿಕೆಟ್ ತಂಡದ ಆಲ್‌ರೌಂಡರ್ ಪವನ್ ದೇಶಪಾಂಡೆ ಮುಂಬರುವ ದೇಶಿ ಋತುವಿನಿಂದ ಪುದುಚೇರಿ ತಂಡವನ್ನು ಪ್ರತಿನಿಧಿಸಲಿದ್ದಾರೆ.

31 ವರ್ಷದ ಪವನ್, ಹೋದ ವರ್ಷದ ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಕರ್ನಾಟಕ ತಂಡದ ಉಪನಾಯಕರಾಗಿದ್ದರು.2015ರಲ್ಲಿ ಅವರು ಟಿ20 ಕ್ರಿಕೆಟ್‌ ಟೂರ್ನಿಯಲ್ಲಿ ಕರ್ನಾಟಕ ತಂಡದಲ್ಲಿ ಪದಾರ್ಪಣೆ ಮಾಡಿದ್ದರು. 2016–17ರಲ್ಲಿ ಅವರು ಮೊಹಾಲಿಯಲ್ಲಿ ನಡೆದಿದ್ದ ಮಹಾರಾಷ್ಟ್ರ ವಿರುದ್ಧದ ರಣಜಿ ಪಂದ್ಯದಲ್ಲಿ ಪದಾರ್ಪಣೆ ಮಾಡಿದ್ದರು.

ಧಾರವಾಡದ ಪವನ್ ದೇಶಪಾಂಡೆ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಮತ್ತು ಎಡಗೈ ಸ್ಪಿನ್ನರ್ ಆಗಿದ್ದಾರೆ.

ADVERTISEMENT

‘ಕರ್ನಾಟಕ ತಂಡದಲ್ಲಿ ಅಪಾರ ಪೈಪೋಟಿ ಇದೆ. ಮೂರು ಮಾದರಿಗಳಲ್ಲಿಯೂ ಸ್ಥಾನ ಸಿಗುವುದು ಕಷ್ಟ. ಸಿಕ್ಕರೂ ಅಂತಿಮ ಹನ್ನೊಂದರ ಬಳಗದಲ್ಲಿ ಸ್ಥಾನ ಗಳಿಸುವುದು ಅಷ್ಟು ಸುಲಭವಲ್ಲ. ನನ್ನ ಕ್ರಿಕೆಟ್ ಭವಿಷ್ಯದ ದೃಷ್ಟಿಯಿಂದ ಇನ್ನೂ ಕೆಲವು ವರ್ಷ ಆಡುವ ಸಾಮರ್ಥ್ಯವನ್ನು ವಿನಿಯೋಗಿಸಿಕೊಳ್ಳುವುದು ಅವಶ್ಯಕ. ಕೆಲವು ಹಿರಿಯ ಕ್ರಿಕೆಟಿಗರೊಂದಿಗೆ ಚರ್ಚಿಸಿ ಈ ನಿರ್ಧಾರ ಕೈಗೊಂಡಿದ್ದೇನೆ. ತವರಿನ ತಂಡವನ್ನು ಬಿಟ್ಟು ಬೇರೆಡೆಗೆ ಹೋಗುವುದು ಬಹಳ ಕಷ್ಟದ ಕೆಲಸ. 15 ದಿನ ತುಂಬಾ ಯೋಚಿಸಿ ತೀರ್ಮಾನ ತೆಗೆದುಕೊಂಡಿದ್ದೇನೆ’ ಎಂದು ಪವನ್ ‘ಪ್ರಜಾವಾಣಿ’ಗೆ ಹೇಳಿದರು.

ಹೋದ ಶನಿವಾರ ಅವರಿಗೆ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ)ಯು ನಿರಾಕ್ಷೇಪಣ ಪತ್ರವನ್ನು ನೀಡಿದೆ.

‘ಬಾಲ್ಯದಿಂದಲೂ ಕರ್ನಾಟಕದ ವಿವಿಧ ವಯೋಮಿತಿಯ ತಂಡಗಳನ್ನು ಪ್ರತಿನಿಧಿಸಿದ್ದೇನೆ. ಇಲ್ಲಿಯವರೆಗೂ ಸಹಆಟಗಾರರೊಂದಿಗೆ ನಿಕಟ ಸ್ನೇಹವಿದೆ. ಕೆಎಸ್‌ಸಿಎಯಿಂದಲೂ ಅಪಾರ ಬೆಂಬಲ ಸಿಕ್ಕಿದೆ. ಇಂತಹ ಸಂದರ್ಭದಲ್ಲಿ ತೀರ್ಮಾನ ತೆಗೆದುಕೊಳ್ಳುವುದು ಸ್ವಲ್ಪ ಕಷ್ಟವೇ. ಆದರೆ, ವೃತ್ತಿಪರವಾಗಿ ಯೋಚಿಸುವುದು ಕೂಡ ಅಷ್ಟೇ ಮಹತ್ವದ್ದು’ ಎಂದು ಪವನ್ ಹೇಳುತ್ತಾರೆ.

ಕಳೆದ ಏಳು ವರ್ಷಗಳಲ್ಲಿ ಪವನ್ ಅವರಿಗೆ ತಂಡದಲ್ಲಿ ನಿರಂತರವಾಗಿ ಸ್ಥಾನ ಸಿಕ್ಕಿರಲಿಲ್ಲ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಟೂರ್ನಿಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿಯೂ ಅವರು ಕಳೆದ ಮೂರು ವರ್ಷಗಳಿಂದ ಇದ್ದಾರೆ. ಇದುವರೆಗೆ ಪದಾರ್ಪಣೆ ಮಾಡುವ ಅವಕಾಶ ದೊರೆತಿಲ್ಲ. ಮುಂದಿನ ತಿಂಗಳು ಯುಎಇಯಲ್ಲಿ ಐಪಿಎಲ್ ಟೂರ್ನಿಯಲ್ಲಿ ಭಾಗವಹಿಸಿದ ನಂತರ ಅವರು ಪುದುಚೇರಿಗೆ ತೆರಳುವರು.

ಪಟ್ಟಿ

ಮಾದರಿ; ಪಂದ್ಯ; ರನ್; ಅರ್ಧಶತಕ; ಶ್ರೇಷ್ಠ; ವಿಕೆಟ್ ಗಳಿಕೆ; ಶ್ರೇಷ್ಠ ಬೌಲಿಂಗ್

ಪ್ರಥಮದರ್ಜೆ; 8;255; 2; 70; 14; 5ಕ್ಕೆ3

ಲಿಸ್ಟ್ ಎ; 23; 777; 7; 95; 2; 10ಕ್ಕೆ1

ಟಿ20; 23; 463; 3; 63; 4; 34ಕ್ಕೆ2

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.