ಪಾಕಿಸ್ತಾನ ಆಟಗಾರರು
ಕರಾಚಿ: ಬೆರಗುಹುಟ್ಟಿಸುವ ಬೆಳವಣಿಗೆಯೊಂದರಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ ವೆಚ್ಚ ಕಡಿತದ ಕ್ರಮಕ್ಕೆ ಮುಂದಾಗಿದ್ದು, ದೇಶಿಯ ಕ್ರಿಕೆಟ್‌ನಲ್ಲಿ ಆಟಗಾರರ ಪಂದ್ಯ ಸಂಭಾವನೆಯನ್ನು ಗಣನೀಯವಾಗಿ ಕಡಿಮೆ ಮಾಡಲಾಗಿದೆ. ಇದು ದೇಶದ ಅತ್ಯುನ್ನತ ಕ್ರೀಡಾಸಂಸ್ಥೆಯ ಹಣಕಾಸಿನ ಸ್ಥಿತಿಯ ಬಗ್ಗೆ ಪ್ರಶ್ನೆಗಳನ್ನು ಮೂಡಿಸಿದೆ.
ಮುಂಬರುವ ರಾಷ್ಟ್ರೀಯ ಟಿ20 ಚಾಂಪಿಯನ್‌ಷಿಪ್‌ನಲ್ಲಿ ಆಡುವ ಆಟಗಾರರ ಸಂಭಾವನೆಯನ್ನು ಪ್ರತಿ ಪಂದ್ಯಕ್ಕೆ 1,00,000 ರೂಪಾಯಿಗಳಿಂದ 10,000 ರೂ.ಗಳಿಗೆ ಇಳಿಸಲಾಗಿದೆ. ಮೀಸಲು ಆಟಗಾರರ ಸಂಭಾವನೆ 5000 ರೂ.ಗೆ ಇಳಿಯಲಿದೆ. ಈ ಟೂರ್ನಿ ಮಾರ್ಚ್ 14ರಂದು ಆರಂಭವಾಗಲಿದೆ.
ಪಂದ್ಯದ ಸಂಭಾವನೆಯಲ್ಲಿ ಭಾರಿ ಕಡಿತ ಆಗಿರುವುದು ಆಟಗಾರರಲ್ಲಿ ಕಳವಳ ಮೂಡಿಸಿದೆ. ದೇಶಿ ಕ್ರಿಕೆಟ್‌ಗೆ ಮಾಡುತ್ತಿರುವ ವೆಚ್ಚವನ್ನೂ ಗಣನೀಯವಾಗಿ ಕಡಿಮೆ ಮಾಡಲು ಮಂಡಳಿ ಮುಂದಾಗಿದೆ.
ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ದೇಶಿ ಕ್ರಿಕೆಟ್‌ನ ಮುಖ್ಯಸ್ಥರಾದ ಅಬ್ದುಲ್ಲಾ ಖುರ್ರಂ ನಿಯಾಝಿ ಅವರು ಕೆಲವು ತಿಂಗಳಿಂದ ದೇಶೀಯ ಕ್ರಿಕೆಟ್ ಆಟಗಾರರ ‘ಸೌಲಭ್ಯಗಳಿಗೆ ಕತ್ತರಿ ಹಾಕುತ್ತಿದ್ದಾರೆ’ ಎಂದು ಮೂಲಗಳು ತಿಳಿಸಿವೆ.
‘ಮೊದಲು ಪಂಚತಾರಾ ಅಥವಾ ಫೋರ್‌ಸ್ಟಾರ್ ಹೋಟೆಲ್ ವಾಸ್ತವ್ಯಕ್ಕೆ ಇದ್ದ ಅವಕಾಶವನ್ನು ಈಗ ಕಡಿಮೆ ವೆಚ್ಚದ ಹೋಟೆಲ್‌ಗಳಿಗೆ ಸೀಮಿತಗೊಳಿಸಲಾಗಿದೆ. ವಿಮಾನ ಪ್ರಯಾಣಕ್ಕೂ ಕಡಿವಾಣ ಹಾಕಲಾಗಿದೆ’ ಎಂದೂ ತಿಳಿಸಿವೆ.
