ADVERTISEMENT

ಈ ಆಟಗಾರ ಡೆಲ್ಲಿ ಕ್ಯಾಪಿಟಲ್ಸ್‌ಗೆ ರಿಷಭ್ ಪಂತ್ ಸ್ಥಾನ ತುಂಬಬಲ್ಲ: ಪಗ್ಯಾನ್ ಓಜಾ

ಐಎಎನ್ಎಸ್
Published 13 ಜನವರಿ 2023, 16:09 IST
Last Updated 13 ಜನವರಿ 2023, 16:09 IST
ರಿಷಭ್‌ ಪಂತ್‌
ರಿಷಭ್‌ ಪಂತ್‌   

ಭಾರತ ಕ್ರಿಕೆಟ್ ತಂಡದ ವಿಕೆಟ್‌ ಕೀಪರ್‌, ಬ್ಯಾಟರ್‌ ರಿಷಭ್‌ ಪಂತ್‌ ಅವರು ಅಪಘಾತಕ್ಕೀಡಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಐಪಿಎಲ್‌ನಲ್ಲಿ ಆಡುವ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ನಾಯಕರಾಗಿರುವ ಪಂತ್‌, 2023ರ ಆವೃತ್ತಿಯಿಂದಲೇ ಹೊರಬಿದ್ದಿದ್ದಾರೆ. ಹೀಗಾಗಿ ಅವರ ಬದಲು ತಂಡದ ವಿಕೆಟ್‌ ಕೀಪರ್‌ ಹೊಣೆಯನ್ನು ಯಾರು ಹೊರಲಿದ್ದಾರೆ ಎಂಬ ಪ್ರಶ್ನೆ ಎದ್ದಿದೆ.

ಸನ್‌ರೈಸರ್ಸ್‌ ಹೈದರಾಬಾದ್‌ ತಂಡವನ್ನು ಒಮ್ಮೆ ಚಾಂಪಿಯನ್‌ ಪಟ್ಟಕ್ಕೇರಿಸಿರುವ ಆಸ್ಟ್ರೇಲಿಯಾದ ಡೇವಿಡ್‌ ವಾರ್ನರ್‌ ಡೆಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ ಎನ್ನಲಾಗುತ್ತಿದೆ. ಆದರೆ, ವಿಕೆಟ್ ಕೀಪರ್‌ ಆಗಿ, ಅಂತಿಮ ಹನ್ನೊಂದರ ಬಳಗದಲ್ಲಿ ಯಾರು ಕಾಣಿಸಿಕೊಳ್ಳಲಿದ್ದಾರೆ ಎಂಬುದು ಇನ್ನೂ ಪ್ರಶ್ನೆಯಾಗಿಯೇ ಉಳಿದಿದೆ.

ಈ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿರುವ ಮಾಜಿ ಕ್ರಿಕೆಟಿಗ ಪ್ರಗ್ಯಾನ್‌ ಓಜಾ, ಇಂಗ್ಲೆಂಡ್‌ ತಂಡದ ಫಿಲ್‌ ಸಾಲ್ಟ್‌ ಅವರು ಪಂತ್‌ ಸ್ಥಾನ ತುಂಬಬಲ್ಲರು ಎಂದು ಹೇಳಿದ್ದಾರೆ. ಸ್ಪೋರ್ಟ್ಸ್‌ 18 ವಾಹಿನಿಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ್ದಾರೆ.

ADVERTISEMENT

ಡೆಲ್ಲಿ ಕ್ಯಾಪಿಟಲ್ಸ್‌ ಮಾಲೀಕರದ್ದೇ ಆಗಿರುವ ಪ್ರಿಟೋರಿಯಾ ಕ್ಯಾಪಿಟಲ್ಸ್‌ ತಂಡ 'ದಕ್ಷಿಣ ಆಫ್ರಿಕಾ 20' ಲೀಗ್‌ನಲ್ಲಿ ಆಡುತ್ತಿದೆ. ಪ್ರಿಟೋರಿಯಾ ತಂಡದಲ್ಲಿರುವ ವಿಕೆಟ್‌ ಕೀಪರ್‌, ಬ್ಯಾಟರ್‌ ಫಿಲ್‌ ಸಾಲ್ಟ್‌ ಅವರಂತಹ ಆಟಗಾರನ ಅಗತ್ಯ ಡೆಲ್ಲಿ ಕ್ಯಾಪಿಟಲ್ಸ್‌ಗೆ ಇದೆ. ಪಂತ್‌ ಅಲಭ್ಯತೆಯಿಂದಾಗಿ ಡೆಲ್ಲಿ ಪಡೆಯಲ್ಲಿ ಮೂಡಿರುವ ಸಣ್ಣ ಅಂತರವನ್ನು ಸರಿಪಡಿಸುವ ಸಾಮರ್ಥ್ಯ ಸಾಲ್ಟ್‌ ಅವರಲ್ಲಿದೆ ಎಂದು ಓಜಾ ಅಭಿಪ್ರಾಯಪಟ್ಟಿದ್ದಾರೆ.

'ದಕ್ಷಿಣ ಆಫ್ರಿಕಾ 20' ಲೀಗ್‌ ಇದೇ ಮೊದಲ ಬಾರಿಗೆ ನಡೆಯುತ್ತಿದೆ. ಪ್ರಿಟೋರಿಯಾ ಕ್ಯಾಪಿಟಲ್ಸ್‌ ತಂಡ ಜನವರಿ 12ರಂದು ಆಡಿದ ತನ್ನ ಮೊದಲ ಪಂದ್ಯದಲ್ಲಿ ಸನ್‌ರೈಸರ್ಸ್‌ ಈಸ್ಟರ್ನ್‌ ಕೇಪ್‌ ವಿರುದ್ಧ 23 ರನ್‌ ಅಂತರದ ಗೆಲುವು ಸಾಧಿಸಿ ಶುಭಾರಂಭ ಮಾಡಿದೆ. ಆರಂಭಿಕನಾಗಿ ಕಣಕ್ಕಿಳಿದಿದ್ದ ಸಾಲ್ಟ್‌ 47 ಎಸೆತಗಳಲ್ಲಿ 77 ರನ್ ಬಾರಿಸಿದ್ದರು. ಅವರ ಆಟದ ಬಲದಿಂದ ಪ್ರಿಟೋರಿಯಾ ಪಡೆ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 193 ರನ್‌ ಗಳಿಸಿತ್ತು. ಇದಕ್ಕುತ್ತರವಾಗಿ ಸನ್‌ರೈಸರ್ಸ್‌ 170 ರನ್‌ ಗಳಿಸಲಷ್ಟೇ ಶಕ್ತವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.