ADVERTISEMENT

ಪಾಕ್ ಕ್ರಿಕೆಟಿಗರ ಚಿತ್ರ ತೆರವು: ಪಾಕಿಸ್ತಾನ ಕ್ರಿಕೆಟ್ ಮಂಡಳಿ ಕಿಡಿ

ಪಿಟಿಐ
Published 18 ಫೆಬ್ರುವರಿ 2019, 12:10 IST
Last Updated 18 ಫೆಬ್ರುವರಿ 2019, 12:10 IST
   

ಕರಾಚಿ: ಭಾರತದ ಕೆಲವು ಕ್ರೀಡಾಂಗಣಗಳಿಂದ ಪಾಕಿಸ್ತಾನ ಕ್ರಿಕೆಟಿಗರ ಭಾವಚಿತ್ರಗಳನ್ನು ತೆರವುಗೊಳಿಸಿದ್ದಕ್ಕೆ ಮತ್ತು ಮುಚ್ಚಿದ್ದಕ್ಕೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಬೇಸರ ವ್ಯಕ್ತಪಡಿಸಿದೆ. ಇದನ್ನು ಅಂತರರಾಷ್ಟ್ರೀಯ ಕ್ರಿಕೆಟ್‌ ಸಮಿತಿಯ (ಐಸಿಸಿ) ಗಮನಕ್ಕೆ ತಂದು ಪ್ರತಿಭಟನೆ ವ್ಯಕ್ತಪಡಿಸಲಾಗುವುದು ಎಂದೂ ಪಿಸಿಬಿ ಹೇಳಿದೆ.

ಪಾಕಿಸ್ತಾನದ ಪ್ರಧಾನಮಂತ್ರಿಯೂ ಆಗಿರುವ ಇಮ್ರಾನ್‌ ಖಾನ್ ಮತ್ತು ಪ್ರಮುಖ ಆಟಗಾರರ ಚಿತ್ರಗಳನ್ನು ಪುಲ್ವಾಮಾ ದಾಳಿಯ ನಂತರ ಭಾರತದ ಕೆಲವು ಕ್ರೀಡಾಂಗಣಗಳಿಂದ ತೆರವುಗೊಳಿಸಲಾಗಿತ್ತು. ಕೆಲವು ಕಡೆಗಳಲ್ಲಿ ಮುಚ್ಚಲಾಗಿತ್ತು.

ಇದರಿಂದ ಬೇಸರಗೊಂಡ ಪಿಸಿಬಿ, ವ್ಯವಸ್ಥಾಪಕ ನಿರ್ದೇಶಕ ವಸೀಂ ಖಾನ್‌ ಮೂಲಕ ಭಾನುವಾರ ರಾತ್ರಿ ಪತ್ರಿಕಾ ಹೇಳಿಕೆ ಬಿಡುಗಡೆಗೊಳಿಸಿದ್ದು ‘ಇದೇ 28ರಂದು ದುಬೈನಲ್ಲಿ ನಡೆಯಲಿರುವ ಐಸಿಸಿ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಲಾಗುವುದು’ ಎಂದಿದೆ.

ADVERTISEMENT

‘ಕ್ರೀಡೆ ಮತ್ತು ರಾಜಕೀಯವನ್ನು ಭಿನ್ನ ನೆಲೆಯಲ್ಲೇ ನೋಡಬೇಕು. ಕ್ರೀಡೆ, ವಿಶೇಷವಾಗಿ ಕ್ರಿಕೆಟ್‌, ರಾಷ್ಟ್ರಗಳ ನಡುವಿನ ಭಿನ್ನಾಭಿಪ್ರಾಯಗಳನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಆಟಗಾರರ ಚಿತ್ರಗಳನ್ನು ಕ್ರೀಡಾಂಗಣಗಳಿಂದ ತೆರವುಗೊಳಿಸುವುದು ಅಥವಾ ಮುಚ್ಚುವುದು ಖಂಡನೀಯ’ ಎಂದು ಪಿಸಿಬಿ ಅಭಿಪ್ರಾಯಪಟ್ಟಿದೆ.

ಪುಲ್ವಾಮಾ ದಾಳಿಯ ನಂತರ ಮುಂಬೈನ ಕ್ರಿಕೆಟ್ ಕ್ಲಬ್ ಆಫ್ ಇಂಡಿಯಾದಲ್ಲಿನ ಇಮ್ರಾನ್ ಖಾನ್‌ ಚಿತ್ರವನ್ನು ಮುಚ್ಚಲಾಗಿತ್ತು. ಪಂಜಾಬ್ ಕ್ರಿಕೆಟ್ ಸಂಸ್ಥೆ, ಮೊಹಾಲಿ ಕ್ರೀಡಾಂಗಣದ ವಿವಿಧ ಕಡೆಗಳಲ್ಲಿದ್ದ ಇಮ್ರಾನ್ ಖಾನ್ ಮತ್ತು ಪಾಕಿಸ್ತಾನದ ಇತರ ಆಟಗಾರರ ಚಿತ್ರಗಳನ್ನು ತೆರವುಗೊಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.