ADVERTISEMENT

ಆಟಗಾರರೇ ಪರಸ್ಪರ ಹುರಿದುಂಬಿಸಬೇಕು: ಮುಷ್ತಾಕ್‌ ಅಹಮದ್‌

ಪಾಕಿಸ್ತಾನ ತಂಡದ ಸ್ಪಿನ್‌ ಬೌಲಿಂಗ್‌ ಕೋಚ್‌ ಮುಷ್ತಾಕ್‌ ಅನಿಸಿಕೆ

ರಾಯಿಟರ್ಸ್
Published 10 ಜುಲೈ 2020, 12:42 IST
Last Updated 10 ಜುಲೈ 2020, 12:42 IST
ಮುಷ್ತಾಕ್‌ ಅಹಮದ್‌ –ಟ್ವಿಟರ್‌ ಚಿತ್ರ 
ಮುಷ್ತಾಕ್‌ ಅಹಮದ್‌ –ಟ್ವಿಟರ್‌ ಚಿತ್ರ    

ಲಂಡನ್‌: ‘ಕೊರೊನೋತ್ತರ ಕ್ರಿಕೆಟ್‌ನಲ್ಲಿ ಪ್ರೇಕ್ಷಕರ ಕ್ರೀಡಾಂಗಣ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಹೀಗಾಗಿ ಪಂದ್ಯಗಳ ವೇಳೆ ಆಟಗಾರರೇ ಪರಸ್ಪರ ಹುರಿದುಂಬಿಸಿಕೊಂಡು ಆಡುವುದು ಅನಿವಾರ್ಯ’ ಎಂದು ಪಾಕಿಸ್ತಾನ ಕ್ರಿಕೆಟ್‌ ತಂಡದ ಸ್ಪಿನ್‌ ಬೌಲಿಂಗ್‌ ಕೋಚ್‌ ಮುಷ್ತಾಕ್‌ ಅಹಮದ್‌ ಶುಕ್ರವಾರ ಹೇಳಿದ್ದಾರೆ.

ಮುಂದಿನ ತಿಂಗಳು ಜೀವ ಸುರಕ್ಷಾ ವಾತಾವರಣದಲ್ಲಿ (ಬಯೊ ಸೆಕ್ಯೂರ್‌) ನಡೆಯುವ ಮೂರು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಈಗಾಗಲೇ ಇಂಗ್ಲೆಂಡ್‌ಗೆ ತೆರಳಿರುವ ಮುಷ್ತಾಕ್‌ ಅವರು ಆಟಗಾರರ ಜೊತೆ ಸ್ವಯಂ ಪ್ರತ್ಯೇಕವಾಸದಲ್ಲಿದ್ದಾರೆ.

‘ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಯ ವೇಳೆ ಆಟಗಾರರಲ್ಲಿ ಸ್ಫೂರ್ತಿ ತುಂಬಲು ಗ್ಯಾಲರಿಗಳಲ್ಲಿ ಪ್ರೇಕ್ಷಕರಿರುವುದಿಲ್ಲ. ತಂಡಗಳ ಬಲಾಬಲ ಮತ್ತು ಪಂದ್ಯದ ಫಲಿತಾಂಶವನ್ನು ವಿಶ್ಲೇಷಿಸುವ ಪತ್ರಕರ್ತರೂ ಮೈದಾನಕ್ಕೆ ಬರುವುದು ಅನುಮಾನ. ಇಂತಹ ಪರಿಸ್ಥಿತಿಯಲ್ಲಿ ಆಟಗಾರರೇ ಪರಸ್ಪರ ಬೆನ್ನುತಟ್ಟಿಕೊಂಡು ಉತ್ಸಾಹದಿಂದ ಆಡಬೇಕು’ ಎಂದು ಮುಷ್ತಾಕ್‌ ಅವರು ಪಾಕಿಸ್ತಾನ ಕ್ರಿಕೆಟ್‌ ಮಂಡಳಿಯ (ಪಿಸಿಬಿ) ವೆಬ್‌ಸೈಟ್‌ಗೆ ತಿಳಿಸಿದ್ದಾರೆ.

ADVERTISEMENT

‘ಚೆಂಡಿನ ಹೊಳಪಿಗಾಗಿ ಎಂಜಲು ಹಚ್ಚುವುದನ್ನು ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ) ನಿಷೇಧಿಸಿದೆ. ಸ್ಪಿನ್ನರ್‌ಗಳು ಇದಕ್ಕೆ ಪರ್ಯಾಯ ಮಾರ್ಗ ಕಂಡುಕೊಳ್ಳಲಿದ್ದಾರೆ’ ಎಂದಿದ್ದಾರೆ.

‘ಕೋವಿಡ್‌ ಬಿಕ್ಕಟ್ಟಿನ ನಡುವೆಯೂ ಕ್ರಿಕೆಟ್‌ ಆಡುವ ಬಹುದೊಡ್ಡ ಸವಾಲು ನಮ್ಮ ಎದುರಿಗಿದೆ. ಇದನ್ನು ಮೀರಿ ನಿಲ್ಲುವ ಅದಮ್ಯ ವಿಶ್ವಾಸ ಆಟಗಾರರಲ್ಲಿದೆ. ಐಸಿಸಿಯ ಹೊಸ ನಿಯಮಾವಳಿಗಳ ಬಗ್ಗೆ ಆಟಗಾರರಿಗೆ ಈಗಾಗಲೇ ಮಾಹಿತಿ ನೀಡಲಾಗಿದೆ. ಪಂದ್ಯಗಳ ವೇಳೆ ಅವರು ಈ ನಿಯಮಗಳನ್ನು ಚಾಚೂ ತಪ್ಪದೆ ಪಾಲಿಸಲಿದ್ದಾರೆ’ ಎಂದೂ ಪಾಕಿಸ್ತಾನದ ಹಿರಿಯ ಸ್ಪಿನ್ನರ್‌ ನುಡಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.