ADVERTISEMENT

ಜಯ್‌ ಶಾ ಹೇಳಿಕೆಯಿಂದ ಕ್ರಿಕೆಟ್‌ ಸಮುದಾಯದಲ್ಲಿ ಒಡಕು: ಪಿಸಿಬಿ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2022, 11:03 IST
Last Updated 20 ಅಕ್ಟೋಬರ್ 2022, 11:03 IST
ಜಯ್‌ ಶಾ
ಜಯ್‌ ಶಾ   

ಲಾಹೋರ್‌ (ಪಿಟಿಐ): ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯದರ್ಶಿ ಜಯ್‌ ಶಾ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ (ಪಿಸಿಬಿ), ‘ಅಂತಹ ಹೇಳಿಕೆಗಳು ಏಷ್ಯನ್‌ ಮತ್ತು ಅಂತರರಾಷ್ಟ್ರೀಯ ಕ್ರಿಕೆಟ್‌ ಸಮುದಾಯದಲ್ಲಿ ಒಡಕು ಉಂಟುಮಾಡಲಿದೆ’ ಎಂದು ಎಚ್ಚರಿಸಿದೆ.

‘ಭಾರತ ತಂಡ 2023ರ ಏಷ್ಯಾಕಪ್‌ ಟೂರ್ನಿಯಲ್ಲಿ ಆಡಲು ಪಾಕಿಸ್ತಾನಕ್ಕೆ ತೆರಳುವುದಿಲ್ಲ. ಟೂರ್ನಿಯನ್ನು ಪಾಕ್‌ ಬದಲು ತಟಸ್ಥ ತಾಣದಲ್ಲಿ ಆಯೋಜಿಸಲಾಗುವುದು’ ಎಂದು ಶಾ ಮಂಗಳವಾರ ಹೇಳಿದ್ದರು.

ಶಾ ಹೇಳಿಕೆಗೆ ಇದೇ ಮೊದಲ ಬಾರಿ ಅಧಿಕೃತವಾಗಿ ಪ್ರತಿಕ್ರಿಯಿಸಿರುವ ಪಿಸಿಬಿ, ‘ಇಂತಹ ಹೇಳಿಕೆಗಳು ಒಟ್ಟಾರೆಯಾಗಿ ಕ್ರಿಕೆಟ್‌ ವಲಯದಲ್ಲಿ ಒಡಕು ಮೂಡಿಸಲಿದೆ. 2023 ರಲ್ಲಿ ಭಾರತ ಆತಿಥ್ಯ ವಹಿಸಲಿರುವ ಏಕದಿನ ವಿಶ್ವಕಪ್‌ ಟೂರ್ನಿ ಹಾಗೂ 2024 ರಿಂದ 2031ರ ಅವಧಿಯಲ್ಲಿ ಭಾರತದಲ್ಲಿ ನಡೆಯಲಿರುವ ಎಲ್ಲ ಐಸಿಸಿ ಟೂರ್ನಿಗಳಲ್ಲಿ ಪಾಕಿಸ್ತಾನದ ಪಾಲ್ಗೊಳ್ಳುವಿಕೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ’ ಎಂದು ಹೇಳಿದೆ.

ADVERTISEMENT

‘ಏಷ್ಯನ್‌ ಕ್ರಿಕೆಟ್‌ ಕೌನ್ಸಿಲ್‌ನಿಂದ (ಎಸಿಸಿ) ನಮಗೆ ಇದುವರೆಗೆ ಯಾವುದೇ ಸ್ಪಷ್ಟೀಕರಣ ಬಂದಿಲ್ಲ. ಇಂತಹ ಸೂಕ್ಷ್ಮ ವಿಷಯದ ಬಗ್ಗೆ ಚರ್ಚಿಸಲು ಶೀಘ್ರದಲ್ಲೇ ತುರ್ತು ಸಭೆ ನಡೆಸುವಂತೆ ಎಸಿಸಿಗೆ ಮನವಿ ಮಾಡಿದ್ದೇವೆ’ ಎಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.