ಆಟಗಾರರಿಗೆ ಮತ್ತು ಅಂಪೈರ್‌ಗಳಿಗೆ ಕಳೆದ ಋತುವಿನಲ್ಲಿ ನೀಡಬೇಕಾಗಿದ್ದ ಸಂಭಾವನೆಯ ಮೊತ್ತವನ್ನು ಇನ್ನೂ ಪಾವತಿಸಲಾಗಿಲ್ಲ ಎಂದು ಇನ್ನೊಂದು ಮೂಲ ತಿಳಿಸಿದೆ. ಮಂಡಳಿ ನಿಯಮದ ಪ್ರಕಾರ ಮಾಜಿ ಟೆಸ್ಟ್ ಆಟಗಾರರಿಗೆ ನೀಡಬೇಕಾಗಿರುವ ವಾರ್ಷಿಕ ಪಿಂಚಣಿ ಏರಿಕೆಯನ್ನು ಇನ್ನೂ ಜಾರಿಗೊಳಿಸಿಲ್ಲ ಎನ್ನಲಾಗಿದೆ.
ವಿಪರ್ಯಾಸ ಎಂದರೆ, ಆಟಗಾರರಿಗೆ ಸಂಭಾವನೆ ಕಡಿಮೆ ಮಾಡಿರುವ ಅಧಿಕಾರಿಗಳು ಮಾತ್ರ ತಿಂಗಳಿಗೆ ಲಕ್ಷಗಟ್ಟಲೆ ರೂಪಾಯಿ ವೇತನವಾಗಿ ಪಡೆಯುತ್ತಿದ್ದಾರೆ. ರಾಷ್ಟ್ರೀಯ ಆಯ್ಕೆಗಾರರಿಗೆ ಮತ್ತು ಈಗಷ್ಟೇ ಮುಕ್ತಾಯಗೊಂಡ ಚಾಂಪಿಯನ್ಸ್ ಟ್ರೋಫಿಯ ಐದು ಮಾರ್ಗದರ್ಶಕರಿಗೂ (ಮೆಂಟರ್) ಭಾರಿ ಮೊತ್ತ ಪಾವತಿಸಲಾಗಿದೆ.
ಮಿಸ್ಬಾ ಉಲ್ ಹಕ್, ವಕಾರ್ ಯೂನಿಸ್, ಶೋಯೆಬ್ ಮಲಿಕ್, ಸರ್ಫರಾಜ್ ಅಹ್ಮದ್ ಮತ್ತು ಸಕಲೇನ್ ಮುಷ್ತಾಕ್ ಅವರು ಎರಡು ವರ್ಷಗಳ ಗುತ್ತಿಗೆ ಆಧಾರದಲ್ಲಿ ಮೆಂಟರ್‌ಗಳಾಗಿದ್ದು, ತಿಂಗಳಿಗೆ 50 ಲಕ್ಷ ರೂ. ಪಡೆದಿದ್ದಾರೆ.
ಲಾಹೋರ್‌ನ ಗಡ್ಡಾಫಿ ಕ್ರೀಡಾಂಗಣ, ಕರಾಚಿಯ ನ್ಯಾಷನಲ್ ಸ್ಟೇಡಿಯಂ ಮತ್ತು ರಾವಲ್ಪಿಂಡಿ ಕ್ರಿಕೆಟ್ ಕ್ರೀಡಾಂಗಣಗಳ ನವೀಕರಣಕ್ಕೆ ಪಿಸಿಬಿ 1.8 ಶತಕೋಟಿ ರೂಪಾಯಿ ವೆಚ್ಚ ಮಾಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.