ಮುಂಬೈ: ಮುಂಬೈ ಕ್ರಿಕೆಟಿಗ ಪೃಥ್ವಿ ಶಾ ಅವರು ಸೋಮವಾರ ಮಹಾರಾಷ್ಟ್ರ ತಂಡವನ್ನು ಸೇರ್ಪಡೆಯಾಗಿದ್ದಾರೆ. ಮುಂಬರುವ ದೇಶಿ ಕ್ರಿಕೆಟ್ ಋತುವಿನಲ್ಲಿ ಅವರು ಮಹಾರಾಷ್ಟ್ರ ತಂಡದಲ್ಲಿ ಆಡುವರು ಎಂದು ರಾಜ್ಯ ಕ್ರಿಕೆಟ್ ಸಂಸ್ಥೆ ತಿಳಿಸಿದೆ.
ಬೇರೆ ರಾಜ್ಯದ ತಂಡಕ್ಕೆ ತೆರಳಲು ತಮಗೆ ನಿರಾಕ್ಷೇಪಣಾ ಪತ್ರ (ಎನ್‌ಒಸಿ) ನೀಡಬೇಕು ಎಂದು ಪೃಥ್ವಿ ಅವರು ಹೋದ ತಿಂಗಳು ಮುಂಬೈ ಕ್ರಿಕೆಟ್ ಸಂಸ್ಥೆಗೆ ಮನವಿಪತ್ರ ಸಲ್ಲಿಸಿದ್ದರು.
ಫಿಟ್‌ನೆಸ್ ಕೊರತೆ ಮತ್ತು ಅಶಿಸ್ತಿನ ಕಾರಣಕ್ಕಾಗಿ ಮುಂಬೈ ರಣಜಿ ಮತ್ತು ದುಲೀಪ್ ಟ್ರೋಫಿ ತಂಡಗಳಿಂದ ಅವರಿಗೆ ಅರ್ಧಚಂದ್ರ ನೀಡಲಾಗಿತ್ತು. ಹೋದ ಸಲದ ಸೈಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿ ಕ್ರಿಕೆಟ್ ಟೂರ್ನಿಯ ಫೈನಲ್‌ನಲ್ಲಿ ಮಧ್ಯಪ್ರದೇಶ ಎದುರು ಅವರು ಆಡಿದ್ದರು. ಮುಂಬೈ ಪರವಾಗಿ ಅವರು ಆಡಿದ ಕೊನೆಯ ಪಂದ್ಯ ಅದಾಗಿತ್ತು.
‘ಭಾರತ ತಂಡದ ಆಟಗಾರ ಕೂಡ ಆಗಿರುವ ಆರಂಭಿಕ ಬ್ಯಾಟರ್ ಪೃಥ್ವಿ ಶಾ ಅವರು ಮುಂಬೈ ಕ್ರಿಕೆಟ್ ಸಂಸ್ಥೆಯಿಂದ ಅಧಿಕೃತವಾಗಿ ಹೊರನಡೆದಿದ್ದಾರೆ. ಅವರು ಈಗ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಸೇರ್ಪಡೆಗೊಂಡಿದ್ದಾರೆ’ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಪೃಥ್ವಿ ಅವರು ಭಾರತ ತಂಡದಲ್ಲಿ ಐದು ಟೆಸ್ಟ್, ಆರು ಏಕದಿನ ಮತ್ತು ಒಂದು ಟಿ20 ಪಂದ್ಯದಲ್ಲಿ ಆಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.