ಬೆಂಗಳೂರು: ‘ಐಪಿಎಲ್ ಕ್ರಿಕೆಟ್ ಟೂರ್ನಿಗೆ ಆಟಗಾರರನ್ನು ಹರಾಜು ಹಾಕುವುದು ಮಾನವ ಹಕ್ಕುಗಳ ಉಲ್ಲಂಘನೆ’ ಎಂದು ಆಕ್ಷೇಪಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಹೈಕೋರ್ಟ್ ವಜಾಗೊಳಿಸಿದೆ.
ಸಾಮಾಜಿಕ ಕಾರ್ಯಕರ್ತ ವೆಂಕಟೇಶ್‌ಶೆಟ್ಟಿ ಹಾಗೂ ಇತರರು ಸಲ್ಲಿಸಿದ್ದ ಅರ್ಜಿಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಅರಾಧೆ ನೇತೃತ್ವದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.
‘ಐಪಿಎಲ್ ಕ್ರಿಕೆಟ್ ಟೂರ್ನಿ ಈಗಾಗಲೇ ಮುಗಿದು ಗೆದ್ದ ತಂಡಕ್ಕೆ ಟ್ರೋಫಿಯನ್ನೂ ನೀಡಲಾಗಿದೆ. ಅಂತೆಯೇ ಐಪಿಎಲ್ ಆಟಗಾರರ ಹರಾಜು ಸಹ ಮುಕ್ತಾಯವಾಗಿದೆ. ಇಂತಹುದೇ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದೆಹಲಿ ಹೈಕೋರ್ಟ್ ಕೂಡ ವಜಾಗೊಳಿಸಿದೆ. ಆದ್ದರಿಂದ, ಈ ಅರ್ಜಿ ಪುರಸ್ಕರಿಸಲು ಆಗದು’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
‘ಐಪಿಎಲ್ ಕ್ರಿಕೆಟ್ ಪಂದ್ಯಗಳಿಗೆ ಆಟಗಾರರನ್ನು ವಸ್ತುಗಳಂತೆ ಹರಾಜು ಹಾಕುವುದು ಕಾನೂನು ಬಾಹಿರ. ಈ ರೀತಿಯ ಹರಾಜು ಪ್ರಕ್ರಿಯೆ ಮನುಷ್ಯರ ಘನತೆಗೆ ಧಕ್ಕೆ ತರುತ್ತಿದೆ ಮತ್ತು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ಆದ್ದರಿಂದ, ಐಪಿಎಲ್ ಆಟಗಾರರ ಹರಾಜಿಗೆ ತಡೆ ನೀಡಬೇಕು’ ಎಂದು ಅರ್ಜಿದಾರರು ಮನವಿ ಮಾಡಿದ್ದರು.
ಅರ್ಜಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಕಾರ್ಯದರ್ಶಿ ಜಯ್ ಶಾ, ಕೋಲ್ಕತ್ತ ನೈಟ್ ರೈಡರ್ಸ್ ಮಾಲೀಕ ಶಾರುಖ್ ಖಾನ್ ಸೇರಿದಂತೆ ಐಪಿಎಲ್ ತಂಡ ಗಳ ಎಲ್ಲಾ ಮಾಲೀಕರು ಹಾಗೂ ಬಿಸಿಸಿಐ ಪದಾಧಿಕಾರಿಗಳನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.